ಮುಂದಿನ ಬಾರಿ ನಾನು ಸಿಎಂ ಆಗಲ್ಲ : ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಘೋಷಣೆ

Picture of Savistara

Savistara

Bureau Report

ಮುಂದಿನ (2028ರ) ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಆದರೆ, ನಾನು ಮುಖ್ಯಮಂತ್ರಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಘೋಷಿಸಿದ್ದಾರೆ.

ಮುಂದಿನ (2028ರ) ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವೇ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಆದರೆ, ನಾನು ಮುಖ್ಯಮಂತ್ರಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಘೋಷಿಸಿದ್ದಾರೆ.

ಶುಕ್ರವಾರ ಅಭಿವೃದ್ಧಿ ಕುರಿತ ಚರ್ಚೆಗೆ ಉತ್ತರ ನೀಡುವ ವೇಳೆ ಮಾತನಾಡಿದ ಅವರು, 2028ರಲ್ಲಿ ನಮ್ಮ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರುತ್ತದೆ. ಇದು ನೂರಕ್ಕೆ ನೂರ ರಷ್ಟು ಸತ್ಯ. ಆದರೆ, ಮುಂದಿನ ಅವಧಿಗೆ ನಾನು ಮುಖ್ಯ ಮಂತ್ರಿ ಆಗುವುದಿಲ್ಲ. ಇನ್ನು ಜೆಡಿಎಸ್ 2-3 ಸ್ಥಾನ ಬಂದರೆ ಅದೇ ಹೆಚ್ಚು ಹೀಗಾಗಿ ಜೆಡಿಎಸ್‌ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಲಿ ಎಂದು ಲೇವಡಿ ಮಾಡಿದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿಯಾಗಲಿ, ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಶಾಸಕ ಬಸನಗೌಡ ಯತ್ನಾಳ್ ಅವರಾಗಲಿ ಅಧಿಕಾರಕ್ಕೆ ಬರುವುದಿಲ್ಲ. ಯತ್ನಾಳ್ ಹೊಸ ಪಕ್ಷ ಮಾಡಿದರೆ ಆ ಸಾಧ್ಯತೆ ಇದ್ದರೂ ಇರಬಹುದು ಎಂದು ಇದೇ ವೇಳೆ ಕಾಲೆಳೆದರು.

ಯತ್ನಾಳ್‌ರ ತಿರುಗೇಟು:ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿ, “ನನ್ನನ್ನು ಉಚ್ಚಾಟಿತ ಎಂದು ಕರೆಯುತ್ತೀರಿ. ಆದರೆ ದೇವೇಗೌಡರು ನಿಮ್ಮನ್ನೂ ಒಮ್ಮೆ ಜೆಡಿಎಸ್‌ನಿಂದ ಉಚ್ಚಾಟಿಸಿದ್ದರು. ಆದರೂ ನೀವು ಮುಖ್ಯಮಂತ್ರಿಯಾದಿರಿ. ನಾನೂ ಸಿಎಂ ಆಗುತ್ತೇನೆ. ನೀವೇ ಹೇಳಿಬಿಟ್ಟಿದ್ದೀರಿ. ಇದು ನಿಮ್ಮ ಕೊನೆಯ ಅವಧಿ ಎಂದು. ಆದ್ದರಿಂದ, ನಿಮ್ಮ ಮತಗಳನ್ನು ಪಡೆದು ನಾನೇ ಮುಖ್ಯಮಂತ್ರಿಯಾಗುತ್ತೇನೆ” ಎಂದು ಕಾಲೆಳೆದರು.

ಜೆಡಿಎಸ್‌ಗೆ ಕಿಚಾಯಿಸಿದ ಸಿದ್ದರಾಮಯ್ಯ:ಜೆಡಿಎಸ್‌ ನಾಯಕ ಸುರೇಶ್ ಬಾಬು, “ಬಹುಮತ ಕೊರತೆಯಾದರೆ ನಮ್ಮನ್ನು ಕೇಳುವಿರಾ?” ಎಂದು ಪ್ರಶ್ನಿಸಿದಾಗ, ಸಿದ್ದರಾಮಯ್ಯ, “ನೀವು ಬಿಜೆಪಿಯೊಂದಿಗೆ ಕೈಜೋಡಿಸಿದ ದಿನದಿಂದ ಒಂಥರಾ ಅಸ್ಪೃಶ್ಯರಂತಾಗಿದ್ದೀರಿ. ಜೆಡಿಎಸ್‌ಗೆ ಯಾವ ಸಿದ್ಧಾಂತವೂ ಇಲ್ಲ. ನಾನು ಜೆಡಿಎಸ್‌ನ ಅಧ್ಯಕ್ಷನಾಗಿದ್ದಾಗ 59 ಸ್ಥಾನ ಗೆದ್ದಿದ್ದೆವು. ಈಗ ನೀವು 18ಕ್ಕೆ ಇಳಿದಿದ್ದೀರಿ, ಮುಂದಿನ ಬಾರಿ 2-3 ಸೀಟುಗಳಿಗೆ ತೃಪ್ತಿಪಡಬೇಕಾಗುತ್ತದೆ. ಬಿಜೆಪಿಯೊಂದಿಗೆ ವಿಲೀನವಾಗಲು ದೇವೇಗೌಡರಿಗೆ ಸಲಹೆ ಕೊಡಿ” ಎಂದು ತಿರುಗೇಟು ನೀಡಿದರು.ಸಿದ್ದರಾಮಯ್ಯ ಮತ್ತೆ ಒತ್ತಿಹೇಳಿದರು, “ಹೌದು, ನಾನು ಮುಂದಿನ ಬಾರಿ ಸಿಎಂ ಆಗುವುದಿಲ್ಲ. ಆದರೆ ನೀವೂ ಆಗುವುದಿಲ್ಲ. ನಮ್ಮ ಮತಗಳು ನಿಮಗೆ ಸಿಗುವುದೇ ಇಲ್ಲ. ನೀವು ಎಸ್‌ಸಿ, ಎಸ್‌ಟಿ, ಒಬಿಸಿ, ಮತ್ತು ಅಲ್ಪಸಂಖ್ಯಾತರ ವಿರೋಧಿಗಳು.” ಇದಕ್ಕೆ ಯತ್ನಾಳ್, “ನಾನು ಸಮನ್ವಯ ರಾಜಕಾರಣದ ವಿರುದ್ಧ ಹೊಸ ಪಕ್ಷ ಕಟ್ಟುತ್ತೇನೆ. ನಾನು ಎಸ್‌ಸಿ, ಎಸ್‌ಟಿ, ಒಬಿಸಿ ವಿರೋಧಿಯಲ್ಲ. ದೇಶದ್ರೋಹಿಗಳ ವಿರೋಧಿ. ‘ಟೋಪಿ’ ಹಾಕಿದವರ ಮತ ಬೇಡ ಎಂದಿದ್ದೇನೆ. ಈಗಲೂ ಆಡುತ್ತೇನೆ” ಎಂದು ಪ್ರತಿಕ್ರಿಯಿಸಿದರು.

ಅಶೋಕ್‌ರಿಂದ ತೆರೆ:ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಕಳೆದ 30 ವರ್ಷಗಳಲ್ಲಿ ಯಾವ ಸರ್ಕಾರವೂ ಮರು ಆಯ್ಕೆಯಾಗಿಲ್ಲ. 2028ರಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಇದನ್ನು ಜನರು ನಿರ್ಧರಿಸುತ್ತಾರೆ” ಎಂದು ಚರ್ಚೆಗೆ ತೆರೆ ಎಳೆದರು.

[t4b-ticker]
error: Content is protected !!