ಛತ್ತೀಸ್‌ಗಢದ ಬಸ್ತಾರ್‌ನ ದುರ್ಗಮ ಅರಣ್ಯ ಪ್ರದೇಶದಲ್ಲಿ ಬುಧವಾರ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ, ಸಿಪಿಐ (ಮಾವೋವಾದಿ) ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮತ್ತು ದೇಶದ ಪ್ರಮುಖ ನಕ್ಸಲ್ ನಾಯಕ ನಂಬಾಲಾ ಕೇಶವ್ ರಾವ್ ಅಲಿಯಾಸ್ ಬಸವರಾಜು (70) ಸೇರಿದಂತೆ 27 ನಕ್ಸಲರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.
ನಾರಾಯಣಪುರ ಹೈದರಾಬಾದ್: ಛತ್ತೀಸ್‌ಗಢದ ಬಸ್ತಾರ್‌ನ ದುರ್ಗಮ ಅರಣ್ಯ ಪ್ರದೇಶದಲ್ಲಿ ಬುಧವಾರ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ, ಸಿಪಿಐ (ಮಾವೋವಾದಿ) ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮತ್ತು ದೇಶದ ಪ್ರಮುಖ ನಕ್ಸಲ್ ನಾಯಕ ನಂಬಾಲಾ ಕೇಶವ್ ರಾವ್ ಅಲಿಯಾಸ್ ಬಸವರಾಜು (70) ಸೇರಿದಂತೆ 27 ನಕ್ಸಲರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಈ ಕಾರ್ಯಾಚರಣೆ ನಕ್ಸಲ್ ನಿಗ್ರಹ ಇತಿಹಾಸದಲ್ಲೇ ಒಂದು ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.
ಬಸವರಾಜು ಹತ್ಯೆಯು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳಿಗೆ ಲಭಿಸಿದ ಅತಿದೊಡ್ಡ ಯಶಸ್ಸು ಎಂದು ಬಣ್ಣಿಸಲಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದನ್ನು “ಐತಿಹಾಸಿಕ ಸಾಧನೆ” ಎಂದು ಶ್ಲಾಘಿಸಿದ್ದಾರೆ. ಈ ಘಟನೆಯು ನಕ್ಸಲ್ ಚಳವಳಿಗೆ ತೀವ್ರ ಹಿನ್ನಡೆಯನ್ನುಂಟುಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಛತ್ತೀಸ್‌ಗಢದ ನಾರಾಯಣಪುರ, ಬಿಜಾಪುರ ಮತ್ತು ದಂತೇವಾಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹರಡಿರುವ ದುರ್ಗಮ ಅಬೂಜ್‌ಮಾಡ್ ಅರಣ್ಯ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭದ್ರತಾ ಪಡೆಗಳು ಈ ಕಾರ್ಯಾಚರಣೆ ನಡೆಸುತ್ತಿದ್ದವು.
ಯಾರು ಈ ಬಸವರಾಜು?
ನಕ್ಸಲ್ ಚಳವಳಿಯ ಚಾಣಾಕ್ಷ ತಂತ್ರಗಾರ, ಹಿಂಸಾತ್ಮಕ ದಾಳಿಗಳ ರೂವಾರಿ ಎಂದೇ ಕುಖ್ಯಾತನಾಗಿದ್ದ ಬಸವರಾಜು, ಸಂಘಟನೆಯ ಬೆನ್ನೆಲುಬಾಗಿದ್ದನು. ಈತನ ತಲೆಗೆ ಸರ್ಕಾರ ₹1.5 ಕೋಟಿ ಬಹುಮಾನ ಘೋಷಿಸಿತ್ತು.
ಭೀಕರ ದಾಳಿಗಳ ಸೂತ್ರಧಾರ:
2010ರಲ್ಲಿ ದಂತೇವಾಡದಲ್ಲಿ 76 ಸಿಆರ್‌ಪಿಎಫ್ ಯೋಧರ ಹತ್ಯಾಕಾಂಡ ಮತ್ತು 2013ರ ಜೀರಂ ಘಾಟಿ ದುರಂತದಲ್ಲಿ (27 ಸಾವು) ಸೇರಿದಂತೆ ಅನೇಕ ಭೀಕರ ದಾಳಿಗಳ ಹಿಂದಿನ ಪ್ರಮುಖ ಸೂತ್ರಧಾರ ಈತನೇ ಆಗಿದ್ದನು.
ಹಿನ್ನೆಲೆ ಮತ್ತು ಶಿಕ್ಷಣ:
ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಪುಟ್ಟ ಗ್ರಾಮದಲ್ಲಿ ಜನಿಸಿದ್ದ ನಂಬಾಲಾ ಕೇಶವ್ ರಾವ್, ವಾರಂಗಲ್‌ನ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜಿನಲ್ಲಿ (ಈಗ ಎನ್‌ಐಟಿ) ಪದವಿ ಪಡೆದಿದ್ದನು. ಕಾಲೇಜು ದಿನಗಳಿಂದಲೇ ಎಡಪಂಥೀಯ ವಿದ್ಯಾರ್ಥಿ ರಾಜಕಾರಣದಲ್ಲಿ ಸಕ್ರಿಯನಾಗಿದ್ದ.
ನಕ್ಸಲ್ ಪಯಣ:
ರಾಡಿಕಲ್ ಸ್ಪೂಡೆಂಟ್ಸ್ ಯೂನಿಯನ್ (RSU) ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿ, ಬಳಿಕ ನಕ್ಸಲ್ ಚಳವಳಿಗೆ ಧುಮುಕಿದ. ‘ಬಸವರಾಜು’, ‘ಗಂಗಣ್ಣ’, ‘ಪ್ರಕಾಶ್’ ಎಂಬ ಹಲವು ಅಲಿಯಾಸ್‌ಗಳಿಂದ ಕರೆಯಲ್ಪಡುತ್ತಿದ್ದ ಈತ, 1980ರಲ್ಲಿ ಇತರರೊಂದಿಗೆ ‘ಸಿಪಿಐ (ಮಾರ್ಕ್ಸ್‌ವಾದಿ-ಲೆನಿನ್ನಾದಿ) ಪೀಪಲ್ಸ್ ವಾರ್’ (ಪಿಡಬ್ಲ್ಯೂಜಿ) ಪಕ್ಷವನ್ನು ಸ್ಥಾಪಿಸಿದ. 1992ರಲ್ಲಿ ಅದರ ಕೇಂದ್ರ ಸಮಿತಿ ಸದಸ್ಯನಾದ. 2004ರಲ್ಲಿ ಪಿಡಬ್ಲ್ಯೂಜಿಯು ಸಿಪಿಐ (ಮಾವೋವಾದಿ) ಪಕ್ಷದೊಂದಿಗೆ ವಿಲೀನಗೊಂಡ ನಂತರ, ಈತ ಸಂಘಟನೆಯಲ್ಲಿ ಉನ್ನತ ಸ್ಥಾನಕ್ಕೇರಿದ್ದನು.ಬಸವರಾಜು ಹತ್ಯೆಯೊಂದಿಗೆ, ದಶಕಗಳ ಕಾಲ ಭದ್ರತಾ ಪಡೆಗಳಿಗೆ ಸವಾಲಾಗಿದ್ದ ಮತ್ತು ಹಲವಾರು ಅಮಾಯಕರ ಸಾವಿಗೆ ಕಾರಣನಾಗಿದ್ದ ಓರ್ವ ಪ್ರಮುಖ ನಕ್ಸಲ್ ನಾಯಕನ ಯುಗಾಂತ್ಯವಾದಂತಾಗಿದೆ. ಇದು ನಕ್ಸಲ್ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.












































