ಬಂಟ್ವಾಳ: ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಅಮೃತ ಭಾರತ ಸ್ಟೇಷನ್ ಸ್ಟೀಮ್(ಎಪಿಎಸ್‌ಎಸ್) ಎರಡನೇ ಹಂತದಲ್ಲಿ ನೈಋುತ್ಯ ರೈಲ್ವೆ ವಲಯದ ನಾಲ್ಕು ರೈಲ್ವೆ ನಿಲ್ದಾಣಗಳು, ದೇಶಾದ್ಯಂತ ಒಟ್ಟು 75 ರೈಲು ನಿಲ್ದಾಣಗಳು ಅಭಿವೃದ್ಧಿಗೊಂಡಿದ್ದು, ಜು.17ರಂದು ವರ್ಚುವಲ್ ಪ್ರಕ್ರಿಯೆ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ನೈಋುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಕೊಪ್ಪಳ, ಬಾದಾಮಿ ಹಾಗೂ ಅಳ್ಳಾವರ, ಮೈಸೂರು ವಿಭಾಗದ ಬಂಟ್ವಾಳ ರೈಲ್ವೆ ನಿಲ್ದಾಣ ಇದರಲ್ಲಿ ಸೇರಿವೆ. ಅಳ್ಳಾವರ 17.2 ಕೋಟಿ ರೂ., ಬಾದಾಮಿ 15.1 ಕೋಟಿ ರೂ., ಕೊಪ್ಪಳ 21.14 ಕೋಟಿ ರೂ., ಬಂಟ್ವಾಳ 26.18 ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಾಣಗೊಂಡಿವೆ.
ಏನೇನು ಬದಲಾವಣೆ?
ನಿಲ್ದಾಣದ ಪ್ರವೇಶ ದ್ವಾರದಲ್ಲಿ ಕರಾವಳಿಯ ಸಂಸ್ಕೃತಿ ಬಿಂಬಿಸುವ ಚಿತ್ರಗಳು ಗಮನ ಸೆಳೆಯುತ್ತವೆ. ಪ್ರಯಾಣಿಕರ ನಿರೀಕ್ಷಣಾ ಮಂದಿರಗಳು ಮತ್ತು ಟಿಕೆಟ್ ಬುಕ್ಕಿಂಗ್ ಕೌಂಟರ್‌ಗಳು ಸುಧಾರಣೆಗೊಂಡಿವೆ. ಡ್ರಾಪ್ ಅಪ್ ಮತ್ತು ಪಿಕ್‌ಅಪ್ ಪ್ರದೇಶಗಳನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ವಾಹನಗಳ ಸುರಕ್ಷಿತ ಪೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸುರಕ್ಷತೆಗೆ ಹೆಚ್ಚು ಒತ್ತು ಕೊಡಲಾಗಿದೆ. ಇಡೀ ಸ್ಟೇಷನ್‌ನ್ನು ಸಿಸಿ ಕ್ಯಾಮೆರಾದಡಿ ನಿಗಾ ವಹಿಸಲಾಗಿದೆ. ಪ್ಲಾಟ್‌ಫಾರ್ಮ್ ಮೂಲಸೌಕರ್ಯ ಬಲಪಡಿಸಲು ಪ್ಲಾಟ್‌ಫಾರ್ಮ್ ಶೆಲ್ಟರ್ ಒದಗಿಸಲಾಗಿದೆ. ಇದರಿಂದ ಎಲ್ಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ಪ್ರಯಾಣಿಕರಿಗೆ ರಕ್ಷಣೆ ಸಿಗುತ್ತದೆ. ನಿಲ್ದಾಣ ಕಟ್ಟಡದ ಮುಂಭಾಗದ ಪ್ಲಾಟ್‌ಫಾರ್ಮ್ ಮೇಲ್ಮ ಸುಧಾರಣೆ ಮಾಡಲಾಗಿದ್ದು, ಸುಲಭ ಸಂಚಾರಕ್ಕೆ ಅನುಕೂಲವಾಗಿದೆ. ನಿಲ್ದಾಣದ ಒಳಾಂಗಣ ಸುಧಾರಣೆಯಲ್ಲಿ ಆಧುನಿಕ ಫರ್ನಿಚರ್, ಬೆಳಕು ವ್ಯವಸ್ಥೆ ಮತ್ತು ಲ್ಯಾಂಡ್ ಸ್ಕೆಪಿಂಗ್ ಕಾರ್ಯ ಕೈಗೊಳ್ಳಲಾಗಿದೆ.
ಪ್ರವೇಶ/ನಿರ್ಗಮನ ಕಮಾನುಗಳನ್ನು ನಿರ್ಮಿಸುವ ಮೂಲಕ ನಿಲ್ದಾಣದ ವಾಸ್ತುಶೈಲಿ ಸುಧಾರಿಸಲಾಗಿದ್ದು, ವಿಶಿಷ್ಟ ರೂಪ ನೀಡಲಾಗಿದೆ. ಉನ್ನತ ಮಟ್ಟದ ಬೆಳಕು ವ್ಯವಸ್ಥೆ, ಎಲ್‌ಇಡಿ ಪ್ಲಾಟ್‌ಫಾರ್ಮ್ ಹೆಸರು ಫಲಕಗಳು, ಎಲ್‌ಇಡಿ ಸೈನ್‌ಬೋರ್ಡ್‌ಗಳು ಮತ್ತು ಫಸಾಡ್ ಲೈಟಿಂಗ್ ಅಳವಡಿಸಲಾಗಿದೆ. ಇದರಿಂದ ದೃಶ್ಯತೆ ಹೆಚ್ಚುವುದರ ಜತೆಗೆ ವಿದ್ಯುತ್ ಉಳಿತಾಯವೂ ಸಾಧ್ಯವಾಗಿದೆ. ಪ್ರಯಾಣಿಕರ ಮಾಹಿತಿಗಾಗಿ ಕೋಚ್ ಇಂಡಿಕೇಷನ್ ಬೋರ್ಡ್‌ಗಳು, ರೈಲು ಇಂಡಿಕೇಷನ್ ಬೋರ್ಡ್‌ಗಳು, ಸಾರ್ವಜನಿಕ ಘೋಷಣೆ ವ್ಯವಸ್ಥೆ ಪಿಎ ಸಿಸ್ಟಂ ಮತ್ತು ಗಡಿಯಾರಗಳನ್ನು ಒದಗಿಸಲಾಗಿದೆ.ಎರಡನೇ ಪ್ಲಾಟ್ ಫಾರ್ಮ್‌ನಿಂದ ಒಂದನೇ ಪ್ಲಾಟ್ ಫಾರ್ಮ್ ಸಂಪರ್ಕಿಸಲು ಫೂಟ್ ಓವರ್ ಬ್ರಿಡ್ಜ್ ಮತ್ತು ಮೆಟ್ಟಿಲು ಹತ್ತಲು ಸಾಧ್ಯವಾಗದವರಿಗೆ ಲಿಫ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಪುರುಷರು ಮತ್ತು ಮಹಿಳೆಯರಿಗಲ್ಲದೆ ವಿಶಿಷ್ಟ ಚೇತನರಿಗೆಂದು ಪ್ರತ್ಯೇಕ ಶೌಚಗೃಹ ನಿರ್ಮಿಸಲಾಗಿದೆ..
ಎರಡನೇ ಪ್ಲಾಟ್ ಫಾರ್ಮ್‌ನಿಂದ ಒಂದನೇ ಪ್ಲಾಟ್ ಫಾರ್ಮ್ ಸಂಪರ್ಕಿಸಲು ಫೂಟ್ ಓವರ್ ಬ್ರಿಡ್ಜ್ ಮತ್ತು ಮೆಟ್ಟಿಲು ಹತ್ತಲು ಸಾಧ್ಯವಾಗದವರಿಗೆ ಲಿಫ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಪುರುಷರು ಮತ್ತು ಮಹಿಳೆಯರಿಗಲ್ಲದೆ ವಿಶಿಷ್ಟ ಚೇತನರಿಗೆಂದು ಪ್ರತ್ಯೇಕ ಶೌಚಗೃಹ ನಿರ್ಮಿಸಲಾಗಿದೆ.
ಪ್ರಮುಖ 5 ಬೇಡಿಕೆಗಳು
*ಬಂಟ್ವಾಳ ರೈಲ್ವೆ ಪ್ರಯಾಣಿಕ ಸ್ನೇಹಿಯಾಗಲು ಇಲ್ಲಿ ರಾಜಕೀಯ ರಹಿತವಾಗಿ ನಾಗರಿಕರ ರಕ್ಷಾ ಸಮಿತಿ ಪುನರ್ ಸಂಘಟಿಸಬೇಕಿದೆ.
*ಎರಡನೇ ಪ್ಲಾಟ್‌ಫಾರ್ಮ್‌ಗೆ ರೈಲುಗಳ ಆಗಮನ ಹೆಚ್ಚಿಸಬೇಕು.
*ಎರಡನೇ ಪ್ಲಾಟ್‌ಫಾರ್ಮ್ ಮೂಲಕ ಬಿ.ಸಿ.ರೋಡ್ ಪೇಟೆ ತಲುಪಲು ಹಾಗೂ ಬಸ್ ನಿಲ್ದಾಣ ತಲುಪಲು ನಡೆದುಕೊಂಡು ಈ ಹೋಗುವಷ್ಟು ಹತ್ತಿರವಿದ್ದು, ಭಾಗ(ಕೈಕುಂಜ)ದ ರಸ್ತೆ ಅಳವಡಿಸಬೇಕು.
*ರೈಲು ಇಳಿದು ಹೋಗುವ ಪ್ರಯಾಣಿಕರು ಗೊಂದಲಕ್ಕೆ ಒಳಗಾಗದಂತೆ ಅವರಿಗೆ ಸೂಕ್ತ ಮಾರ್ಗದರ್ಶನ ವ್ಯವಸ್ಥೆ ಕಲ್ಪಿಸಬೇಕು.
*ರೈಲ್ವೆ ನಿಲ್ದಾಣದ ಮಾಹಿತಿಗಳನ್ನು ತಿಳಿಯಲು ಆ್ಯಪ್‌ಗಳು ಇದ್ದರೂ ನಿಲ್ದಾಣದ ದೂರವಾಣಿ ಸಂಖ್ಯೆ ಸಾರ್ವಜನಿಕರಿಗೆ ದೊರಕುವಂತಿರಬೇಕು.
*ರೈಲ್ವೆ ನಿಲ್ದಾಣದಲ್ಲಿ ನಮೂದಿಸಲಾದ ವೈದ್ಯರು ತುರ್ತು ಸೇವೆಗೆ ಲಭ್ಯರಾಗುವಂತಿರಬೇಕು.ಕೆಲವೊಮ್ಮೆ ವೈದ್ಯರೇ ಇಲ್ಲದಿದ್ದರೆ ಸಮಸ್ಯೆ ಉದ್ಭವವಾಗಬಹುದು.
“ಬಂಟ್ವಾಳ ರೈಲು ನಿಲ್ದಾಣದ ಪುನರ್ ಅಭಿವೃದ್ಧಿ ಯೋಜನೆಯು ಪ್ರಯಾಣಿಕರ ಆರಾಮ, ಸಂಚಾರ ವ್ಯವಸ್ಥೆಯ ಸುಧಾರಣೆ ಮತ್ತು ಮೂಲಸೌಕರ್ಯ ನವೀಕರಣದ ಮೇಲೆ ಕೇಂದ್ರೀಕರಿಸಿ, ನಿಲ್ದಾಣವನ್ನು ಆಧುನಿಕ, ಪರಿಣಾಮಕಾರಿ ಮತ್ತು ಪ್ರಯಾಣಿಕ ಸ್ನೇಹಿ ಕೇಂದ್ರವಾಗಿ ಪರಿವರ್ತಿಸುತ್ತದೆ.”
–ಗಿರೀಶ ಧರ್ಮರಾಜ ಕಲಗೊಂಡ, ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು/ಸಾರ್ವಜನಿಕ ಸಂಪರ್ಕ ಅಧಿಕಾರಿ










































