ಅಯೋಧ್ಯೆ ಲಕ್ಕೋ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತನ್ನ ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.ಇತ್ತೀಚೆಗೆ ನಡೆದ ದೇಣಿಗೆ ಕಳ್ಳತನದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಟ್ರಸ್ಟ್. ಇನ್ನು ಮುಂದೆ ರಾಮ ಮಂದಿರಕ್ಕೆ ಬರುವ ಆದಾಯದ ಸಂಪೂರ್ಣ ವಿವರಗಳನ್ನು ಪ್ರತಿ ತಿಂಗಳು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ.
ಏನೇನು ವಿವರಗಳು ಸಿಗಲಿವೆ?
ಭಕ್ತರು ನೀಡುವ ದೇಣಿಗೆ ಹಣದ ದುರುಪಯೋಗವಾಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಮೂಲಗಳಿಂದ ಸಂಗ್ರಹವಾಗುವ ದೇಣಿಗೆ, ಬ್ಯಾಂಕ್ ಖಾತೆಗಳಲ್ಲಿರುವ ಹಣಕ್ಕೆ ಬರುವ ಬಡ್ಡಿ, ದೇಣಿಗೆ ಹುಂಡಿ ಹಾಗೂ ಕೌಂಟರ್‌ಗಳ ಮೂಲಕ ಬರುವ ಆದಾಯದ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಇದರೊಂದಿಗೆ, ವಿದೇಶಿ ಕರೆನ್ಸಿ ನಿಯಮಗಳ (FCRA) ಅಡಿಯಲ್ಲಿ ಸ್ವೀಕರಿಸಲಾದ ನಿಧಿಯ ವಿವರಗಳನ್ನೂ ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.
ಟ್ರಸ್ಟ್ ಆಡಳಿತ ಮಂಡಳಿಯಲ್ಲಿ ಬದಲಾವಣೆ:ದೇಣಿಗೆ ವಿವರ ಪ್ರಕಟಿಸುವ ನಿರ್ಧಾರದ ಬೆನ್ನಲ್ಲೇ ಟ್ರಸ್ಟ್‌ನ ಆಡಳಿತ ಮಂಡಳಿಯಲ್ಲೂ ಪ್ರಮುಖ ಬದಲಾವಣೆಗಳು ನಡೆಯುತ್ತಿವೆ. ವರದಿಗಳ ಪ್ರಕಾರ, ಜುಲೈ 22 ರಂದು ಡಾ. ಕೃಷ್ಣ ಮೋಹನ್ ಅವರು ಟ್ರಸ್ಟ್‌ನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ. ಜುಲೈ 6 ರಂದು ನಡೆದ ಟ್ರಸ್ಟ್ ಸಭೆಯಲ್ಲಿ ಅವರನ್ನು ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲು ನಿರ್ಧರಿಸಲಾಗಿತ್ತು.
ಈ ಹೊಸ ಕ್ರಮಗಳ ಮೂಲಕ ರಾಮ ಮಂದಿರದ ಆರ್ಥಿಕ ವ್ಯವಹಾರಗಳನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸುವುದು ಟ್ರಸ್ಟ್‌ನ ಮುಖ್ಯ ಉದ್ದೇಶವಾಗಿದೆ.









































