ಮಹುವಾ ಮೊಯಿತ್ರಾ v/s ಕಲ್ಯಾಣ್‌ ಬ್ಯಾನರ್ಜಿ ನಡುವೆ ಸಮರ; ಚೀಫ್ ವಿಪ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಲ್ಯಾಣ್

Picture of Savistara

Savistara

Bureau Report

Kalyan Banerjee: ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರಾದ ಮಹುವಾ ಮೊಯಿತ್ರಾ ಮತ್ತು ಕಲ್ಯಾಣ್ ಬ್ಯಾನರ್ಜಿ ನಡುವೆ ವೈಯಕ್ತಿಕ ಮಟ್ಟದ ನಿಂದನೆಯ ಮಾತುಗಳ ಸಮರ ನಡೆಯುತ್ತಿದ್ದು, ಸೋಮವಾರ(ಆಗಸ್ಟ್ 4) ಲೋಕಸಭೆಯ ಪಕ್ಷದ ಮುಖ್ಯ ಸಚೇತಕ ಹುದ್ದೆಗೆ ಹಿರಿಯ ಸಂಸದ ಕಲ್ಯಾಣ್ ಬ್ಯಾನರ್ಜಿ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.ದೆಹಲಿಯಲ್ಲಿ ಸಂಜೆ ಲೋಕಸಭೆ ಸಂಸದರ ಜೊತೆ ಕಾನ್ಸರೆನ್ಸ್ ಮೂಲಕ ಸಭೆ ನಡೆಸಿದ್ದ ಪಕ್ಷದ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಲೋಕಸಭೆಯಲ್ಲಿ ಸಂಸದರ ನಡುವೆ ಸಮನ್ವಯದ ಕೊರತೆ ಇದೆ ಎಂದು ಹೇಳಿದ್ದಾರೆ. ಇದು ಮಹುವಾ ಮತ್ತು ಕಲ್ಯಾಣ್ ನಡುವಿನ ಸಂಘರ್ಷದ ಕುರಿತು ಹೇಳಿದ್ದಾರೆನ್ನಲಾಗಿದ್ದು, ಇದರಿಂದ ಕಲ್ಯಾಣ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.ಇತ್ತೀಚೆಗೆ, ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ ಬಗ್ಗೆ ಚರ್ಚೆ ನಡೆಯಿತು. ಟಿಎಂಸಿ ಪರವಾಗಿ ಕಲ್ಯಾಣ್ ಬ್ಯಾನರ್ಜಿ ಮತ್ತು ಸಯಾನಿ ಘೋಷ್ ಮಾತನಾಡಿದರು. ಮೂಲಗಳ ಪ್ರಕಾರ, ಮಹುವಾ ಮೊಯಿತ್ರಾ ಸಹ ಆಪರೇಷನ್ ಸಿಂಧೂರ ಬಗ್ಗೆ ಲೋಕಸಭೆಯಲ್ಲಿ ಮಾತನಾಡಲು ಬಯಸಿದ್ದರು. ಆದರೆ ಚೀಫ್ ವಿಪ್ ಆಗಿದ್ದ ಕಲ್ಯಾಣ್ ಬ್ಯಾನರ್ಜಿ ಮಾತನಾಡಲು ಅವಕಾಶ ನೀಡಿಲ್ಲ. ಈ ಬಗ್ಗೆ ಮಹುವಾ, ಸಿಎಂ ಮಮತಾ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿರುವ ಕಲ್ಯಾಣ್, “ಈ ದಿನ ಕೆಟ್ಟದಾಗುತ್ತದೆ ಎಂದು ನಿಮಗೆ ಹೇಳಿದ್ದೆ, ಅದು ಆಗಿದೆ. ಅವರು ಏನು ಬೇಕಾದರೂ ಮಾತನಾಡಬಹುದು. ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ನನ್ನ ಘನತೆಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಇತರ ಸಂಸದರು ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿದರೆ, ಸಂತೋಷಪಟ್ಟರೆ, ಅದು ಸರಿ. ನಾನು ಎಲ್ಲರಿಗೂ ಮಾಹಿತಿ ನೀಡಿದ್ದೇನೆ, ಪಕ್ಷದ ನಾಯಕನಿಗೂ ಮಾಹಿತಿ ನೀಡಿದ್ದೇನೆ” ಎಂದು ಹೇಳಿದರು.ನಾನು ಯಾವುದೇ ರೀತಿಯಲ್ಲಿ ನಿರಾಶೆಗೊಂಡಿಲ್ಲ. ಇಂಗ್ಲೀಷ್ ಮಾತನಾಡುವ ಸುಂದರ ಮಹಿಳೆಗೆ ಪಕ್ಷದಲ್ಲಿ ಮೌಲ್ಯವಿದ್ದರೆ, ಹಾಗೇ ಮಾತನಾಡುತ್ತಾಳೆ, ಇತರೆ ಸಂಸದರನ್ನು ನಿಂದಿಸುತ್ತಾಳೆ. ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಒಳ್ಳೆಯ ಸೀರೆ ತೊಟ್ಟ ಮಾತ್ರಕ್ಕೆ ನೀವು ದೊಡ್ಡ ವ್ಯಕ್ತಿಯಾಗಲು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ಮಹುವಾ ವಿರುದ್ಧ ವಾಗ್ದಾಳಿ ನಡೆಸಿದರು.

ಮಹುವಾ ಮೊಯಿತ್ರಾ v/s ಕಲ್ಯಾಣ್ ಬ್ಯಾನರ್ಜಿ ನಡುವೆ ಸಮರ

ಜೂನ್‌ನಲ್ಲಿ ಕೋಲ್ಕತ್ತಾ ಕಾನೂನು ಕಾಲೇಜಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಟಿಎಂಸಿ ವಿದ್ಯಾರ್ಥಿ ಘಟಕದ ಇಬ್ಬರು ಸದಸ್ಯರು ಭಾಗಿಯಾಗಿರುವ ಶಂಕೆ ವ್ಯಕ್ತವಾದ ನಂತರ, ಇಬ್ಬರ ನಡುವೆ ಮಾತಿನ ಸಮರ ಮುಂದುವರೆದಿದೆ.ಪ್ರಕರಣ ಸಂಬಂಧ ಮಾತನಾಡಿದ್ದ ಕಲ್ಯಾಣ್ ಬ್ಯಾನರ್ಜಿ, ಸ್ನೇಹಿತರೇ ಸ್ನೇಹಿತೆಯನ್ನು ಅತ್ಯಾಚಾರ ಮಾಡಿದ್ರೆ, ಯಾರು ತಾನೇ ಏನು ಮಾಡೋಕೆ ಆಗುತ್ತೆ ಎಂದಿದ್ದರು. ಈ ಹೇಳಿಕೆಗೆ ಮಹುವಾ, ಕಲ್ಯಾಣ್‌ರನ್ನು ಸ್ತ್ರೀ ದ್ವೇಷಿ ಎಂದು ಕಟುವಾಗಿ ಟೀಕಿಸಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ್ದ ಕಲ್ಯಾಣ್, ಮಹುವಾ ಅವರ ವೈಯಕ್ತಿಕ ಜೀವನದ ಬಗ್ಗೆ ವಾಗ್ದಾಳಿ ನಡೆಸಿದ್ದರು. ಮೊಯಿತ್ರಾ ನನ್ನನ್ನು ಸ್ತ್ರೀ ದ್ವೇಷಿ ಎಂದು ಹೇಳುತ್ತಾರೆ. ಅವರು 40 ವರ್ಷಗಳ ಕುಟುಂಬವನ್ನು ಮುರಿದು 65 ವರ್ಷದ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಈ ಬಗ್ಗೆ ದೇಶದ ಮಹಿಳೆಯರೇ ನಿರ್ಧರಿಸುತ್ತಾರೆ ಎಂದಿದ್ದರು. ಬಿಜೆಡಿ ಮಾಜಿ ಸಂಸದ, ಹಿರಿಯ ವಕೀಲ ಪಿನಾಕಿ ಮಿಶ್ರಾ ಜೊತೆಗಿನ ಮಹುವಾ ವಿವಾಹದ ಬಗ್ಗೆ ಮಾತನಾಡಿದ್ದರು.

ಇದಕ್ಕೆ ಇತ್ತೀಚೆಗೆ ಖಾಸಗಿ ಪಾಡ್ ಕಾಸ್ಟ್ವೊಂದರಲ್ಲಿ ಪ್ರತಿಕ್ರಿಯಿಸಿದ್ದ ಮಹುವಾ, “ನೀವು ಹಂದಿಯೊಂದಿಗೆ ಕುಸ್ತಿಯಾಡಬಾರದು, ಅದಕ್ಕೆ ಇಷ್ಟವಾಗುತ್ತದೆ, ನೀವು ಕೊಳಕರಾಗುತ್ತೀರಿ. ಭಾರತದಲ್ಲಿ ಸ್ತ್ರೀ ದ್ವೇಷಿಗಳು, ಲೈಂಗಿಕವಾಗಿ ನಿರಾಸೆಗೊಂಡವರು, ಭ್ರಷ್ಟರು ಎಲ್ಲಾ ಪಕ್ಷಗಳಲ್ಲಿದ್ದಾರೆ. ಅವರು ಸಂಸತ್‌ನಲ್ಲಿ ಪಕ್ಷವನ್ನು ಮುನ್ನಡೆಸುತ್ತಾರೆ.ಈ ವಿಚಾರದಲ್ಲಿ ಸಿಎಂ ಮಮತಾರ ಮೌನ ದುರದೃಷ್ಟಕರ” ಎಂದಿದ್ದರು.

ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಕಲ್ಯಾಣ್‌ ಬ್ಯಾನರ್ಜಿ, “ಸಾರ್ವಜನಿಕ ಪಾಡ್‌ಕ್ಯಾಸ್ಟ್‌ನಲ್ಲಿ ಮಹುವಾ ಮೊಯಿತ್ರಾ ಅವರು ಇತ್ತೀಚೆಗೆ ಮಾಡಿದ ವೈಯಕ್ತಿಕ ಹೇಳಿಕೆಗಳನ್ನು ನಾನು ಗಮನಿಸಿದ್ದೇನೆ. ಸಹ ಸಂಸದರನ್ನು “ಹಂದಿ”ಗೆ ಹೋಲಿಸುವುದು ಅಮಾನವೀಯ. ನಾಗರಿಕ ಚರ್ಚೆಯ ಮೂಲಭೂತ ಮಾನದಂಡಗಳ ಬಗ್ಗೆ ಆಳವಾದ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತದೆ.ನಾನು ಸ್ಪಷ್ಟವಾಗಿ ಹೇಳುತ್ತೇನೆ, ಈ ಹಿಂದೆ ನಾನು ನೀಡಿದ ಯಾವ ಹೇಳಿಕೆಯೂ ಸ್ತ್ರೀ ದ್ವೇಷಿಯಾಗಿರಲಿಲ್ಲ. ಸಾರ್ವಜನಿಕ ಹೊಣೆಗಾರಿಕೆ ಮತ್ತು ವೈಯಕ್ತಿಕ ನಡವಳಿಕೆಯ ಪ್ರಶ್ನೆಗಳಾಗಿದ್ದವು. ಇದನ್ನು ಪ್ರತಿಯೊಬ್ಬ ಸಾರ್ವಜನಿಕ ವ್ಯಕ್ತಿ ಎದುರಿಸಲು ಸಿದ್ದರಾಗಿರಬೇಕು. ಪುರುಷ ಅಥವಾ ಮಹಿಳೆ ಯಾರೇ ಆಗಲಿ. ಸಂಗತಿಗಳು ಅನುಕೂಲ ಇದ್ದಾಗ ಸುಮ್ಮನಿರುವುದು, ಅನಾನೂಕೂಲ ಇದ್ದಾಗ ಕಾನೂನು ಬದ್ಧ ಟೀಕೆಗಳನ್ನು ಸ್ತ್ರೀದ್ವೇಷ ಎನ್ನಲಾಗಲ್ಲ.ಪುರುಷ ಸಹೋದ್ಯೋಗಿಯನ್ನು ‘ಲೈಂಗಿಕವಾಗಿ ನಿರಾಶೆಗೊಂಡ’ ಎಂದು ಹಣೆಪಟ್ಟಿ ಕಟ್ಟುವುದು ಧೈರ್ಯವಲ್ಲ, ಅದು ಸಂಪೂರ್ಣ ನಿಂದನೆ. ಒಬ್ಬ ಮಹಿಳೆ ವಿರುದ್ದ ಅಂತಹ ಭಾಷೆ ಬಳಸಿದ್ರೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತದೆ, ಅದು ಸರಿಯಾದ ನಿಲುವು. ಆದರೆ ಪುರುಷನೊಬ್ಬ ಗುರಿಯಾದರೆ ಅದನ್ನು ತಿರಸ್ಕರಿಸಲಾಗುತ್ತದೆ, ಶ್ಲಾಘಿಸಲಾಗುತ್ತದೆ. ಸ್ಪಷ್ಟವಾಗಿ ಹೇಳಬೇಕಂದರೆ ನಿಂದನೆ, ನಿಂದನೆಯೇ ಅದಕ್ಕೆ ಲಿಂಗ ಬೇಧವಿಲ್ಲ ಎಂದು ಕಿಡಿಕಾರಿದ್ದಾರೆ.

ಮೊಯಿತ್ರಾ ಅವರು ತಮ್ಮ ಕಾರ್ಯಕ್ಷಮತೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಮರೆಮಾಚಲು ವೈಯಕ್ತಿಕ ನಿಂದನೆಗಳನ್ನು ಬಳಸುತ್ತಿದ್ದಾರೆ. ಉತ್ತರಗಳ ಬದಲು ನಿಂದನೆಯನ್ನು ಅವಲಂಬಿಸಿರುವವರು ಪ್ರಜಾಪ್ರಭುತ್ವದ ಪ್ರತಿಪಾದಕರಲ್ಲ ಎಂದು ಮಹುವಾ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

[t4b-ticker]
error: Content is protected !!