ಬೆಂಗಳೂರು: ಕರ್ನಾಟಕವನ್ನು ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ಜಾಗತಿಕ ಕೇಂದ್ರವನ್ನಾಗಿಸುವ ಮಹತ್ವಾಕಾಂಕ್ಷಿ ಗುರಿಯೊಂದಿಗೆ ರಾಜ್ಯದಲ್ಲಿ ದೇಶದ ಮೊದಲ ಸರ್ಕಾರಿ ಎಐ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎ೦ದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಣೆ ಮಾಡಿದ್ದಾರೆ.ನೆಲಮಂಗಲ ಸಮೀಪದ ಮಾದಾವರದಲ್ಲಿರುವ ಬಿಐಇಸಿಯಲ್ಲಿ ನಡೆದ Google I/O Connect 2026 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆ ವಿಶ್ವದ ಎಲ್ಲ ಕ್ಷೇತ್ರಗಳಲ್ಲೂ ಕ್ರಾಂತಿ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿಯ ಪ್ರಮುಖ ಆಧಾರ ಎಐ ಆಗಲಿದೆ ಎಂದು ಹೇಳಿದರು. ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎಐ ಬಳಕೆಯನ್ನು ವಿಸ್ತರಿಸಲು ವಿಶೇಷ Al ಹಬ್ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. ವಿದ್ಯಾರ್ಥಿಗಳಿಂದ ಹಿಡಿದು ರೈತರವರೆಗೆ ಎಐ ತಂತ್ರಜ್ಞಾನದ ಪ್ರಯೋಜನ ತಲುಪುವಂತೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದೆ ಎಂದರು.ಕರ್ನಾಟಕದಲ್ಲಿ ದೇಶದ ಮೊದಲ ಸರ್ಕಾರಿ ಎಐ ವಿಶ್ವವಿದ್ಯಾಲಯ ಆರಂಭಿಸುವ ಮೂಲಕ ಎಐ ಸಂಶೋಧನೆ, ಕೌಶಲ್ಯಾಭಿವೃದ್ಧಿ ಹಾಗೂ ನವೋದ್ಯಮಗಳಿಗೆ ಉತ್ತೇಜನ ನೀಡಲಾಗುವುದು. ಈ ಮೂಲಕ ಬೆಂಗಳೂರು ಮತ್ತು ಕರ್ನಾಟಕವನ್ನು ಜಾಗತಿಕ ಎಐ ಕೇಂದ್ರವನ್ನಾಗಿ ರೂಪಿಸುವುದು ಸರ್ಕಾರದ ಗುರಿಯಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಸರ್ಕಾರಿ ಸೇವೆಗಳನ್ನು ಇನ್ನಷ್ಟು ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ಒದಗಿಸಲು ಎಐ ತಂತ್ರಜ್ಞಾನ ಬಳಸಲಾಗುವುದು ಎಂದು ಅವರು ಹೇಳಿದರು. ಆರೋಗ್ಯ ಕ್ಷೇತ್ರದಲ್ಲಿ ರೋಗ ಪತ್ತೆ ಮತ್ತು ಚಿಕಿತ್ಸೆಗೆ ಎಐ ನೆರವು, ಕೃಷಿ ಕ್ಷೇತ್ರದಲ್ಲಿ ರೈತರಿಗೆ ಎಐ ಆಧಾರಿತ ಸಲಹೆ, ಸಾರ್ವಜನಿಕ ಸೇವೆಗಳಲ್ಲಿ ವೇಗ ಮತ್ತು ಪಾರದರ್ಶಕತೆ ಹೆಚ್ಚಿಸಲು ಎಐ ಬಳಕೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಎಐ ಶಿಕ್ಷಣ ಮತ್ತು ಕೌಶಲ್ಯ ತರಬೇತಿಯನ್ನು ವಿಸ್ತರಿಸಲಾಗುವುದು. ಎಐ ಸ್ಟಾರ್ಟ್ ಅಪ್‌ಗಳಿಗೆ ಸರ್ಕಾರ ವಿಶೇಷ ಉತ್ತೇಜನ ನೀಡಲಿದ್ದು, ಗೂಗಲ್ ಸೇರಿದಂತೆ ಜಾಗತಿಕ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಸಹಭಾಗಿತ್ವ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಇದರ ಜೊತೆಗೆ ರಾಜ್ಯದಲ್ಲಿ ಡೇಟಾ ಸೆಂಟರ್‌ಗಳ ವಿಸ್ತರಣೆ, ಎಐ ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡುವ ಯೋಜನೆಗಳನ್ನು ಜಾರಿಗೆ ತರಲಾಗುವುದು. ಜಾಗತಿಕ ತಂತ್ರಜ್ಞಾನ ಕಂಪನಿಗಳನ್ನು ಕರ್ನಾಟಕಕ್ಕೆ ಆಕರ್ಷಿಸಲು ಸರ್ಕಾರ ವಿಶೇಷ ನೀತಿಗಳನ್ನು ರೂಪಿಸುತ್ತಿದೆ ಎಂದು ಹೇಳಿದರು. ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದ್ದು, ಎಐ ಮೂಲಕ ಆಡಳಿತವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದು ಸರ್ಕಾರದ ಉದ್ದೇಶವಾಗಿದೆ. ಬೆಂಗಳೂರು ವಿಶ್ವದ ಪ್ರಮುಖ ಎಐ ಕೇಂದ್ರವಾಗಿ ಬೆಳೆಯಬೇಕು ಎಂಬುದು ಸರ್ಕಾರದ ಸಂಕಲ್ಪ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.









































