ಇನ್ಫೋಸಿಸ್‌ನ ಮಾನವ ಸಂಪನ್ಮೂಲ ವಿಭಾಗವು ಉದ್ಯೋಗಿಗಳಿಗೆ ಕೆಲಸದೊತ್ತಡ ಕಡಿಮೆ ಮಾಡುವಂತೆ ಸೂಚಿಸಿದೆ. ದಿನಕ್ಕೆ 9 ಗಂಟೆ 15 ನಿಮಿಷ ಮಾತ್ರ ಕೆಲಸ ಮಾಡಿ, ಓವರ್‌ಟೈಮ್ ಮಾಡದಂತೆ ತಿಳಿಸಿದೆ. ನಾರಾಯಣಮೂರ್ತಿ ಅವರ 70 ಗಂಟೆ ಕೆಲಸದ ಹೇಳಿಕೆ ವಿವಾದವಾದ ಬೆನ್ನಲ್ಲೇ ಈ ಸೂಚನೆ ಬಂದಿದೆ. ಕೆಲಸದ ನಡುವೆ ವಿಶ್ರಾಂತಿ ಪಡೆಯಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಉದ್ಯೋಗಿಗಳಿಗೆ ಸಲಹೆ ನೀಡಲಾಗಿದೆ.
ಬೆಂಗಳೂರು: ‘ ದೇಶದ ಏಳಿಗೆಗಾಗಿ ಯುವಜನತೆಯು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು’ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್ ನಾರಾಯಣಮೂರ್ತಿ ನೀಡಿದ ಹೇಳಿಕೆ ಕುರಿತು ದೇಶಾದ್ಯಂತ ಪರ – ವಿರೋಧ ಚರ್ಚೆ ನಡೆಯಿತು. ಇದರ ಬೆನ್ನಲ್ಲೇ, ನಿತ್ಯ 9 ಗಂಟೆ 15 ನಿಮಿಷಕ್ಕಿಂತ ಹೆಚ್ಚಿನ ಅವಧಿಗೆ ನೌಕರರು ಕೆಲಸ ಮಾಡಬಾರದು ಉದ್ಯೋಗಿಗಳಿಗೆ ಇನ್ಫೋಸಿಸ್ ಸೂಚನೆ ನೀಡಿದೆ.
ಇನ್ಫೋಸಿಸ್‌ನ ಮಾನವ ಸಂಪನ್ಮೂಲ ವಿಭಾಗವು (ಎಚ್‌ಆರ್) ಉದ್ಯೋಗಿಗಳಿಗೆ ಕೆಲಸ – ಜೀವನದ ಮಧ್ಯೆ ಸಮತೋಲನ (ವರ್ಕ್-ಲೈಫ್ ಬ್ಯಾಲೆನ್ಸ್) ಕಾಪಾಡಿಕೊಳ್ಳುವ ಕುರಿತು ಇ – ಮೇಲ್ ಮೂಲಕ ಸೂಚನೆ ನೀಡಿದೆ ಎಂಬುದಾಗಿ ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
ಓವರ್ ಟೈಮ್ ಕೆಲಸ ಮಾಡಬಾರದು ಎಂದ ಎಚ್‌ಆರ್”
ಉದ್ಯೋಗಿಗಳು ಕೆಲಸ ಮತ್ತು ಜೀವನದ ಮಧ್ಯೆ ಸಮತೋಲನ ಕಾಪಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಓವರ್ ಟೈಮ್ ಕೆಲಸ ಮಾಡಬಾರದು. ಸರಾಸರಿ ಪ್ರತಿ ದಿನ 9 ಗಂಟೆ 15 ನಿಮಿಷದಂತೆ ವಾರದ ಐದು ದಿನ ಕೆಲಸ ಮಾಡಬೇಕು. ಆರೋಗ್ಯ ಕಾಪಾಡಿಕೊಳ್ಳುವತ್ತ ಎಲ್ಲರೂ ಗಮನ ಹರಿಸಬೇಕು. ಹೆಚ್ಚಿನ ಅವಧಿಗೆ ಯಾರೂ ಕೆಲಸ ಮಾಡಬಾರದು,” ಎಂಬುದಾಗಿ ಇನ್ಫೋಸಿಸ್ ಎಚ್‌ಆರ್ ಸೂಚಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
70 ಗಂಟೆ ಕೆಲಸ ಮಾಡಬೇಕು ಎಂದಿದ್ದ ನಾರಾಯಣಮೂರ್ತಿ
ಯುವಕರು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ನಾರಾಯಣಮೂರ್ತಿ ಹೇಳಿದ್ದರು. ”ನನಗೆ ವರ್ಕ್ – ಲೈಫ್ ಬ್ಯಾಲೆನ್ಸ್‌ನಲ್ಲಿ ನಂಬಿಕೆ ಇಲ್ಲ. ದೇಶವನ್ನು ನಂಬರ್ ಒನ್ ಮಾಡಲು, ಉತ್ಪಾದನೆ ಹೆಚ್ಚಿಸಲು ಹೆಚ್ಚಿನ ಶ್ರಮ ವಹಿಸಬೇಕು. ಇದಕ್ಕಾಗಿ ವಾರದಲ್ಲಿ70 ಗಂಟೆ ಕೆಲಸ ಮಾಡಬೇಕು,” ಎಂದಿದ್ದರು. ಇದರ ಕುರಿತು ದೇಶಾದ್ಯಂತ ಚರ್ಚೆಯಾಗಿತ್ತು. ಪರ-ವಿರೋಧಗಳು ವ್ಯಕ್ತವಾಗಿದ್ದವು. ಇನ್ಫೋಸಿಸ್‌ನಲ್ಲಿ3.23 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು, ಮೈಸೂರು ಸೇರಿ ದೇಶ-ವಿದೇಶದಲ್ಲಿಬ್ರ್ಯಾಂಚ್‌ಗಳಿವೆ.
ಕಚೇರಿ ಕೆಲಸದ ಮಧ್ಯೆ ವಿಶ್ರಾಂತಿಗೂ ಸೂಚನೆ
ಉದ್ಯೋಗಿಗಳು ಕಚೇರಿಯಲ್ಲಿನಿರಂತರವಾಗಿ ಕೆಲಸ ಮಾಡುವ ಬದಲು, ಆಗಾಗ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಕೂಡ ಸೂಚಿಸಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ. ”ನಿರಂತರವಾಗಿ ಕೆಲಸ ಮಾಡಬಾರದು. ಆಗಾಗ ಬ್ರೇಕ್ ತೆಗೆದುಕೊಳ್ಳುತ್ತಿರಬೇಕು. ಉದ್ಯೋಗಿಗಳ ಜತೆ ಕೆಲಸದ ವಿಷಯದ ಹೊರತಾಗಿಯೂ ಬೇರೆ ಸಂಗತಿಗಳ ಕುರಿತು ಚರ್ಚಿಸಬೇಕು. ಕೆಲಸ ಮುಗಿದ ಬಳಿಕ ವೈಯಕ್ತಿಕ ಜೀವನ, ಆರೋಗ್ಯದ ಕಡೆ ಗಮನ ಹರಿಸಬೇಕು,” ಎಂದು ಕೂಡ ಸೂಚಿಸಲಾಗಿದೆ.













































