ಭೂತಗಳು ರಿಷಬ್ ಶೆಟ್ಟಿ ಸ್ವತ್ತಾಗಿವೆ; ಪುರುಷೋತ್ತಮ ಬಿಳಿಮಲೆ

Picture of Savistara

Savistara

Bureau Report

ಬೆಂಗಳೂರು: ‘ನಮ್ಮ ತಂದೆ ತಾಯಿ ಭೂತಗಳ ಆರಾಧನೆಮಾಡಿಕೊಂಡು, ಮಾಂಸಾಹಾರ ಸೇವಿಸಿಕೊಂಡು ನೆಮ್ಮದಿಯಿಂದ ಇದ್ದರು. ಈಗ ಆ ಭೂತಗಳು ಕಾಂತಾರ ಚಲನಚಿತ್ರದ ಮೂಲಕ ರಿಷಬ್ ಶೆಟ್ಟಿಯ ಸ್ವತ್ತಾಗಿವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರಕಟಿಸಿದ್ದ ಆರು ಪುಸ್ತಕಗಳ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಾಮಾಜಿಕ ಜಾಲತಾಣಗಳ ಮೂಲಕ ಅವೈಜ್ಞಾನಿಕ ಆಚರಣೆಗಳ ಪ್ರಚಾರ ಮೇಲುಗೈ ಸಾಧಿಸುತ್ತಿದೆ. ಈ ಮಧ್ಯೆ ಜನರಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮಾಡುತ್ತಿರುವ ಪ್ರಯತ್ನ ಸಾಕಾಗುತ್ತಿಲ್ಲ, ನಿರಂತರವಾದ ಪ್ರಯತ್ನ ಅಗತ್ಯ ಎಂದರು.’ನನ್ನ ತಂದೆ ಕೇರಳಕ್ಕೆ ಹೋಗಿ ಜಾತಕ ಮಾಡಿಸಿದ್ದರು. ಆ ಜಾತಕದಂತೆ ನನಗೆ ವಿದ್ಯೆ ಹತ್ತುವುದಿಲ್ಲ. ತಂದೆಯನ್ನು ಕಂಡರೆ ಆಗದು ಎಂದು ಹೇಳಿದ್ದರು. ನಾನು ಶಾಲೆಗೆ ಸೇರಲು ಹೋದಾಗ ನಿನಗೆ ವಿದ್ಯೆ ಹತ್ತುವುದಿಲ್ಲ, ಮತ್ತೆ ಶಾಲೆಗೆ ಏಕೆ ಹೋಗುವೆ ಎಂದು ಪ್ರತಿ ಹಂತದಲ್ಲೂ ನನ್ನ ತಂದೆ ಪ್ರಶ್ನಿಸುತ್ತಿದ್ದರು. ಜೋತಿಷಿಗಳ ಮಾತು ಕೇಳಿದ್ದರೆ ನಾನು ಈ ಹಂತಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಅನುಭವ ವಿವರಿಸಿದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಅಧ್ಯಕ್ಷ ಡಾ. ಸಿ.ಆ‌ರ್. ಚಂದ್ರಶೇಖ‌ರ್ ಮಾತನಾಡಿ, ‘ಅಬ್ರಹಾಂ ಕೋವೂ‌ರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಫಾದರ್ ಒಬ್ಬರು ನಿಮಗಾಗಿ ಪ್ರಾರ್ಥಿಸುವೆ ಎಂದಿದ್ದರು. ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ. ನಿಮ್ಮ ಆಶೀರ್ವಾದ ಅಗತ್ಯವಿಲ್ಲ ಎಂದು ಕೋವೂ‌ರ್ ಉತ್ತರಿಸಿದ್ದರು. ಜನರು ತಮ್ಮ ಆರೋಗ್ಯದ ಬಗ್ಗೆ ಕಾರ್ಯಕಾರಣ ಸಂಬಂಧ ಕಂಡುಹಿಡಿದು ಸರಿಯಾದ ಚಿಕಿತ್ಸೆ ಪಡೆದರೆ ಮೋಸ ಹೋಗುವುದು ತಪ್ಪುತ್ತದೆ’ ಎಂದರು.ತ.ನಂ.ಜ್ಞಾನೇಶ್ವರ ಅವರ ‘ಡಾ.ಎಚ್.ನರಸಿಂಹಯ್ಯ’ ಕೃತಿ ಬಗ್ಗೆ ಡಾ.ವೈ.ಸಿ.ಕಮಲಾ, ಡಾ.ಸಿ.ಆರ್. ಚಂದ್ರಶೇಖರ್ ಅವರ ‘ನೆಮ್ಮದಿಗಾಗಿ ಮೈಂಡ್ ಮ್ಯಾನೇಜ್‌ಮೆಂಟ್’ ಕುರಿತು ಎಚ್.ಕೆ.ವಿವೇಕಾನಂದ, ಸಿದ್ರಾಮರೆಡ್ಡಿ ಇಟಗಿ ಭಾಷಾಂತರಿಸಿರುವ ‘ಅಬ್ರಹಾಂ ಕೋವೂರ್’ ಪುಸ್ತಕದ ಬಗ್ಗೆ ಎಂ.ಅಬ್ದುಲ್ ರೆಹಮಾನ್ ಪಾಷ, ಡಾ.ಆರ್.ಎನ್. ರಾಜಾನಾಯಕ್ ಅವರ ‘ಕಾಂತಿಯ ಕಿರಣಗಳು’, ಚಿದಾನಂದ ಅವರ ‘ಸೌಮ್ಯ ಸ್ವಭಾವದ ಸಿರಿನುಡಿಗಳು’, ಅಬ್ದುಲ್ ರೆಹಮಾನ್ ಪಾಷ ಭಾಷಾಂತರಿಸಿದ ‘ದೇವರು ಇದ್ದಾನೆಯೇ’ ಕೃತಿಗಳ ಬಗ್ಗೆ ಕೆ.ಬಿ. ಮಹದೇವಪ್ಪ ಮಾತನಾಡಿದರು.

[t4b-ticker]
error: Content is protected !!