ಅಮೆರಿಕ ಮತ್ತು ಇರಾನ್ ನಡುವೆ ಕ್ಷಿಪಣಿ ಹಾಗೂ ವಾಯುದಾಳಿಗಳು ತೀವ್ರಗೊಂಡಿರುವ ಬೆನ್ನಲ್ಲೇ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಸೋಮವಾರದ ವಹಿವಾಟಿನಲ್ಲಿ ಕಚ್ಚಾ ತೈಲದ ಬೆಲೆ ಶೇ. 4ಕ್ಕಿಂತಲೂ ಹೆಚ್ಚು ಜಿಗಿತ ಕಂಡಿದ್ದು, ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 79.26 ಡಾಲರ್ (ಅಂದಾಜು7,570 ರೂ.) ತಲುಪಿದೆ.
ಹಾರ್ಮುಜ್ ಜಲಸಂಧಿ ಬಂದ್:ವಿಶ್ವದ ಪ್ರಮುಖ ಇಂಧನ ಸಾಗಣೆ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯ ಭದ್ರತೆಯ ಬಗ್ಗೆ ಆತಂಕ ಎದುರಾಗಿರುವುದೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣ. ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಇರಾನ್ ಈ ಜಲಮಾರ್ಗವನ್ನು ಮುಚ್ಚಿರುವುದಾಗಿ ಘೋಷಿಸಿದೆ. ಪರಿಣಾಮವಾಗಿ. ಈ ಮಾರ್ಗದ ಮೂಲಕ ಹಡಗುಗಳ ಸಂಚಾರ ಕಳೆದ ಐದು ವಾರಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ವಿಸ್ತರಿಸಿದ ಯುದ್ಧದ ವ್ಯಾಪ್ತಿ:ಇರಾನ್ ತನ್ನ ದಾಳಿಯ ವ್ಯಾಪ್ತಿಯನ್ನು ಕತಾರ್ ಮತ್ತು ಯುಎಇ (UAE) ದೇಶಗಳಿಗೂ ವಿಸ್ತರಿಸಿದ್ದು. ಇದಕ್ಕೆ ಪ್ರತಿಯಾಗಿ ಅಮೆರಿಕ ಕೂಡ ಇರಾನ್ ನ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದೆ. ಈ ಬೆಳವಣಿಗೆಯಿಂದಾಗಿ ಕಳೆದ ತಿಂಗಳು ಉಭಯ ದೇಶಗಳ ನಡುವೆ ಏರ್ಪಟ್ಟಿದ್ದ ತಾತ್ಕಾಲಿಕ ಶಾಂತಿ ಒಪ್ಪಂದ ಹಾಗೂ ಮಾತುಕತೆಗಳು ಸಂಪೂರ್ಣವಾಗಿ ಹಳ್ಳ ಹಿಡಿದಿವೆ.
ಇರಾನ್ ಕಠಿಣ ಎಚ್ಚರಿಕೆ:ಅಮೆರಿಕದ ದಾಳಿಯನ್ನು ವಿಶ್ವಸಂಸ್ಥೆಯ ನಿಯಮಗಳ ಉಲ್ಲಂಘನೆ ಎಂದು ಖಂಡಿಸಿರುವ ಇರಾನ್ ವಿದೇಶಾಂಗ ಸಚಿವಾಲಯವು ಕಠಿಣ ಎಚ್ಚರಿಕೆಯನ್ನು ರವಾನಿಸಿದೆ. ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗೆ ಯಾವ ದೇಶಗಳು ಅಮೆರಿಕಕ್ಕೆ ತನ್ನ ಭೂಮಿ ಅಥವಾ ನೆಲೆಗಳನ್ನು ಬಳಸಲು ಅವಕಾಶ ನೀಡುತ್ತವೆಯೋ, ಆ ದೇಶಗಳನ್ನು ‘ಶತ್ರು ರಾಷ್ಟ್ರ’ ಎಂದು ಪರಿಗಣಿಸಿ ದಾಳಿ ನಡೆಸುವುದಾಗಿ ಇರಾನ್ ಘೋಷಿಸಿದೆ. ಇದು ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಉದ್ವಿಗ್ನತೆಗೆ ಕಾರಣವಾಗಿದೆ.









































