ವಾಷಿಂಗ್ಟನ್: ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುವಭಾರತ ಮತ್ತು ಚೀನಾ ಸೇರಿದಂತೆ ಪ್ರಮುಖ ದೇಶಗಳ ಮೇಲೆ ವಿಧಿಸಲು ಉದ್ದೇಶಿಸಲಾಗಿದ್ದ ಶೇ 500 ರಷ್ಟು ಭಾರಿ ಸುಂಕದ ಪ್ರಸ್ತಾವನೆಯನ್ನು ಅಮೆರಿಕ ಸಂಸದರು ಸಡಿಲಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಈ ಮೂಲಕ ಭಾರತ ಮತ್ತು ಚೀನಾ ದೇಶಗಳು ಭಾರಿ ಸುಂಕದ ಹೊರೆಯಿಂದ ನಿರಾಳಗೊಂಡಿವೆ.ರಷ್ಯಾ ಮೇಲಿನ ನಿರ್ಬಂಧಗಳ ಹೊಸ ತಿದ್ದುಪಡಿ ವಿಧೇಯಕವನ್ನು ಅಮೆರಿಕದ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಇದರ ಅನ್ವಯ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇಂಧನ ಆಮದು ದೇಶಗಳ ಮೇಲೆ ಗರಿಷ್ಠ ಶೇ 100ರವರೆಗೆ ಮಾತ್ರ ಸುಂಕ ವಿಧಿಸುವ ಅಧಿಕಾರವಿದೆ.ರಷ್ಯಾ ಮೇಲೆ ಕಠಿಣ ನಿರ್ಬಂಧ ಹೇರುವುದು ಮತ್ತು ಸುಂಕದ ಅಸ್ತ್ರ ಬಳಸಿ ಭಾರತ ಹಾಗೂ ಚೀನಾ ದೇಶಗಳು ರಷ್ಯಾ ಮೇಲಿನ ಇಂಧನ ಅವಲಂಬನೆಯನ್ನು ತಗ್ಗಿಸುವಂತೆ ಒತ್ತಡ ಹೇರುವುದು ಈ ವಿಧೇಯಕದ ಮುಖ್ಯ ಉದ್ದೇಶವಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿ ಕೊನೆಗಾಣಿಸಲು, ರಷ್ಯಾ ಮೇಲೆ ಆರ್ಥಿಕ ಒತ್ತಡ ಹೇರಲು ಈ ನಿರ್ಬಂಧಗಳು ಸಹಕಾರಿಯಾಗಲಿವೆ ಎಂದು ಅಮೆರಿಕ ಹೇಳಿದೆ. ಈ ಯುದ್ಧದಲ್ಲಿ ಈಗಾಗಲೇ ಸುಮಾರು 20 ಲಕ್ಷ ಜನರು ಮೃತಪಟ್ಟಿದ್ದು, ಉಕ್ರೇನ್‌ಗೆ ಸಾಕಷ್ಟು ಆಸ್ತಿಪಾಸ್ತಿ ನಷ್ಟವಾಗಿದೆ.ಸದ್ಯ ಚೀನಾ, ಭಾರತ, ಶ್ಲೋವಾಕಿಯಾ, ಹಂಗೇರಿ ಮತ್ತು ಅಜರ್‌ಬೈಜಾನ್ ರಷ್ಯಾದ ಕಚ್ಚಾ ತೈಲವನ್ನು ಅತಿ ಹೆಚ್ಚು ಖರೀದಿಸುವ ಮೊದಲ ಐದು ದೇಶಗಳಾಗಿವೆ. ಇನ್ನು ಚೀನಾ, ಫ್ರಾನ್ಸ್, ಜಪಾನ್, ಹಂಗೇರಿ ಮತ್ತು ಬೆಲ್ಟಿಯಂ ದೇಶಗಳು ರಷ್ಯಾದ ನೈಸರ್ಗಿಕ ಅನಿಲದ ಪ್ರಮುಖ ಆಮದುದಾರರಾಗಿವೆ.ಒಂದು ವೇಳೆ ಟ್ರಂಪ್ ಈ ದೇಶಗಳ ಮೇಲೆ ಶೇ 500ರಷ್ಟು ಭಾರಿ ಸುಂಕ ವಿಧಿಸಿದ್ದರೆ, ಈಗಾಗಲೇ ಏರಿಳಿತ ಕಾಣುತ್ತಿರುವ ಅಮೆರಿಕದ ಜತೆಗಿನ ಭಾರತದ ವ್ಯಾಪಾರ ಸಂಬಂಧ ಮತ್ತಷ್ಟು ಹಳಸುವ ಭೀತಿ ಇತ್ತು.










































