ಬೆಂಗಳೂರು: ದೇಶದ ಅಭಿವೃದ್ಧಿ ದೃಷ್ಟಿಯಿಂದ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಕಲ್ಪಿಸುವುದು ಅಗತ್ಯ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅಭಿಪ್ರಾಯಪಟ್ಟರು.
ನ್ಯಾಷನಲ್ ಕೊಯಿಲಿಷನ್ ಫಾರ್ ವಿಮೆನ್ ರಿಸರ್ವೇಷನ್, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯುಎ), ದುಡಿಯುವ ಮಹಿಳೆಯರ ಸಮನ್ವಯ ಸಮಿತಿ, ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಆಗ್ರಹ ಸಭೆ’ ಉದ್ಘಾಟಿಸಿ ಅವರು ಮಾತನಾಡಿದರು.ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. ಆದರೆ, ಇಲ್ಲಿ ಸ್ವತಂತ್ರವಾಗಿ ಕಾನೂನು ರಚಿಸುವ ಅಧಿಕಾರವಿಲ್ಲ. ಕಾನೂನು ಮಾಡುವ ನಿಜವಾದ ಅಧಿಕಾರ ಇರುವುದು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಾತ್ರ. ಕಾನೂನು ರಚನೆ, ಅದರ ಅನುಷ್ಠಾನ ಮತ್ತು ಉಲ್ಲಂಘನೆಗೆ ಶಿಕ್ಷೆ ವಿಧಿಸುವ ಸರ್ವಾಧಿಕಾರವೇ ನೈಜ ರಾಜಕೀಯ ಶಕ್ತಿಯಾಗಿದ್ದು, ಚಾರಿತ್ರಿಕವಾಗಿ ಈ ನಿರ್ಣಾಯಕ ಪ್ರಕ್ರಿಯೆಯಿಂದ ಮಹಿಳೆಯರನ್ನು ಹೊರಗಿಟ್ಟಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದರು.ಮಹಿಳೆಯರಿಗೆ ರಾಜಕೀಯ ಮತ್ತು ಆರ್ಥಿಕ ಶಕ್ತಿ ಲಭಿಸದಿದ್ದರೆ ಅವರು ದ್ವಿತೀಯ ದರ್ಜೆಯ ನಾಗರಿಕರಾಗಿ ಬದುಕಬೇಕಾಗುತ್ತದೆ.ಜಗತ್ತಿನಾದ್ಯಂತ ಶೇಕಡ 50ರಷ್ಟಿರುವ ಮಹಿಳಾ ಜನಸಂಖ್ಯೆಯನ್ನು ಪ್ರಮುಖ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಿಂದ ಹೊರಗಿಟ್ಟು ಸಮಾನತೆಯ ಸಮಾಜ ನಿರ್ಮಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾವುದೇ ದೇಶದಲ್ಲಿ ಶೇಕಡ 50ರಷ್ಟಿರುವ ಮಹಿಳೆಯರನ್ನು ಪ್ರಮುಖ ಜವಾಬ್ದಾರಿಗಳಿಂದ ದೂರವಿಟ್ಟು ಪ್ರಗತಿ ಸಾಧಿಸುತ್ತೇವೆ ಎಂದರೆ ಅದು ಕೇವಲ ಭ್ರಮೆಯಷ್ಟೆ. ಮೂರು ದಶಕಗಳಿಂದ ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿಗಾಗಿ ನಿರಂತರ ಹೋರಾಟ ನಡೆಯುತ್ತಿದ್ದರೂ, ಪುರುಷ ಪ್ರಧಾನ ಸಮಾಜವು ಒಂದಲ್ಲ ಒಂದು ನೆಪವೊಡ್ಡಿ ಮುಂದೂಡುತ್ತಲೇ ಬಂದಿದೆ. ಈಗ ಕ್ಷೇತ್ರ ಮರುವಿಂಗಡಣೆ, ಒಬಿಸಿ ಮೀಸಲಾತಿ ನೆಪಗಳನ್ನು ಇಟ್ಟುಕೊಂಡು ವಿಳಂಬಗೊಳಿಸಲಾಗುತ್ತಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಸಮಾನ ಮನಸ್ಕರೆಲ್ಲರೂ ಒಂದಾಗಿ, ಪ್ರಬಲ ಜನಾಭಿಪ್ರಾಯವನ್ನು ರೂಪಿಸಿ, ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರಬೇಕಾಗಿದೆ ಎಂದು ಕರೆ ನೀಡಿದರು.ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಚಂದ್ರಕುಮಾರಿ ಅಧ್ಯಕ್ಷತೆ ವಹಿಸಿದ್ದರು. ವಿಮೋಚನಾ ಸಂಸ್ಥೆಯ ಆಶಾ ರಮೇಶ್, ಕೆಪಿಆರ್‌ಎಸ್‌ನ ಎನ್.ಪ್ರಭಾ ಹಾಜರಿದ್ದರು.
ಮಹಿಳಾ ಮೀಸಲಾತಿ ಏಕೆ ಅನಿವಾರ್ಯ?.
ಶಾಸನಸಭೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸುವುದರಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬಹುದು ಎಂದು ಆಶಿಸಿದ ನಾಗಮೋಹನದಾಸ್ ಪ್ರಮುಖವಾಗಿ ಮೂರು ಅಂಶಗಳನ್ನು ಉಲ್ಲೇಖಿಸಿದರು. ಆಡಳಿತದ ಸುಧಾರಣೆ: ಆಡಳಿತ ವ್ಯವಸ್ಥೆ ಮತ್ತು ಕಾನೂನು ಸುವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಹೆಚ್ಚಾದಾಗ ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತ ಸಾಧ್ಯವಾಗುತ್ತದೆ. ಮೂಲಸೌಕರ್ಯಗಳಿಗೆ ಆದ್ಯತೆ: ಆಹಾರ ಆರೋಗ್ಯ ಶಿಕ್ಷಣ ಕುಡಿಯುವ ನೀರು ಮತ್ತು ವಸತಿಯಂತಹ ಜನಸಾಮಾನ್ಯರ ಕನಿಷ್ಠ ಅಗತ್ಯತೆಗಳಿಗೆ ಮಹಿಳಾ ಜನಪ್ರತಿನಿಧಿಗಳು ಆದ್ಯತೆ ನೀಡುತ್ತಾರೆ. ತಾರತಮ್ಯ ನಿವಾರಣೆ: ಶತಮಾನಗಳಿಂದ ನಡೆದು ಬಂದಿರುವ ಸಾಮಾಜಿಕ ಅಸಮಾನತೆ ಸರಿಪಡಿಸಲು ಮತ್ತು ತಾರತಮ್ಯ ತೊಡೆದುಹಾಕಲು ರಾಜಕೀಯ ಪ್ರಾತಿನಿಧ್ಯವೇ ಏಕೈಕ ದಾರಿ.









































