ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಲು ಕನ್ನಡ ಮೂಲದ ಕೆಲ ನಟಿಯರನ್ನ ಸಂಪರ್ಕಿಸಲಾಗಿತ್ತು. ಅವರು ಸಿಗದ ಕಾರಣ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಸ್ಪಷ್ಟಪಡಿಸಿದರು.ನಟಿ ತಮನ್ನಾ ಭಾಟಿಯಾಗೆ ಕನ್ನಡಪರ ಸಂಘಟನೆಗಳಿಂದ ವಿರೋಧ ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾತಾಡಿದ ಅವರು, ರಾಯಭಾರಿ ಆಯ್ಕೆಗೆ ಒಂದು ಸಮಿತಿ ರಚಿಸಲಾಗಿತ್ತು. ಕನ್ನಡಿಗರನ್ನೇ ನಾವು ಮೊದಲು ಸಂಪರ್ಕಿಸಿದ್ದೇವೆ. ಆದ್ರೆ ಅವ್ರು ಯಾರೂ ಫ್ರೀ ಇರಲಿಲ್ಲ ಎಂದರು.
ರಶ್ಮಿಕಾ ಮಂದಣ್ಣ ಅವರನ್ನೂ ಕೇಳಿದ್ದೇವೆ. ಅವರು ಬೇರೆ ಕಡೆ ಸೈನ್ ಮಾಡಿದ್ದೇನೆ ಆಗಲ್ಲ ಅಂದ್ರು. ಶ್ರೀಲೀಲಾ ಅವರನ್ನು ಸಂಪರ್ಕಿಸಿದ್ದೇವೆ, ಅವ್ರೂ ಆಗಲ್ಲ ಅಂದಿದ್ರು. ಬಳಿಕ ಪೂಜಾ ಹೆಗಡೆ, ಕಿಯಾರಾ ಅಡ್ವಾಣಿ ಅವರೂ ಆಗೋದಿಲ್ಲ ಬೇರೆ ಪ್ರಾಜೆಕ್ಟ್ ಒಪ್ಪಿಕೊಂಡಿದ್ದೇನೆ ಅಂತಾ ಹೇಳಿದ್ರು. ದೀಪಿಕಾ ಪಡುಕೋಣೆ ನಮ್ಮ ಬಜೆಟ್‌ಗೆ ಎಟುಕದವರು, ಹಾಗಾಗಿ ಅವರನ್ನು ಸಂಪರ್ಕ ಮಾಡಿಲ್ಲ. ಕೊನೆಯದಾಗಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.
ಇನ್ನು ಯಾರೇ ರಾಯಭಾರಿ ಆದರೂ 2 ವರ್ಷ ಲಾಕ್ ಆಗ್ತಾರೆ. ಇದರಲ್ಲಿ ಕನ್ನಡಕ್ಕೆ ಅವಮಾನ ಮಾಡಬೇಕು ಎಂಬ ಉದ್ದೇಶ ಇಲ್ಲ. ಇದು ಬಿಸಿನೆಸ್, ಸ್ಪರ್ಧೆ ಜಾಸ್ತಿ. ಕನ್ನಡದ ಅಸ್ಮಿತೆ, ಕನ್ನಡದ ಕಲಾವಿದರ ಬಗ್ಗೆ ಬದ್ಧತೆ, ಗೌರವ ಇದೆ. ಯಾರೂ ವಿವಾದ ಮಾಡಬಾರದು. ನಮ್ಮದು ಪ್ಯಾನ್ ಇಂಡಿಯಾ ಬಿಸಿನೆಸ್, ಈಗ ವಿದೇಶಕ್ಕೂ ಬಿಸಿನೆಸ್ ಒಯ್ಯಬೇಕೆಂಬ ಯೋಜನೆ ಇದೆ ಎಂದು ವಿವರಿಸಿದರು.
ಮೈಸೂರು ಸ್ಯಾಂಡಲ್ ಸಂಸ್ಥೆಯಿಂದ ಹೊಸ ಸೋಪ್‌ಗಳನ್ನು ಸಹ ಪರಿಚಯ ಮಾಡಿದ್ದೇವೆ. ನಾವು ಈಗ ಪರ್‌ಫ್ಯೂಮ್ ಮಾರ್ಕೆಟ್‌ಗೂ ಕಾಲಿಡ್ತಿದ್ದೇವೆ. ಇದನ್ನು 5 ಸಾವಿರ ಕೋಟಿ ರೂ. ಬಿಸಿನೆಸ್‌ಗೆ ತೆಗೆದುಕೊಂಡು ಹೋಗುವ ಯೋಜನೆ ಇದೆ. ಮುಂದೆ ವಿದೇಶಿಯವರನ್ನೂ ರಾಯಭಾರಿಯಾಗಿ ಆಯ್ಕೆ ಮಾಡುವ ಉದ್ದೇಶ ಇದೆ. ಆ ಕಾಲ ಬರಲಿ ಅಂತ ಹಾರೈಸಿ. ಬಿಸಿನೆಸ್ ಇನ್ನೂ ಎತ್ತರಕ್ಕೆ ಒಯ್ಯುವ ಉದ್ದೇಶ ಇದೆ ಎಂದು ತಿಳಿಸಿದರು.
ಗಲ್ಫ್, ಯುರೋಪ್ ದೇಶಗಳಿಗೂ ನಮ್ಮ ಉತ್ಪನ್ನಗಳು ಹೋಗಬೇಕು. 23 ಉತ್ಪನ್ನಗಳ ಉತ್ಪಾದನೆ ಮಾಡ್ತಿದ್ದೇವೆ. ಕನ್ನಡ, ನಮ್ಮ ಕಲಾವಿದರ ಬಗ್ಗೆ ನಮಗೆ ಗೌರವ ಇದೆ. ಇದರಲ್ಲಿ ಯಾವುದೇ ತಪ್ಪು ತಿಳಿದುಕೊಳ್ಳುವ ಅಗತ್ಯ ಇಲ್ಲ. ಕಮಿಟಿ ರಚಿಸಿ ತಮನ್ನಾ ಭಾಟಿಯಾರನ್ನು ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಸಮರ್ಥಿಸಿದರು.












































