ಅಟ್ಲಾಂಟಾ: ಇಂಗ್ಲೆಂಡ್ ಬಳಗಕ್ಕೆ ಆರು ದಶಕಗಳ ಪ್ರಶಸ್ತಿ ಬರ ನೀಗಿಸುವ ಛಲ. ಸತತ ಎರಡನೇ ಬಾರಿ ಕಪ್ ಗೆಲ್ಲುವ ಕನಸು ಅರ್ಜೆಂಟೀನಾಕ್ಕೆ. ಇತ್ತಂಡಗಳ ಮುಖಾಮುಖಿಯು ರೋಚಕತೆ ತುತ್ತತುದಿ ತಲುಪುವ ನಿರೀಕ್ಷೆ ಫುಟ್‌ಬಾಲ್ ಪ್ರಿಯರದ್ದು.
ಬುಧವಾರ ತಡರಾತ್ರಿ ನಡೆಯಲಿರುವ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಎರಡನೇ ಸೆಮಿಫೈನಲ್ ಇಂಗ್ಲೆಂಡ್ ಮತ್ತು ಅರ್ಜೆಂಟೀನಾದ ‘ಹಳೆಯ ವೈರತ್ವ’ ಮರುಕಳಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಅಲ್ಲದೇ ಅರ್ಜೆಂಟೀನಾದ ದಿಗ್ಗಜ ಲಯೊನೆಲ್ ಮೆಸ್ಸಿ ಮತ್ತು ಇಂಗ್ಲೆಂಡ್ ‘ಗೋಲ್ ಯಂತ್ರ’ ಜೂಡ್ ಬೆಲ್ಲಿಂಗಮ್ ಅವರ ಜಿದ್ದಾಜಿದ್ದಿಗೂ ಈ ಪಂದ್ಯ ವೇದಿಕೆಯಾಗಲಿದೆ. 2002ರ ವಿಶ್ವಕಪ್ ನಂತರ ಎರಡೂ ತಂಡಗಳು ಸ್ಪರ್ಧಾತ್ಮಕ ಪಂದ್ಯದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳ ಈ ಹಿಂದಿನ ಮುಖಾಮುಖಿಗಳಲ್ಲಿ ಕೆಲವು ಅಚ್ಚಳಿಯದ ನೆನಪುಗಳು ಇತಿಹಾಸದ ಪುಟಗಳಲ್ಲಿ ಬೆಚ್ಚಗೆ ಕುಳಿತಿವೆ.1986ರಲ್ಲಿ ಉಭಯ ತಂಡಗಳ ಹಣಾಹಣಿಯಲ್ಲಿ ಅರ್ಜೆಂಟೀನಾದ ದಂತಕಥೆ ಡಿಯೆಗೋ ಮರಡೋನಾ ಅವರ ‘ಹ್ಯಾಂಡ್ ಆಫ್ ಗಾಡ್’ ಘಟನೆ ದಾಖಲಾಗಿತ್ತು. 1998ರಲ್ಲಿ ಡಿಯೆಗೋ ಸಿಮಿಯೋನ್ ಅವರೊಂದಿಗೆ ಘರ್ಷಣೆಗಿಳಿದಿದ್ದ ಇಂಗ್ಲೆಂಡ್ ತಾರೆ ಡೇವಿಡ್ ಬೆಕ್‌ಹ್ಯಾಮ್‌ಗೆ ಕೆಂಪು ಕಾರ್ಡ್ ದರ್ಶನ ಮಾಡಿದ್ದರು. ಅಲ್ಲದೇ ಉಭಯ ದೇಶಗಳ ನಡುವಿನ ಭೌಗೋಳಿಕ-ರಾಜಕೀಯ ವಿಷಯವಾದ ಫೋಕ್‌ಲ್ಯಾಂಡ್ ದ್ವೀಪಗಳ ಮೇಲಿನ ಸಾರ್ವಭೌಮತ್ವದ ಕುರಿತ ದೀರ್ಘಕಾಲದ ವಿವಾದವೂ ಈ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿದೆ.
‘ಇದು ಒಂದು ಫುಟ್‌ಬಾಲ್ ಪಂದ್ಯವಷ್ಟೇ. ನಾನು ಹೇಳಬಹುದಾದದ್ದು ಇಷ್ಟೇ’ ಎಂದು ಸ್ವಿಟ್ಟರ್‌ಲೆಂಡ್ ವಿರುದ್ಧ ಕ್ವಾರ್ಟ‌್ರಫೈನಲ್ ಜಯ ದಾಖಲಿಸಿದ ಬಳಿಕ ಅರ್ಜೆಂಟಿನಾ ತರಬೇತುದಾರ ಲಿಯೋನೆಲ್ ಸ್ಕಲೋನಿ ಮಾರ್ಮಿಕವಾಗಿ ಹೇಳಿದ್ದರು.
ಇಂಗ್ಲೆಂಡ್ ತಂಡವು 1966ರಲ್ಲಿ ಟ್ರೋಫಿ ಗೆದ್ದ ನಂತರ ಮೊದಲ ಬಾರಿಗೆ ವಿಶ್ವಕಪ್ ಫೈನಲ್‌ಗೆ ತಲುಪಲು ಈಗ ಅವಕಾಶ ಒದಗಿಬಂದಿದೆ. ಅದಕ್ಕಾಗಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಸವಾಲನ್ನು ಮೀರಿ ನಿಲ್ಲಬೇಕಿದೆಯಷ್ಟೇ.ಇನ್ನೊಂದೆಡೆ, ಅರ್ಜೆಂಟಿನಾ ನಾಲ್ಕು ವಿಶ್ವಕಪ್‌ಗಳಲ್ಲಿ ಮೂರನೇ ಬಾರಿ ಫೈನಲ್‌ಗೆ ತಲುಪುವತ್ತ ಚಿತ್ತ ನೆಟ್ಟಿದೆ. 1962ರಲ್ಲಿ ಬ್ರೆಜಿಲ್ ಸತತ ಎರಡು ಬಾರಿ ವಿಶ್ವಕಪ್ ಜಯಿಸಿತ್ತು. ಅದೇ ಸಾಧನೆಯನ್ನು ಮತ್ತೊಮ್ಮೆ ಮಾಡಲು ಅರ್ಜೆಂಟೀನಾ ಈಗ ತುದಿಗಾಲಿನಲ್ಲಿ ನಿಂತಿದೆ.ಅರ್ಜೆಂಟೀನಾ ತಂಡವು 32 ಘಟ್ಟದಲ್ಲಿ ಕೇಪ್ ವರ್ಡ್ ತಂಡದ ಕಠಿಣ ಪೈಪೋಟಿಯನ್ನು ಮೀರಿತ್ತು 16ರ ಘಟ್ಟದಲ್ಲಿಯೂ ಈಜಿಪ್ಟ್ ಸವಾಲನ್ನು ಮೀರುವಲ್ಲಿ ಅರ್ಜೆಂಟೀನಾ ಹೆಚ್ಚುವರಿ ಸಮಯದವರೆಗೂ ಶ್ರಮಿಸಬೇಕಯಿತು. ಎಂಟರ ಘಟ್ಟದಲ್ಲಿ ಸ್ವಿಟ್ಟರ್‌ಲೆಂಡ್ ತಂಡವನ್ನು ಮಣಿಸಲೂ ನಿಗದಿಯ ಅವಧಿಯಲ್ಲಿ ಆಗಿರಲಿಲ್ಲ. ಹೆಚ್ಚುವರಿ ಅವಧಿಯಲ್ಲಿ ಫಲಿತಾಂಶ ನಿರ್ಧಾರವಾಯಿತು.ಇಂಗ್ಲೆಂಡ್ ತಂಡವು 32ರ ಹಂತದಲ್ಲಿ ಕಾಂಗೊ ರಿಪ್ಲಬಿಕ್ ವಿರುದ್ಧ; ಪ್ರಿಕ್ವಾರ್ಟ‌್ರಫೈನಲ್‌ನಲ್ಲಿ ಮೆಕ್ಸಿಕೊ ಎದುರು; ಕ್ವಾರ್ಟ‌್ರಫೈನಲ್‌ನಲ್ಲಿ ನಾರ್ವೆ ವಿರುದ್ಧ ಪ್ರಯಾಸದ ಜಯ ಸಾಧಿಸಿತು. ಈ ಗೆಲುವುಗಳಲ್ಲಿ ಹ್ಯಾರಿ ಕೇನ್ ಮತ್ತು ಜೂಡ್ ಅವರ ಕಾಣಿಕೆಯು ಅಮೂಲ್ಯವಾಗಿತ್ತು.
ಒಟ್ಟಿನಲ್ಲಿ ಈ ಬಾರಿಯ ಟೂರ್ನಿಯ ಎಲ್ಲ ಹಂತಗಳಲ್ಲಿಯೂ ಕಠಿಣ ಪೈಪೋಟಿ ಇತ್ತು. ಪ್ರಸ್ತುತ ಸೆಮಿಫೈನಲ್‌ನಲ್ಲಿ ಆಡಲಿರುವ ಘಟಾನುಘಟಿ ತಂಡಗಳ ಹಾದಿಯೂ ಸುಲಭವಾಗಿರಲಿಲ್ಲ. ಅದರಿಂದಾಗಿ ನಾಲ್ಕರ ಘಟ್ಟದಲ್ಲಿ ಕಠಿಣ ಪೈಪೋಟಿ ಕಂಡುಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಉಭಯ ತಂಡಗಳಲ್ಲಿ ಅಧಿಕ ಗೋಲು ಗಳಿಕೆ
- ಲಯೊನೆಲ್ ಮೆಸ್ಸಿ (ಅರ್ಜೆಂಟೀನಾ) – 8
- ಹ್ಯಾರಿ ಕೆನ್ (ಇಂಗ್ಲೆಂಡ್) – 6
- ಜೂಡ್ ಬೆಲ್ಲಿಂಗಮ್ (ಇಂಗ್ಲೆಂಡ್) – 6










































