ಅಯೋಧ್ಯೆ ರಾಮಮಂದಿರ: ಕೋಟಿ ಮೌಲ್ಯದ ರಾಮನ ಮೂರ್ತಿಯೇ ನಾಪತ್ತೆ..? 200 ಬೆಳ್ಳಿ ಇಟ್ಟಿಗೆ ಏನಾಯ್ತು..? ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ SIT

Picture of Savistara

Savistara

Bureau Report

ಅಯೋಧ್ಯೆ ಲಕ್ಕೋ: ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ಸಂಗ್ರಹ ಮತ್ತು ನಿಧಿ ಬಳಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತಾದ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಕುರಿತು ತನಿಖೆ ನಡೆಸಲು ರಚಿಸಲಾಗಿದ್ದ ಮೂರು ಸದಸ್ಯರ ವಿಶೇಷ ತನಿಖಾ ತಂಡವು (SIT) ತನ್ನ ಪ್ರಾಥಮಿಕ ವರದಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಮಂಗಳವಾರ ಸಲ್ಲಿಸಿದೆ.

ದೇಣಿಗೆ ರಸೀದಿಗಳಿಲ್ಲದೆ ಭಕ್ತರ ಆತಂಕ:

ದೇವಾಲಯಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡಿದರೂ ತಮಗೆ ಯಾವುದೇ ಅಧಿಕೃತ ರಸೀದಿಗಳನ್ನು ನೀಡಿಲ್ಲ ಎಂದು ಹಲವು ಭಕ್ತರು ದೂರಿದ್ದಾರೆ. ಇದು ದೇವಾಲಯದ ಟ್ರಸ್ಟ್‌ನ ಹಣಕಾಸು ನಿರ್ವಹಣೆ ಮತ್ತು ಪಾರದರ್ಶಕತೆಯ ಬಗ್ಗೆ ಸಾರ್ವಜನಿಕರಲ್ಲಿ ದೊಡ್ಡ ಮಟ್ಟದ ಸಂಶಯಗಳನ್ನು ಹುಟ್ಟುಹಾಕಿದೆ.

ನಾಪತ್ತೆಯಾಯಿತೇ ಕೋಟಿ ಮೌಲ್ಯದ ರಾಮನ ಮೂರ್ತಿ?

ರಾಮ ಮಂದಿರ ದೇಣಿಗೆ ವಿವಾದದ ನಡುವೆಯೇ. ಸಮಾಜವಾದಿ ಪಕ್ಷದ ಸಂಸದ ರಾಜೀವ್ ರಾಯ್ (Rajeev Rai ) ಮತ್ತೊಂದು ಗಂಭೀರ ಪ್ರಶ್ನೆ ಎತ್ತಿದ್ದು. ರಾಮ ಮಂದಿರಕ್ಕೆ ದೇಣಿಗೆಯಾಗಿ ನೀಡಲಾಗಿದ್ದ ಕೋಟಿ ರೂ. ಮೌಲ್ಯದ ರಾಮನ ಮೂರ್ತಿ ಎಲ್ಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ರಾಜೀವ್ ರಾಯ್, ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೊ ಹಂಚಿಕೊಂಡಿದ್ದು, ಅದರಲ್ಲಿ ತಂಜಾವೂರು ಶೈಲಿಯಲ್ಲಿ ನಿರ್ಮಿಸಲಾದ ಅಮೂಲ್ಯ ರಾಮನ ಮೂರ್ತಿಯ ಕುರಿತು ಪ್ರಸ್ತಾಪಿಸಿದ್ದಾರೆ. ಈ ಮೂರ್ತಿಯನ್ನು ಬೆಂಗಳೂರಿನ ಉದ್ಯಮಿ ಜೈ ಶ್ರೀ ಫನೀಶ್ ರಾಮ ಮಂದಿರಕ್ಕೆ ದೇಣಿಗೆಯಾಗಿ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.

“ಆರಂಭದಲ್ಲಿ ಈ ಮೂರ್ತಿಯನ್ನು ಮ್ಯೂಸಿಯಂನಲ್ಲಿ ಇರಿಸಲು ಟ್ರಸ್ಟ್ ಸೂಚಿಸಿತ್ತು. ಆದರೆ ಭಕ್ತರು ಅದನ್ನು ಒಪ್ಪದೇ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ನಿರ್ಮಿಸುತ್ತಿರುವ ಕೇದಾರೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸುವುದಾಗಿ ತಿಳಿಸಿದ್ದರು.ಇದನ್ನು ತಿಳಿದ ಬಳಿಕ ರಾಮ ಮಂದಿರ ಟ್ರಸ್ಟ್ ಮೂರ್ತಿಯನ್ನು ದೇವಾಲಯದಲ್ಲೇ ಪ್ರತಿಷ್ಠಾಪಿಸಲು ಒಪ್ಪಿಕೊಂಡಿತ್ತು.” ಎಂದು ರಾಜೀವ್ ಹೇಳಿದ್ದಾರೆ.ಆದರೆ ಈಗ ಆ ಮೂರ್ತಿ ಎಲ್ಲಿದೆ ಎಂಬುದರ ಕುರಿತು ಸ್ಪಷ್ಟನೆ ನೀಡುವಂತೆ ಅವರು ಟ್ರಸ್ಟ್‌ಗೆ ಆಗ್ರಹಿಸಿದ್ದಾರೆ.”ಈ ಮೂರ್ತಿ ಸುರಕ್ಷಿತವಾಗಿದೆಯೇ ಅಥವಾ ಕಳುವಾಗಿದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.ಈ ಬೆಳವಣಿಗೆ ರಾಮ ಮಂದಿರ ದೇಣಿಗೆ ಮತ್ತು ಆಸ್ತಿ ನಿರ್ವಹಣೆ ಕುರಿತ ವಿವಾದಕ್ಕೆ ಮತ್ತಷ್ಟು ಇಂಬು ನೀಡಿದ್ದು, ದೇವಸ್ಥಾನ ಟ್ರಸ್ಟ್‌ನ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

200 ಬೆಳ್ಳಿ ಇಟ್ಟಿಗೆಗಳ ಲೆಕ್ಕ ಕೇಳಿದ ಸಿಂಧಿ ಸಮುದಾಯ:

ರಾಮ ಮಂದಿರ ದೇಣಿಗೆ ದುರ್ಬಳಕೆ ಆರೋಪಗಳ ವಿವಾದದ ನಡುವೆ. ಸಿಂಧಿ ಸಮುದಾಯದಿಂದ ದೇವಾಲಯ ನಿರ್ಮಾಣಕ್ಕಾಗಿ ನೀಡಲಾಗಿದ್ದ 200 ಬೆಳ್ಳಿ ಇಟ್ಟಿಗೆಗಳ ಬಳಕೆ ಕುರಿತು ಪ್ರಶ್ನೆಗಳು ಕೇಳಿಬಂದಿವೆ.ಡಾ.ರಾಜು ವಿ. ಮನ್ವಾನಿ ಅವರು ಮಾತನಾಡಿ, 2021ರ ಜನವರಿ 26ರಂದು ಸಿಂಧಿ ಸಮುದಾಯದ ಪರವಾಗಿ ತಲಾ ಒಂದು ಕಿಲೋಗ್ರಾಂ ತೂಕದ 200 ಬೆಳ್ಳಿ ಇಟ್ಟಿಗೆಗಳನ್ನು ರಾಮ ಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಚಂಪತ್ ರಾಯ್ ಅವರಿಗೆ ಹಸ್ತಾಂತರಿಸಲಾಗಿತ್ತು ಎಂದು ತಿಳಿಸಿದ್ದಾರೆ.

“ಆ ಸಮಯದಲ್ಲಿ ನಮಗೆ ಯಾವುದೇ ರಸೀದಿ ನೀಡಲಾಗಿರಲಿಲ್ಲ. ಮೊದಲು ಪರಿಶೀಲಿಸಿ, ಬೆಳ್ಳಿಯನ್ನು ಎಲ್ಲಿ ಮತ್ತು ಹೇಗೆ ಬಳಸಬೇಕು ಎಂಬುದನ್ನು ನಿರ್ಧರಿಸಿ ನಂತರ ಮಾಹಿತಿ ನೀಡುವುದಾಗಿ ಹೇಳಲಾಗಿತ್ತು.ದೇವಾಲಯಕ್ಕಾಗಿ ನೀಡಿದ ದೇಣಿಗೆ ಬೇರೆಡೆ ಬಳಕೆಯಾಗಬಹುದು ಎಂಬ ಅನುಮಾನ ನಮಗಿರಲಿಲ್ಲ. ಆದರೆ ಇತ್ತೀಚಿನ ಸುದ್ದಿಗಳನ್ನು ನೋಡಿದ ನಂತರ ನಮ್ಮಲ್ಲಿ ಆತಂಕ ಶುರುವಾಯಿತು. ನಾವು ನೀಡಿದ ಬೆಳ್ಳಿ ಸರಿಯಾದ ಉದ್ದೇಶಕ್ಕೆ ಬಳಕೆಯಾಯಿತೇ ಎಂಬ ಪ್ರಶ್ನೆ ಮೂಡಿದೆ. ಅದಕ್ಕಾಗಿ ರಸೀದಿ ಹಾಗೂ ಬೆಳ್ಳಿಯ ಬಳಕೆಯ ಕುರಿತು ಮಾಹಿತಿ ನೀಡುವಂತೆ ಮನವಿ ಮಾಡಿದ್ದೇವೆ.” ಎಂದು ಮನ್‌ವಾನಿ ಹೇಳಿದ್ದಾರೆ.ಅಲ್ಲದೇ ದೇಣಿಗೆ ನೀಡಿದ ಸಂದರ್ಭದಲ್ಲಿ ಬೆಳ್ಳಿಯ ಮೌಲ್ಯ ಸುಮಾರು 1.5 ಕೋಟಿ ರೂ.ನಿಂದ 2 ಕೋಟಿ ವರೆಗೆ ಇತ್ತು. ಪ್ರಸ್ತುತ ಅದರ ಮೌಲ್ಯ 6 ರಿಂದ 7 ಕೋಟಿ ತನಕ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.ಜನರು ನೀಡಿದ ದೇಣಿಗೆಯ ಕುರಿತು ಪ್ರಶ್ನಿಸುವ ಹಕ್ಕು ಹೊಂದಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಾಯಕತ್ವದಲ್ಲಿ ಯಾವುದೂ ಅಸಾಧ್ಯವಲ್ಲ. ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚನೆಯಾಗಿರುವುದರಿಂದ, ಅಧಿಕಾರ ದುರ್ಬಳಕೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಅವರು ಆಗ್ರಹಿಸಿದ್ದಾರೆ.

SIT ವರದಿಯಲ್ಲಿ ಏನಿದೆ?

ವಿಜಯ್ ವಿಶ್ವಾಸ್‌ ಪಂತ್, ಕಿರಣ್ ಎಸ್ ಹಾಗೂ ನೀಲ್ ರತನ್ ಅವರನ್ನೊಳಗೊಂಡ ಎಸ್‌ಐಟಿ ತಂಡವು ಪ್ರಾಥಮಿಕ ತನಿಖಾ ವರದಿಯನ್ನು ಗೃಹ ಕಾರ್ಯದರ್ಶಿ ಸಂಜಯ್ ಪ್ರಸಾದ್ ಅವರಿಗೆ ಸಲ್ಲಿಸಿದೆ. ಮೂಲಗಳ ಪ್ರಕಾರ, ವರದಿಯಲ್ಲಿ ದೇಣಿಗೆ ಸಂಗ್ರಹದ ಕಾರ್ಯವಿಧಾನದಲ್ಲಿ ಗಂಭೀರ ಲೋಪಗಳು, ನಗದು ನಿರ್ವಹಣೆಯಲ್ಲಿನ ದೋಷಗಳು ಮತ್ತು ಸಿಸಿಟಿವಿ ನಿಗಾ ವ್ಯವಸ್ಥೆಯ ವೈಫಲ್ಯದ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.ಈ ವರದಿಯ ಆಧಾರದ ಮೇಲೆ ಉತ್ತರ ಪ್ರದೇಶ ಸರ್ಕಾರವು ಮುಂದಿನ ದಿನಗಳಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

[t4b-ticker]
error: Content is protected !!