ಬೆಂಗಳೂರು: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಚಂದ್ರೇಗೌಡ (88) ಅವರು ಮಂಗಳವಾರ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ.
ಗಣ್ಯರ ಸಂತಾಪ:ರಾಮಚಂದ್ರೇಗೌಡರ ನಿಧನಕ್ಕೆ ರಾಜ್ಯದ ರಾಜಕೀಯ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, “ರಾಮಚಂದ್ರೇಗೌಡರ ನಿಧನದ ಸುದ್ದಿ ತೀವ್ರ ದುಃಖ ತಂದಿದೆ. ರಾಜ್ಯದ ಅಭಿವೃದ್ಧಿ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಅವರು ನೀಡಿದ ಕೊಡುಗೆ ಅಪಾರ. ಅವರೊಬ್ಬ ಸರಳ ಮತ್ತು ಸಜ್ಜನ ರಾಜಕಾರಣಿಯಾಗಿದ್ದರು. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ,” ಎಂದು ಪ್ರಾರ್ಥಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಸುದೀರ್ಘ ಕಾಲದ ಒಡನಾಡಿಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. “ನನ್ನ ಮತ್ತೋರ್ವ ಸೋದರನನ್ನು ನಾನು ಕಳೆದುಕೊಂಡಿದ್ದೇನೆ. ಜನಸಂಘದ ದಿನಗಳಿಂದಲೂ ಹೆಗಲಿಗೆ ಹೆಗಲು ಕೊಟ್ಟು ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ ಹೋರಾಟದ ದಿನಗಳು ಕಣ್ಣಮುಂದೆ ಸುಳಿಯುತ್ತಿವೆ. ನನ್ನ ಸಚಿವ ಸಂಪುಟದ ಸಹೋದ್ಯೋಗಿಯಾಗಿ ಅವರ ದಕ್ಷತೆಯನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಅವರ ಅಗಲಿಕೆ ವೈಯಕ್ತಿಕವಾಗಿ ನನಗೂ ಮತ್ತು ಪಕ್ಷಕ್ಕೆ ತುಂಬಲಾರದ ನಷ್ಟ.” ಎಂದು ಭಾವುಕರಾಗಿ ನುಡಿದಿದ್ದಾರೆ.
ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ:ರಾಮಚಂದ್ರೇಗೌಡರು ಕರ್ನಾಟಕದಲ್ಲಿ ಬಿಜೆಪಿ ಬೆಳೆದು ಬಂದ ಹಾದಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು.ಜನಸಂಘದ ಕಾಲದಿಂದಲೂ ಸಕ್ರಿಯರಾಗಿದ್ದ ಅವರು, ವೈದ್ಯಕೀಯ ಶಿಕ್ಷಣ ಸೇರಿದಂತೆ ವಿವಿಧ ಪ್ರಮುಖ ಇಲಾಖೆಗಳ ಸಚಿವರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದರು. ಅವರ ನಿಧನದಿಂದ ರಾಜ್ಯ ರಾಜಕೀಯದ ಒಂದು ಹಿರಿಯ ಕೊಂಡಿ ಕಳಚಿದಂತಾಗಿದೆ.









































