ಟೆಹರಾನ್: ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಅಮೆರಿಕದ ಹಸ್ತಕ್ಷೇಪ ಕೊನೆಯಾಗುವವರೆಗೆ ಹೊರ್ಮುಜ್ ಜಲಮಾರ್ಗವನ್ನು ಬಂದ್ ಮಾಡುವಾಗಿ ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಶನಿವಾರ ಘೋಷಿಸಿದೆ.
‘ಬಾಹ್ಯ ಶಕ್ತಿಗಳ ಕಾನೂನುಬಾಹಿರ ಹಸ್ತಕ್ಷೇಪದಿಂದ ಉಂಟಾಗಿರುವ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಐಆರ್‌ಜಿಸಿ ತಿಳಿಸಿರುವುದಾಗಿ ‘ಪ್ರೆಸ್ ಟಿವಿ’ ವರದಿ ಮಾಡಿದೆ.’ಮುಂದಿನ ಸೂಚನೆ ನೀಡುವವರೆಗೂ ಹೊರ್ಮುಜ್ ಜಲಮಾರ್ಗದಲ್ಲಿ ಸಂಚಾರ ನಿರ್ಬಂಧಿಸಲಾಗುವುದು. ಅಮೆರಿಕವು ಈ (ಪಶ್ಚಿಮ ಏಷ್ಯಾ) ಭಾಗದಲ್ಲಿ ತನ್ನ ಹಸ್ತಕ್ಷೇಪವನ್ನು ಕೊನೆಗೊಳಿಸುವವರಗೆ ಕ್ರಮ ಮುಂದುವರಿಯಲಿದೆ. ಯಾವುದೇ ಹಡಗು ಜಲಮಾರ್ಗದಲ್ಲಿ ಸಂಚರಿಸಲು ಬಿಡುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ.
ಈ ಕ್ರಮಕ್ಕೆ ಪ್ರತಿಯಾಗಿ ಇರಾನ್ ವಿರುದ್ಧ ಕೈಗೊಳ್ಳುವ ಯಾವುದೇ ಮಿಲಿಟರಿ ಕ್ರಮಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು ಎಂದು ನೌಕಾಪಡೆಯೂ ಎಚ್ಚರಿಕೆ ನೀಡಿದೆ.
‘ಈ ಬೆಳವಣಿಗೆಗೆ ಶತ್ರುಗಳ ಆಕ್ರಮಣವೇ ಕಾರಣ. ಆದರೆ, ಇದನ್ನೇ ನೆಪ ಮಾಡಿಕೊಂಡು ಮತ್ತೊಂದು ದಾಳಿ ನಡೆಸಿದರೆ, ಬಲವಾದ ಪ್ರತಿಕ್ರಿಯೆ ನೀಡಲಾಗುವುದು. ಈ ಪ್ರದೇಶದಲ್ಲಿರುವ ಶತ್ರುಗಳ ಹೆಚ್ಚಿನ ನೆಲೆಗಳು ನಮ್ಮ ಗುರಿಯಾಗಲಿವೆ’ ಎಂದು ಹೇಳಿಕೆಯಲ್ಲಿ ತಿಳಿಸಿದೆ.ಇರಾನ್ ಮೇಲಿನ ದಾಳಿಗೆ ಅಮೆರಿಕ, ಇಸ್ರೇಲ್ ಮಾತ್ರವಲ್ಲದೆ, ಅವುಗಳ ಸೇನಾ ಕಾರ್ಯಾಚರಣೆಗೆ ಮಿಲಿಟರಿ ಸೌಕರ್ಯ, ನೆಲೆ ಒದಗಿಸಿರುವ ರಾಷ್ಟ್ರಗಳೂ ಮುಂದೆ ಆಗುವುದಕ್ಕೆ ಹೊಣೆಯಾಗಲಿವೆ ಎಂದು ಎಚ್ಚರಿಸಿದೆ.ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕತಾರ್ ಸಂಧಾನಕಾರರು ಎರಡು ಬಣದವರೊಂದಿಗೆ ಮಾತುಕತೆ ನಡೆಸುತ್ತಿರುವ ಹೊತ್ತಿನಲ್ಲಿ ಈ ಬೆಳವಣಿಗೆಯಾಗಿದೆ.








































