ಬಿಜೆಪಿಗಿಂತ ಡಿಎಂಕೆ ಪಕ್ಷ ಭಿನ್ನವಾಗಿಲ್ಲ ಎಂದು ನಟ ವಿಜಯ್ ಹೇಳಿದ್ದಾರೆ.
ಚೆನ್ನೈ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಅಧಿಕಾರಕ್ಕೆ ತರಲು ತಮಿಳುನಾಡಿನ ಪ್ರತಿಯೊಂದು ಮನೆಗೂ ಭೇಟಿ ನೀಡುವಂತೆ ನಟ ವಿಜಯ್ ಶುಕ್ರವಾರ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಡಿಎಂಕೆ ಹಾಗೂ ತಮ್ಮ ಪಕ್ಷದ ಮಧ್ಯೆ ನೇರ ಸ್ಪರ್ಧೆ ನಡೆಯಲಿದೆ ಎಂದು ಹೇಳಿದ ಅವರು, ಡಿಎಂಕೆ ಕೂಡ ಬಿಜೆಪಿಯಷ್ಟೇ ಫ್ಯಾಸಿಸ್ಟ್ ಆಗಿದೆ ಎಂದು ಆರೋಪಿಸಿದರು.ಮೊದಲ ಬಾರಿಗೆ ವಿಜಯ್ ಅವರು ಸಾರ್ವಜನಿಕವಾಗಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಹೇಳಿದರು. ತಮಿಳುನಾಡಿನ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೋಪ ಏಕೆ ಎಂದು ಅವರು ಪ್ರಶ್ನಿಸಿದರು. “ಮೋದಿ ಜೀ, ನಿಮಗೆ ತಮಿಳುನಾಡಿನ ಬಗ್ಗೆ ಅಲರ್ಜಿ ಏಕೆ?” ಎಂದು ಅವರು ಪ್ರಶ್ನಿಸಿದರು.
ಡಿಎಂಕೆ ವಿರುದ್ಧ ವಿಜಯ್ ಗರಂ: ನಿಮ್ಮ ಆಡಳಿತದಲ್ಲಿ ಏನು ನಡೆಯುತ್ತಿದೆ? ನೀವು ಕೇಂದ್ರದ ಆಡಳಿತಾರೂಢ ಬಿಜೆಪಿಯನ್ನು ಫ್ಯಾಸಿಸ್ಟ್ ಎಂದು ಕರೆಯುತ್ತಲೇ ಇರುತ್ತೀರಿ. ಆದರೆ ಅವರಿಗಿಂತ ನೀವೇನು ಭಿನ್ನ? ನನ್ನ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗದಂತೆ ನೀವು ನನ್ನನ್ನು ತಡೆಯುತ್ತಿದ್ದೀರಿ” ಎಂದು ರಾಜ್ಯದ ಡಿಎಂಕೆ ಸರ್ಕಾರವನ್ನುದ್ದೇಶಿಸಿ ಅವರು ಹೇಳಿದರು. ತಮ್ಮ ಪಕ್ಷವು ನಡೆಸಲು ಉದ್ದೇಶಿಸಿದ ಪ್ರತಿಯೊಂದು ಸಭೆಗೂ ರಾಜ್ಯ ಸರ್ಕಾರ ಅಡೆತಡೆಗಳನ್ನು ಸೃಷ್ಟಿಸಿದೆ ಎಂದು ಅವರು ಆರೋಪಿಸಿದರು.ನಿನ್ನೆ ಮೊನ್ನೆ ಬಂದವನಾರೋ ಮುಖ್ಯಮಂತ್ರಿಯಾಗಲು ಹೊರಟಿದ್ದಾನೆ ಎಂದು ನೀವು ಹೇಳುತ್ತಿರುವಿರಿ. ಆದರೆ ನಿಮಗೆ ಬರೀ ಟಿವಿಕೆ ಪಕ್ಷದ್ದೇ ಚಿಂತೆ ಆಗಿರುವುದು ಏಕೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ರಾಜ್ಯದಲ್ಲಿ ಉತ್ತಮ ಆಡಳಿತವನ್ನು ಮರಳಿ ತರಬೇಕಾದರೆ ಡಿಎಂಕೆಯನ್ನು ಸೋಲಿಸುವುದು ಅಗತ್ಯ ಎಂದು ಅವರು ನುಡಿದರು.
ನೇರವಾಗಿ ಜನರನ್ನು ಭೇಟಿ ಮಾಡುವಂತೆ ಕಾರ್ಯಕರ್ತರಿಗೆ ಸಲಹೆ: ಜನರನ್ನು ನೇರವಾಗಿ ಭೇಟಿಯಾಗುವಂತೆ ಅವರು ಕಾರ್ಯಕರ್ತರಿಗೆ ಕರೆ ನೀಡಿದರು. ಪ್ರತಿ ಬೀದಿಗೆ, ಪ್ರತಿ ಮನೆಗೆ ಹೋಗಿ ಅವರ ಕಷ್ಟಗಳನ್ನು ಆಲಿಸಿ. ಈ ಕೆಲಸ ಮುಗಿಸುವವರೆಗೂ ವಿಶ್ರಮಿಸಬೇಡಿ. ನೀವು ಇಷ್ಟು ಮಾಡಿದರೆ ಸಾಕು, ರಾಜ್ಯದ ಪ್ರತಿ ಮನೆಯ ಮೇಲೂ ನಮ್ಮ ಅವಳಿ ಆನೆ ಮತ್ತು ವಾಗೈ ಹೂವಿನ ಧ್ವಜ ಹಾರಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಕೇಂದ್ರದ ಆಡಳಿತಾರೂಢ ಬಿಜೆಪಿ ‘ಫ್ಯಾಸಿಸ್ಟ್ ಪಕ್ಷ’ ಎಂದು ಹೇಳಲು ನಿಮಗೆ (ಡಿಎಂಕೆ) ಏನು ಅರ್ಹತೆ ಇದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ, ನೀವೇ ಜನರ ಹೋರಾಟಗಳನ್ನು ಹತ್ತಿಕ್ಕುತ್ತಿರುವಿರಿ ಎಂದ ಅವರು, ಪರಂದೂರ್ (ವಿಮಾನ ನಿಲ್ದಾಣ), ಸರ್ಕಾರಿ ನೌಕರರು, ಮೀನುಗಾರರು, ಕಾರ್ಮಿಕರ ಸಾಗಾಟ, ಸ್ಯಾಮ್ ಸಂಗ್, ಟಂಗ್ ಸ್ಟನ್ (ಗಣಿಗಾರಿಕೆ), ಇಸ್ಲಾಮಿಕ್ ಗುಂಪುಗಳ ಪ್ರತಿಭಟನೆಗಳನ್ನು ಉಲ್ಲೇಖಿಸಿದರು. ಈ ಎಲ್ಲಾ ಪ್ರತಿಭಟನೆಗಳಲ್ಲಿ ಪಕ್ಷವು ಅವರೊಂದಿಗೆ ನಿಲ್ಲುತ್ತದೆ ಎಂದು ಅವರು ಹೇಳಿದರು.
ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರು ಕೇಂದ್ರದ ಆಡಳಿತಾರೂಢ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.ನಿಮ್ಮ ರಹಸ್ಯ ಮಾಲೀಕರು ನರೇಂದ್ರ ಮೋದಿ ಎಂಬುದು ನಮಗೆ ಗೊತ್ತು. ನಾವು ಹೆದರುವುದಿಲ್ಲ. ಕೇಂದ್ರದಲ್ಲಿ ಯಾರು ಆಡಳಿತ ನಡೆಸುತ್ತಾರೆ ಎಂದು ನಾನು ಹೇಳುತ್ತಲೇ ಇದ್ದೆ. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆಯೇ? ಇಲ್ಲಿ ನಾವು ಅಧಿಕಾರದಲ್ಲಿರುವವರನ್ನು ಉಲ್ಲೇಖಿಸಿ ಮಾತನಾಡಿದ್ದೇವೆ. ಇಲ್ಲೇನು ಎಐಎಡಿಎಂಕೆ ಅಧಿಕಾರದಲ್ಲಿದೆಯೇ? ಎಂದು ಅವರು ಕೇಳಿದರು.
ಸರ್ಕಾರದ ನೇತೃತ್ವ ವಹಿಸಿದವರ ಹೆಸರು ಹೇಳಲು ಹೆದರುತ್ತಿದ್ದಾರೆ ಎಂಬ ಬಿಜೆಪಿ ಮತ್ತು ಡಿಎಂಕೆ ಕಾರ್ಯಕರ್ತರ ಆರೋಪಗಳಿಗೆ ವಿಜಯ್ ಈ ಮೂಲಕ ಉತ್ತರ ನೀಡಿದರು.ತಮಿಳರು ಮತ್ತು ತಮಿಳುನಾಡಿನ ಬಗ್ಗೆ ನಿಮಗೆ ಅಲರ್ಜಿ ಯಾಕೆ? ಮೋದಿಜಿ?: ನರೇಂದ್ರ ಮೋದಿ ಜಿ… ಯಾಕೆ? ತಮಿಳರು ಮತ್ತು ತಮಿಳುನಾಡಿನ ಬಗ್ಗೆ ನಿಮಗೆ ಅಲರ್ಜಿ ಯಾಕೆ? ನೀವು ನಮ್ಮಿಂದ ಜಿಎಸ್ಟಿ (ನಮ್ಮಿಂದ) ಸಂಗ್ರಹಿಸುತ್ತೀರಿ. ಆದರೆ ಲೋಕಸಭಾ ಸ್ಥಾನಗಳ ಡಿಲಿಮಿಟೇಶನ್ ಮೂಲಕ ನೀವು ರಾಜ್ಯದ ರಾಜಕೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವಿರಿ. ನೀವು “ಒಂದು ರಾಷ್ಟ್ರ ಒಂದು ಚುನಾವಣೆ” ನೀತಿಯನ್ನು ಪ್ರಸ್ತಾಪಿಸಿದಾಗ, ನಿಮ್ಮ ಉದ್ದೇಶ ಏನು ಎಂಬುದು ನಮಗೆ ಅರ್ಥವಾಗಿದೆ. ಒಂದು ವಿಷಯವನ್ನು ನಾವು ಹೇಳಲು ಬಯಸುತ್ತೇವೆ. ದಯವಿಟ್ಟು ತಮಿಳುನಾಡಿನೊಂದಿಗೆ ಸೂಕ್ಷ್ಮವಾಗಿ ವರ್ತಿಸಿ. ಹಲವಾರು ರಾಜಕಾರಣಿಗಳ ರಾಜಕೀಯ ಜೀವನವನ್ನು ಕೊನೆಗಾಣಿಸಿದ ತಮಿಳುನಾಡು ಅನೇಕರಿಗೆ ದುಬಾರಿ ಪಾಠಗಳನ್ನು ಕಲಿಸಿದೆ” ಎಂದು ನಟ ವಿಜಯ್ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಟಿವಿಕೆ ಸರ್ಕಾರವು ನಿಜವಾದ ಜನರ ಪ್ರಜಾಪ್ರಭುತ್ವವಾಗಲಿದೆ ಎಂದು ಅವರು ತಮಿಳುನಾಡಿನ ಜನರಿಗೆ ಭರವಸೆ ನೀಡಿದರು. ಟಿವಿಕೆ ಸರ್ಕಾರ ಸ್ಥಾಪನೆಯಾದರೆ ಅದು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲಿದೆ, ರಾಜ್ಯದ ಕಟ್ಟಕಡೆಯ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಹಾಗೂ ಇದು ತಮಿಳುನಾಡನ್ನು ರಕ್ಷಿಸಲಿದೆ ಎಂದು ಅವರು ಹೇಳಿದರು.ತಮ್ಮ ಪಕ್ಷದ ಸಿದ್ಧಾಂತಗಳನ್ನು ವಿವರಿಸಿದ ಅವರು, ರಾಜಕೀಯದ ಮೂಲಭೂತ ತತ್ವಗಳೊಂದಿಗೆ ಯಾವತ್ತಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.ಪೆರಿಯಾರ್ ಅವರ ಸಾಮಾಜಿಕ ನ್ಯಾಯ, ಕಾಮರಾಜರ್ ಅವರ ಪ್ರಾಮಾಣಿಕ ಆಡಳಿತ, ಅಂಬೇಡ್ಕರ್ ಅವರ ಸಮಾನ ನ್ಯಾಯ ಮತ್ತು ಸಮಾನ ಅವಕಾಶಗಳು, ವೇಲು ನಾಚಿಯಾರ್ ಅವರ ಸಾಮಾಜಿಕ ಒಳಗೊಳ್ಳುವಿಕೆ, ಕೋಮು ಸೌಹಾರ್ದತೆ ಮತ್ತು ಅಂಜಲೈ ಅಮ್ಮಾಳ್ ಅವರ ನೀರಿಗಾಗಿ ಹೋರಾಟ ಈ ಎಲ್ಲವನ್ನು ಪಕ್ಷದ ಸಿದ್ಧಾಂತಗಳಾಗಿ ಮತ್ತು ನಾಯಕರಾಗಿ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದರು.
ಇವರೇ ನಮ್ಮ ಪಕ್ಷದ ಸಿದ್ಧಾಂತಿಗಳು: ತಮಿಳುನಾಡಿನ ಸ್ವಾತಂತ್ರ್ಯ ಹೋರಾಟಗಾರರಾದ ಇಬ್ಬರು ಐತಿಹಾಸಿಕ ಮಹಿಳಾ ಐಕಾನ್ಗಳನ್ನು ನಮ್ಮ ಪಕ್ಷದ ಸಿದ್ಧಾಂತಿಗಳು ಎಂದು ಘೋಷಿಸಿದ ಮೊದಲ ರಾಜಕೀಯ ಪಕ್ಷ ನಮ್ಮದು ಎಂದು ನಾನು ಹೆಮ್ಮೆಯಿಂದ ಉಲ್ಲೇಖಿಸಲು ಬಯಸುತ್ತೇನೆ” ಎಂದು ಅವರು ಹೇಳಿದರು. ವಿಲಿಯಂ ಬ್ಲೇಕ್ ನನ್ನು ಉಲ್ಲೇಖಿಸಿದ ಅವರು, “ವ್ಯಕ್ತಿಗಳು ಬರುತ್ತಾರೆ, ವ್ಯಕ್ತಿಗಳು ಹೋಗುತ್ತಾರೆ, ಆದರೆ ನಾನು ಶಾಶ್ವತವಾಗಿ ಮುಂದುವರಿಯುತ್ತೇನೆ …” ಎಂದು ಹೇಳಿದರು.ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯವು ಐತಿಹಾಸಿಕ ಚುನಾವಣೆಗೆ ಸಾಕ್ಷಿಯಾಗಲಿದೆ ಎಂದು ಹೇಳಿದರು. ಟಿವಿಕೆ ಮತ್ತು ಡಿಎಂಕೆ ಪರಸ್ಪರ ವಿರುದ್ಧವಾಗಿ ಸ್ಪರ್ಧಿಸುವುದರೊಂದಿಗೆ ದ್ವಿಮುಖ ಹೋರಾಟ ನಡೆಯಲಿದೆ ಎಂದು ಅವರು ತಿಳಿಸಿದರು.ವಕ್ಫ್ ಮಸೂದೆಯು ಮುಸ್ಲಿಮರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಎಂದು ಆರೋಪಿಸಿ ಮಸೂದೆಯನ್ನು ಹಿಂಪಡೆಯುವಂತೆ ಕೇಂದ್ರಕ್ಕೆ ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು. ಉದ್ದೇಶಿತ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಆಗ್ರಹಿಸಲಾಯಿತು.













































