ಫುಟ್ಬಾಲ್ ಅಂಗಣದಾಚೆ ನೆನಪಿನಲ್ಲಿ ಉಳಿಯುವ ರೋನಾಲ್ಡ್ ಮಾನವೀಯ ಮುಖಗಳು | ಇಂಟ್ರೆಸ್ಟಿಂಗ್ ಮಾಹಿತಿ

Picture of Savistara

Savistara

Bureau Report

ಮೈಕೈಗಳಿಗೆ ಟ್ಯಾಟೂ ಹಾಕಿಸಿಕೊಳ್ಳುವುದು ಈಗ ಬಹಳ ದೊಡ್ಡ ಫ್ಯಾಷನ್. ಅದರಲ್ಲೂ ಕ್ರೀಡಾಪಟುಗಳ ಟ್ಯಾಟೂಗಳಂತೂ ವಿಧವಿಧ. ಆದರೆ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಲೊ ಮೈ ಮೇಲೆ ಒಂದೇ ಒಂದು ಟ್ಯಾಟೂ ಬಿಡಿ, ಬಣ್ಣದಿಂದ ಬರೆದ ಗೆರೆಯೂ ಇಲ್ಲ. ಏಕೆ ಗೊತ್ತಾ?

‘ಏಕೆಂದರೆ ನಾನು ರಕ್ತದಾನಿ..’ ಎಂದು ರೊನಾಲ್ಗೊ ತೃಪ್ತಿಭರಿತ ಮುಖಭಾವದೊಂದಿಗೆ ನಗು ಅರಳಿಸುತ್ತಾರೆ.ಹೌದು; ಟ್ಯಾಟೂ ಬರೆಸಿಕೊಂಡರೆ ಅದರಲ್ಲಿರುವ ಬಣ್ಣದಲ್ಲಿ ರಾಸಾಯನಿಕವು ಚರ್ಮದ ಮೂಲಕ ದೇಹದೊಳಗೆ ಸೇರುತ್ತದೆ. ಆಗ ಕನಿಷ್ಠ ಆರೇಳು ತಿಂಗಳು ರಕ್ತದಾನ ಮಾಡುವಂತಿಲ್ಲ. ಯಾರಿಗೋ ತುರ್ತು ರಕ್ತ ಬೇಕಾದರೆ ಏನು ಮಾಡುವುದು? ಅದಕ್ಕೇ ಟ್ಯಾಟೂ (ಹಚ್ಚೆ) ಹಾಕಿಸಿಕೊಂಡಿಲ್ಲ ಎಂದು ರೊನಾಲ್ಲೊ ಸ್ಪಷ್ಟವಾಗಿ ಹೇಳುತ್ತಾರೆ.

ರೊನಾಲ್ಲೊ ತಮ್ಮ ಕುಟುಂಬದ ಸುಖಕರ ಪ್ರಯಾಣಕ್ಕಾಗಿ ಜೆಟ್ ವಿಮಾನ ಖರೀದಿಸಲು ಯೋಜಿಸಿದ್ದರು. ಆದರೆ ಅವರ ಅಮ್ಮ ಹೇಳಿದರು. ನಮ್ಮೂರು ಮದೇರಾ (ಪೂರ್ಚುಗಲ್‌ನಲ್ಲಿದೆ) ದಲ್ಲಿ ನಾವೆಲ್ಲ ಶಾಲೆಗೆ 10 ಕಿ.ಮೀ ನಡೆದುಕೊಂಡೇ ಹೋಗಬೇಕಿತ್ತು. ಅಪಾಯಕಾರಿ ರಸ್ತೆಗಳಾಗಿದ್ದವು. ಈಗಲೂ ಪರಿಸ್ಥಿತಿ ಬದಲಾಗಿಲ್ಲ. ಬಡ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ದೂರ ದೂರ ನಡೆಯಲೇಬೇಕು.ಅವರಿಗೆ ಏನಾದರೂ ಮಾಡಲು ಸಾಧ್ಯವಿದ್ದರೆ ಮಾಡು ವಿಮಾನಕ್ಕೆಲ್ಲ ದುಡ್ಡು ಹಾಕೋದು ಬೇಡ ಅಂದರು. ಅಮ್ಮನಿಗಾಗಿ ಏನು ಬೇಕಾದರೂ ಮಾಡಲು ರೊನಾಲ್ಗೊ ಸದಾ ಸಿದ್ದ.ಅದಕ್ಕಾಗಿಯೇ ಎರಡನೇ ಯೋಚನೆ ಮಾಡಲಿಲ್ಲ. 100 ಬಸ್ ಖರೀದಿಸಿ ಅಲ್ಲಿಯ ಶಾಲೆಗಳಿಗೆ ದೇಣಿಗೆ ನೀಡಿದರು. ಆ ಶಾಲೆಗಳಲ್ಲಿ ಫುಟ್‌ಬಾಲ್ ಮತ್ತು ಕ್ರೀಡಾ ಕಲಿಕೆಗೆ ನಿರಂತರ ಸಹಾಯ ಕೂಡ ಮಾಡುತ್ತಿದ್ದಾರೆ. ಆದರೂ ಅಮ್ಮನಿಗಾಗಿ ದುಬಾರಿ ಐಷಾರಾಮಿ ಕಾರೊಂದನ್ನು ಕಾಣಿಕೆ ನೀಡಿದರು. ‘ನಾವೆಲ್ಲ ಬಡತನದಲ್ಲಿ ಬೆಳೆದವರು. ತಾನು ರಾತ್ರಿ ಉಪವಾಸ ಮಲಗಿ ನಮಗೆ ಊಟ ಹಾಕಿದ ತಾಯಿ ಅವರು. ಇವತ್ತು ನಾನು ಇರುವುದೇ ಅವಳಿಂದ.ಗಳಿಸಿದ್ದು, ಗಳಿಸುತ್ತಿರುವುದೆಲ್ಲವೂ ಅವಳದ್ದೇ. ಇಷ್ಟು ಕೊಡದಿದ್ದರೆ ಹೇಗೆ..” ರೊನಾಲೊ ಗಂಟಲುಬ್ಬಿ ಬಂದಿತ್ತು ಇಷ್ಟು ಹೇಳುವಾಗ.

ಶ್ರೀಮಂತರ ಮನೆಗಳಲ್ಲಿ ಪರಿಚಾರಿಕೆಯಾಗಿದ್ದ ಅಮ್ಮನಿಗೆ ಸಹಾಯ ಮಾಡಲು ರೊನಾಲ್ಲೊ ಕೂಡ ನೆಲ ಒರೆಸಿ, ಕಸಗುಡಿಸುವ ಕೆಲಸ ಮಾಡುತ್ತಿದ್ದರು. ಓದು, ಕೆಲಸದ ಮಧ್ಯೆ ಫುಟ್‌ಬಾಲ್ ಆಡುವುದನ್ನು ಮರೆಯುತ್ತಿರಲಿಲ್ಲ. ಸಂಜೆಯಾದರೆ ಮೈದಾನದಲ್ಲಿ ರೊನಾಲ್ಲೊ ಕಾಲ್ಟಳಕದ ಕರಾಮತ್ತು ಮುಗಿಲುಮುಟ್ಟುತ್ತಿತ್ತು.ಆದರೆ ಹೊತ್ತು ಮುಳುಗಿ ಆಟ ನಿಂತಾಗ ಹಸಿದ ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ ಎಂಬ ಚಿಂತೆ. ತನ್ನ ಹಾಗೂ ಸ್ನೇಹಿತರ ಜೇಬುಗಳನ್ನು ಜಾಡಿಸಿದಾಗ ಸಿಗುತ್ತಿದ್ದ ಪುಡಿಗಾಸು ಹಿಡಿದು ಪಕ್ಕದ ಬೇಕರಿಗೆ ಓಡುತ್ತಿದ್ದರು. ಅಲ್ಲೊಬ್ಬ ಮಹಿಳೆ ಕೆಲಸ ಮಾಡುತ್ತಿದ್ದರು.ಪ್ರತಿದಿನ ಬರುತ್ತಿದ್ದ ಈ ಹುಡುಗರು ಕೊಡುತ್ತಿದ್ದ ಪುಡಿಗಾಸು ಪಡೆದು ಹೊಟ್ಟೆ ತುಂಬ ಬ್ರೆಡ್, ಬಿಸ್ಕಿಟ್ ನೀಡುತ್ತಿದ್ದಳು. ಕೆಲವೊಮ್ಮೆ ದುಡ್ಡಿಲ್ಲದಿದದ್ದರೂ ತನ್ನ ವ್ಯಾಪಾರದಲ್ಲಿ ಉಳಿಸಿದ್ದ ಬ್ರೆಡ್, ಬಟರ್ ಕೊಡುತ್ತಿದ್ದಳು. ರೊನಾಲ್ಲೊ ಬಹುಕೋಟಿ ಒಡೆಯ ಆದ ನಂತರವೂ ಆ ದಿನಗಳನ್ನು ಮರೆತಿರಲಿಲ್ಲ. ಅದೆಷ್ಟೋ ಬಾರಿ ಆ ಬೇಕರಿ ಇದ್ದ ಜಾಗಕ್ಕೆ ಹೋಗಿ ಹುಡುಕಿಯೂ ಬಂದಿದ್ದರು. ಆದರೆ ಆಕೆ ಸಿಕ್ಕಿರಲಿಲ್ಲ. ತನ್ನೆಲ್ಲ ಸ್ನೇಹಿತರಿಗೂ ಆಕೆಯ ಬಗ್ಗೆ ಹೇಳಿದ್ದರು. ಅದೊಂದು ದಿನ ತಮ್ಮ ಕಾರಿನಲ್ಲಿ ಅದೆಲ್ಲಿಗೋ ಪಯಣಿಸುತ್ತಿದ್ದ ರೊನಾಲ್ಗೊಗೆ ಆ ಮಹಿಳೆಯು ಬಸ್ ನಿಲ್ದಾಣವೊಂದರಲ್ಲಿ ನಿಂತಿದ್ದು ಕಂಡಿತು. ತಟ್ಟನೆ ಕಾರು ನಿಲ್ಲಿಸಿ ಆಕೆಯ ಬಳಿ ಓಡಿದರು ರೊನಾಲ್ಲೊ. ಆಕೆಗೆ ವಯಸ್ಸಾಗಿತ್ತು. ಕಣ್ಣುಗಳು ಮಂಜಾಗಿದ್ದವು.

‘ಯಾರಪ್ಪ ನೀನು’ ಎಂದು ಕೇಳಿದರು. ‘ನಾನು ಕ್ರಿಸ್ಟಿಯಾನೊ ರೊನಾಲ್ಲೊ. ನಿಮ್ಮ ಈ ಕೈಗಳ ಬ್ರೆಡ್ ತಿಂದು ಬೆಳೆದವನು. ಇವತ್ತು ದೊಡ್ಡ ಸ್ಟಾರ್ ಆಗಿರುವೆ. ನಿಮಗೆ ಥ್ಯಾಂಕ್ಯೂ’ ಎಂದ. ಆ ಮಹಿಳೆಯ ಕಣ್ಣುಗಳು ಹನಿಗೂಡಿದವು. ನನ್ನ ಅಂಗಡಿಗೆ ಆಗ ಬಹಳಷ್ಟು ಹುಡುಗರು ಬರುತ್ತಿದ್ದರು. ಆದರೆ ನೀವು ಇಷ್ಟು ದೊಡ್ಡ ವ್ಯಕ್ತಿಯಾದ ನಂತರವೂ ನೆನಪಿಟ್ಟುಕೊಂಡಿದ್ದೀರಲ್ಲಾ ಅದೇ ವಿಶೇಷ. ಖುಷಿಯಾಯಿತು ಎಂದು ಆನಂದಭಾಷ್ಪ ಸುರಿಸಿದರು. ‘ನಾನು ನಿಮಗೆ ಕಾಣಿಕೆ ಕೊಡಬೇಕು ಏನು ಕೊಡಲಿ’ ಎಂದ ರೊನಾಲೊಗೆ, ಆಕೆ, ‘ಇನ್ನಷ್ಟು ಯಶಸ್ಸು ಸಾಧಿಸಿ, ಚೆನ್ನಾಗಿರು, ಗಾಡ್ ಬೈಸ್ ಯೂ..’ ಎಂದಷ್ಟೇ ಹೇಳಿದರು.ಆದರೆ ರೊನಾಲ್ಗೊ ಅಷ್ಟಕ್ಕೇ ಸುಮ್ಮನಾಗಲಿಲ್ಲ. ತಮ್ಮ ಮ್ಯಾನೇಜರ್‌ಗೆ ಕರೆ ಮಾಡಿದರು. ತಮ್ಮ ಹೆಸರಿನಲ್ಲಿದ್ದ ಒಂದು ರೆಸ್ಟೋರೆಂಟ್ ಅನ್ನು ತತ್‌ಕ್ಷಣವೇ ಆ ಮಹಿಳೆಯ ಹೆಸರಿಗೆ ವರ್ಗಾಯಿಸುವಂತೆ ಸೂಚಿಸಿದರು. ಕೆಲವೇ ದಿನಗಳಲ್ಲಿ ಆಕೆ ಆ ಹೋಟೆಲ್‌ ಒಡತಿಯೂ ಆದರು.

41 ವರ್ಷದ ರೊನಾಲ್ಗೊ ಸರಿ ಸುಮಾರು ಎರಡು ದಶಕಗಳ ಕಾಲ ಫುಟ್‌ಬಾಲ್ ಜಗತ್ತಿನ ಅನಭಿಷಿಕ್ತ ದೊರೆಯಾಗಿ ಆಳಿದರು. ಅತೀ ಶ್ರೀಮಂತ ಆಟಗಾರನೂ ಆದರು. ಇತ್ತೀಚೆಗೆ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ವೃತ್ತಿಜೀವನಕ್ಕೆ ತೆರೆಯೆಳೆದರು. ಜೀವನದಲ್ಲಿ ಎಷ್ಟೇ ಲ್ಲ ಸಾಧನೆ ಮಾಡಿಯೂ ವಿಶ್ವಕಪ್ ಜಯಿಸಲು ಆಗಲಿಲ್ಲವಲ್ಲ ಎಂಬ ವೇದನೆಯೊಂದಿಗೆ ಕಣ್ಣೀರಿಡುತ್ತಲೇ ಮೈದಾನದಿಂದ ಹೊರನಡೆದರು.ಅವರು ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಗಳಿಸಿರುವ 143 ಗೋಲುಗಳು, ಆಗ ಅವರು ತೋರಿದ ಸಂಭ್ರಮಾಚರಣೆಯ ಶೈಲಿ, ಎದುರಾಳಿಗಳೊಂದಿಗೆ ಕಾದಾಡಿದ ನೆನಪುಗಳು ಮತ್ತು ಪಂದ್ಯದ ನಂತರ ಅದೇ ಎದುರಾಳಿಗಳನ್ನು ಬಿಗಿದಪ್ಪಿ ಸಂತೈಸಿದ ರೀತಿನೀತಿಗಳು ನೆನಪಿನಲ್ಲಿ ಉಳಿಯುತ್ತವೆ.1.4 ಬಿಲಿಯನ್ ಡಾಲರ್ ಒಡೆಯನಾಗಿರುವ ರೊನಾಲ್ಲೊ ಅವರ ವರ್ಚಸ್ಸು ಯಾವ ಮಟ್ಟದ್ದು ಎಂಬುದನ್ನು ನೋಡಬೇಕಾದರೆ, 2020ರ ಯುರೋ ಕಪ್ ಪತ್ರಿಕಾಗೋಷ್ಠಿಯನ್ನು ನೆನಪಿಸಿಕೊಳ್ಳಬೇಕು.

ಕಿಕ್ಕಿರಿದು ಸೇರಿದ್ದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮುಂದಿದ್ದ ಟೇಬಲ್ ಮೇಲಿದ್ದ ಕೊಕಾ ಕೋಲಾ ಪಾನೀಯದ ಬಾಟಲಿಗಳನ್ನು ಪಕ್ಕಕ್ಕೆ ತೆಗೆದಿಟ್ಟು ‘ನೀರು ಕುಡಿಯಿರಿ. ಒಳ್ಳೆಯದು’ ಎಂಬ ಸಂದೇಶ ನೀಡಿದ್ದರು. ಒಂದೆರಡು ದಿನಗಳಲ್ಲಿ ಆ ತಂಪುಪಾನೀಯದ ಬೇಡಿಕೆಯು ಮಾರುಕಟ್ಟೆಯಲ್ಲಿ ಕುಸಿದಿತ್ತು. ಅಂದಾಜು 4 ಬಿಲಿಯನ್ ಡಾಲರ್ ನಷ್ಟು ಕುಸಿತ ಕಂಡಿತ್ತು. ಆ ಟೂರ್ನಿಯ ಪ್ರಮುಖ ಪ್ರಾಯೋಜಕತ್ವ ವಹಿಸಿದ್ದ ಕಂಪೆನಿ ಅದು.ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ವಿಷಯ ಬಂದಾಗ ರೊನಾಲ್ಲೊ ಎಂದಿಗೂ ರಾಜೀ ಮಾಡಿಕೊಳ್ಳಲಿಲ್ಲ. ತಮ್ಮ ಮಕ್ಕಳಿಗೂ ಅದೇ ಪಾಠ ಹೇಳಿಕೊಡುತ್ತಿದ್ದಾರೆ. ಶ್ರೀಮಂತಿಕೆ ಇದ್ದರೂ, ಸರಳ ಜೀವನದ ಪಾಠ ಮತ್ತು ಪರಿಶ್ರಮದ ರೀತಿಯನ್ನೂ ಅವರು ರೂಢಿಸುತ್ತಿದ್ದಾರೆ. ರೊನಾಲೊ ಫುಟ್‌ಬಾಲ್ ಅಂಗಳದಿಂದ ನಿವೃತ್ತಿಯಾಗಿರಬಹುದು. ಆದರೆ ಕ್ರೀಡಾಂಗಣದಾಚೆಯ ತಮ್ಮ ಬದುಕು ಮತ್ತು ಜೀವನಶೈಲಿಯ ಮೂಲಕ ಜನಮಾನಸದಲ್ಲಿ ಸದಾ ಅವರ ನೆನಪು ಚೆಂಡಿನಂತೆ ಪುಟಿಯುತ್ತಲೇ ಇರುತ್ತದೆಯಲ್ಲವೇ?

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!