ಪಾಕಿಸ್ತಾನ ಟೀಕಿಸುವಾಗ “ನಮ್ಮ” ಎನ್ನುವ ಮೂಲಕ ಎಐಸಿಸಿ ಅಧ್ಯಕ್ಷ ಎಡವಟ್ಟು
ಹೊಸಪೇಟೆ/ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಘಟನೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವೈಫಲ್ಯ ಟೀಕಿಸುವಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಳಸಿದ “ಚುಟ್ ಪುಟ್’ ಶಬ್ಧ ವಿವಾದಕ್ಕೆ ಕಾರಣವಾಗಿದೆ.ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ “ಸಮರ್ಪಣೆ ಸಂಕಲ್ಪ’ ಸಮಾವೇಶದಲ್ಲಿ ಮಾತನಾಡಿದ ಖರ್ಗೆ, ಪಹಲ್ಲಾಮ್‌ನಲ್ಲಿ ಉಗ್ರರ ದಾಳಿ ಸುಳಿವು ಮೋದಿ ಅವರಿಗಿತ್ತು. ಹಾಗಾಗಿ ಕಾಶ್ಮೀರ ಪ್ರವಾಸ ಕೈಬಿಟ್ಟಿದ್ದರು. ಅವರು ಪೊಲೀಸರ ಮೂಲಕ ಈ ಬಗ್ಗೆ ಪ್ರವಾಸಿಗರಿಗೂ ಎಚ್ಚರಿಕೆ ನೀಡಿದ್ದರೆ 26 ಜೀವಗಳನ್ನಾದರೂ ಉಳಿಸಬಹುದಿತ್ತು. ಈಗೇನು ಹೆಚ್ಚು ಕಡಿಮೆ “ಚುಟ್ ಪುಟ್’ (ಸಣ್ಣಪುಟ್ಟ ಯುದ್ಧ) ಯುದ್ಧಗಳುನಡೆದಿವೆ ಎಂದಿದ್ದು ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ. ಇದೇ ವೇಳೆ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಾಗ “ನಮ್ಮ’ ಎನ್ನುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.
ಖರ್ಗೆ ಹೇಳಿಕೆಗೆ ಬಿಜೆಪಿ, ಮಿತ್ರ ಪಕ್ಷಗಳ ಆಕ್ರೋಶ
“ಆಪರೇಷನ್ ಸಿಂದೂರ ಹೆಸರಲ್ಲಿ ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ್ದು ‘ಸಣ್ಣಪುಟ್ಟ ಯುದ್ಧ’ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಬಿಜೆಪಿ ಹಾಗೂ ಮಿತ್ರಪಕ್ಷಗಳು ಭಾರಿ ಆಕ್ರೋಶ ಹೊರಹಾಕಿವೆ.ಖರ್ಗೆ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸಂಸದ ಸಂಬಿತ್ ಪಾತ್ರಾ, “ಆಪರೇಷನ್ ಸಿಂದೂರ ಮೂಲಕ ಭಾರತ ಕೊಟ್ಟ ಹೊಡೆತಕ್ಕೆ ಪಾಕಿಸ್ತಾನ ನೋವಿನಿಂದ ನರಳುತ್ತಿದೆ. ಆದರೆ ಇದನ್ನು ಪುಟ್ಟ ಯುದ್ಧವೆಂದು ಕರೆಯುವ ಮೂಲಕ ದೇಶಕ್ಕೆ ಹಾಗೂ ಸೈನಿಕರ ಶೌರ್ಯಕ್ಕೆ ಖರ್ಗೆ ಅವಮಾನಿಸಿ, ವಂಚಿಸಿದ್ದಾರೆ’ ಎಂದು ಕಿಡಿಕಾರಿದ್ದಾರೆ.“ಕಾಂಗ್ರೆಸ್ ಮತ್ತು ಪಾಕಿಸ್ತಾನ ಒಂದೇ ನಾಲಿಗೆಯುಳ್ಳ ಎರಡು ದೇಹಗಳಾಗಿವೆ. ಸರ್ವಪಕ್ಷ ಸಭೆಯಲ್ಲಿ “ಆಪರೇಷನ್ ಸಿಂದೂರದ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್, ಹೊರಬಂದು ಪ್ರಶ್ನೆಗಳನ್ನು ಕೇಳುತ್ತದೆ’ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ಟೀಕಿಸಿದ್ದಾರೆ. ಇದೇ ವೇಳೆ, “26/11ರ ಮುಂಬೈ ದಾಳಿ ನಡೆದಾಗ ಏನೂ ಮಾಡದೆ ಸುಮ್ಮನಿದ್ದ ಕಾಂಗ್ರೆಸ್ ಈಗ ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿದೆ’ ಎಂದು ಖರ್ಗೆ ಹೇಳಿಕೆ ವಿರುದ್ಧ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಹರಿಹಾಯ್ದಿದ್ದಾರೆ.
ಸೈನಿಕರ ತ್ಯಾಗ ಅವಮಾನಿಸಬೇಡಿ: ಬಿವೈವಿ
ಪಾಕಿಸ್ತಾನದ ವಿರುದ್ಧ ಭಾರತೀಯ ಯೋಧರು ನಡೆಸಿದ ಹೋರಾಟವನ್ನು ಚುಟ್‌ಪುಟ್ ಯುದ್ಧ ಎಂದಿರುವ ಮಲ್ಲಿಕಾರ್ಜುನ ಖರ್ಗೆ ಅವರದ್ದು ಬೇಜವಾಬ್ದಾರಿ ಹೇಳಿಕೆ ಮಾತ್ರವಲ್ಲದೆ, ನಮ್ಮ ಸೇನಾಪಡೆಗೆ ಮಾಡಿದ ಅವಮಾನವೂ ಹೌದು. ನಿಮ್ಮ ಪಕ್ಷದ ಇತಿಹಾಸವೇ ದ್ವಂದ್ವವಾಗಿದೆ. ಮುಂಬೈ ರೈಲು ಸ್ಫೋಟ, ಗಡಿ ಮೇಲೆ ನಡೆದ ಹಲವು ದಾಳಿ, ಪುನರಾವರ್ತಿತ ಪ್ರಚೋದನೆಗಳ ಸಂದರ್ಭದಲ್ಲೂ ಯುಪಿಎ ಸರ್ಕಾರ ಮೌನ ಹಾಗೂ ತುಷ್ಟಿಕರಣ ನೀತಿ ಅನುಸರಿಸಿದ್ದೇ ಹೆಚ್ಚು. ನಮ್ಮ ಸೈನಿಕರ ತ್ಯಾಗವನ್ನು ಅವಮಾನಿಸಬೇಡಿ.
– ಬಿ.ವೈ.ವಿಜಯೇಂದ್ರ,ಬಿಜೆಪಿ ರಾಜ್ಯಾಧ್ಯಕ್ಷ












































