ವಿಧಿಯ ಹಣೆಬರಹವನ್ನೇ ಬೂಟಿನ ಕಾಲಿನಿಂದ ಒದ್ದ ಮಹಾ ಹಠಮಾರಿ..ಆತ ಮೈದಾನಕ್ಕಿಳಿದರೆ ಸಾಕು, ಅಲ್ಲಿಯವರೆಗೆ ಬಿಸಿಲುಗುದುರೆಯಾಗಿದ್ದ ಕ್ರೀಡಾಂಗಣವೊಂದು ಕ್ಷಣಮಾತ್ರದಲ್ಲಿ ಜ್ವಾಲಾಮುಖಿಯಾಗಿ ಮಾರ್ಪಡುತ್ತದೆ. ಗ್ಯಾಲರಿಯಲ್ಲಿ ಕೂತ ಲಕ್ಷಾಂತರ ಜೀವಗಳು ಉಸಿರು ಬಿಗಿಹಿಡಿದು ಕಾಯುತ್ತವೆ. ಆ ಕಾಲಿನಲ್ಲೊಂದು ಮಂತ್ರವಿದೆ, ಆ ಕಣ್ಣುಗಳಲ್ಲಿ ಹದ್ದಿನ ತೀಕ್ಷ್ಣತೆಯಿದೆ, ಆ ಎದೆಯೊಳಗೆ ಸೋಲನ್ನೇ ಒಪ್ಪದ ಹಠಮಾರಿತನವಿದೆ. ಆತನೇ ಕ್ರಿಸ್ಟಿಯಾನೋ ರೊನಾಲ್ಡೊ!ಇದು ಬರೀ ಒಬ್ಬ ಆಟಗಾರನ ಕಥೆಯಲ್ಲ, ಇದು ವಿಧಿಯ ಹಣೆಬರಹವನ್ನು ತನ್ನ ಬೂಟಿನ ಕಾಲಿನಿಂದ ಒದ್ದು ಬದಲಾಯಿಸಿದ ಮಹಾ ಹಠಮಾರಿ ಕಣ್ಣೀರ ಕಥೆ! ಪ್ರತಿಯೊಬ್ಬ ಸೋತ ಮನುಷ್ಯನೂ ಕಣ್ಣಲ್ಲಿ ನೀರಿಟ್ಟುಕೊಂಡು ಓದಬೇಕಾದ ದೇವಕಥೆ.ಮಡೈರಾ ಎನ್ನುವ ಪೋರ್ಚುಗಲ್‌ನ ಒಂದು ಸಣ್ಣ ದ್ವೀಪ. ಜಗತ್ತಿನ ಭೂಪಟದಲ್ಲಿ ಹುಡುಕಿದರೂ ಸುಲಭವಾಗಿ ಸಿಗದ ಆ ಪುಟ್ಟ ಜಾಗದ ಭೀಕರ ಬಡತನದ ನಡುವೆ ಹುಟ್ಟಿದವನು ಈ ರೊನಾಲ್ಡೊ. ಅಪ್ಪ ತೋಟಗಾರ, ಹೋದ ಕಡೆಯಲ್ಲೆಲ್ಲಾ ಕುಡಿದು ತೇಲುವ ಮನುಷ್ಯ. ಲಿವರ್ ಹಾಳುಮಾಡಿಕೊಂಡು ಸಾವು ಸನಿಹದಲ್ಲಿದೆ ಎಂದು ಗೊತ್ತಿದ್ದೂ ಬಾಟಲಿಗೆ ಶರಣಾದ ಅತೃಪ್ತ ಆತ್ಮ. ಅಮ್ಮ ಬೇರೆಯವರ ಮನೆಯಲ್ಲಿ ಪಾತ್ರೆ ತೊಳೆದು, ನೆಲ ಒರೆಸಿ ಹೊಟ್ಟೆ ಹೊರೆಯುತ್ತಿದ್ದ ಹೆಣ್ಣುಮಗಳು. ಇಂತಹ ಕತ್ತಲ ಕೋಣೆಯಲ್ಲಿ ಹುಟ್ಟಿದ ಹುಡುಗನಿಗೆ ತಿನ್ನಲು ಸರಿಯಾಗಿ ಅನ್ನವಿರಲಿಲ್ಲ, ಹಾಕಿಕೊಳ್ಳಲು ಒಳ್ಳೆಯ ಬಟ್ಟೆಯಿರಲಿಲ್ಲ.ಆದರೆ, ಆತನ ಬಳಿ ಒಂದಿತ್ತು… ಅದೇ ಕಣ್ಣು ಕತ್ತರಿಸುವಂತಹ ಕನಸು..!ಬೀದಿಯ ಕಲ್ಲು-ಮುಳ್ಳುಗಳ ನಡುವೆ, ಹರಿದುಹೋದ ಚಿಂದಿ ಚೆಂಡನ್ನು ಒದೆಯುತ್ತಾ ಬೆಳೆದ ಈ ಹುಡುಗನಿಗೆ ಫುಟ್‌ಬಾಲ್ ಅಂದರೆ ಬರೀ ಆಟವಾಗಿರಲಿಲ್ಲ, ಅದು ಬದುಕಿನ ಹಸಿವನ್ನು ಮರೆಸುವ ಅಮಲಾಗಿತ್ತು. ಹಸಿವು ಹೊಟ್ಟೆಯನ್ನು ಚುರುಗುಟ್ಟುವಾಗ ಆತ ಚೆಂಡನ್ನು ಮತ್ತಷ್ಟು ಜೋರಾಗಿ ಒದೆಯುತ್ತಿದ್ದ. ಯಾಕೆ ಗೊತ್ತಾ? ಆ ಕಾಲಿನ ಒದೆತದಲ್ಲಿ ಬಡತನದ ಮೇಲಿನ ಆಕ್ರೋಶವಿತ್ತು!ಹದಿನಾಲ್ಕರ ಪ್ರಾಯ. ಜಗತ್ತನ್ನು ಗೆಲ್ಲಬೇಕಾದ ವಯಸ್ಸದು. ಆದರೆ ವಿಧಿ ಕ್ರೂರವಾಗಿ ನಕ್ಕಿತ್ತು. ಹಾರ್ಟ್ ಸರ್ಜರಿ ಆಗಬೇಕಾಗಿ ಬಂತು. ಎದೆ ಸೀಳುವ ಮುನ್ನ ವೈದ್ಯರು ಹೇಳಿದರು, “ಇನ್ನು ಮುಂದೆ ನೀನು ಓಡುವಂತಿಲ್ಲ, ಆಡುವಂತಿಲ್ಲ. ಜೋರಾಗಿ ಉಸಿರಾಡಿದರೂ ನಿನ್ನ ಹೃದಯ ನಿಂತುಹೋಗಬಹುದು.”ಸಾಮಾನ್ಯ ಹುಡುಗನಾಗಿದ್ದರೆ ಅಲ್ಲಿಗೇ ಕಣ್ಣೀರು ಹಾಕಿ, ಹಣೆಬರಹವನ್ನು ಶಪಿಸುತ್ತಾ ಸುಮ್ಮನಾಗುತ್ತಿದ್ದ. ಆದರೆ ಈ ರೊನಾಲ್ಡೊ ಬೇರೆ ಮಣ್ಣಿನಿಂದ ಮಾಡಲ್ಪಟ್ಟಿದ್ದ. ಆತ ಸಾವಿನ ಮುಖಕ್ಕೆ ನೋಡಿ ನಕ್ಕಿದ್ದ. ಆಪರೇಷನ್ ಆದ ಕೆಲವೇ ದಿನಗಳಲ್ಲಿ ಮತ್ತೆ ಮೈದಾನಕ್ಕೆ ಬಂದು ನಿಂತಾಗ ವಿಧಿಯೇ ಒಂದು ಕ್ಷಣ ಬೆಚ್ಚಿ ಬಿದ್ದಿರಬೇಕು! ಸಾವು ಹೆದರಿ ಹಿಂದೆ ಸರಿದಿತ್ತು.”ನನ್ನ ಕಷ್ಟಗಳು ನನ್ನನ್ನು ಕುಗ್ಗಿಸಲಿಲ್ಲ, ಬದಲಿಗೆ ನನ್ನೊಳಗಿನ ಸಿಂಹವನ್ನು ಎಬ್ಬಿಸಿದವು.”ರೊನಾಲ್ಡೊ ಬದುಕಿನ ಸೂತ್ರವೇ ಇದು. ದಿನಕ್ಕೆ ಹತ್ತಾರು ಗಂಟೆಗಳ ಕಠಿಣ ಪರಿಶ್ರಮ. ಜಗತ್ತು ನಿದ್ರಿಸುವಾಗ ಈತ ಮೈದಾನದಲ್ಲಿ ಬೆವರುತ್ತಿದ್ದ. ಬೆವರು ಹನಿಗಳಲ್ಲ, ಮೈದಾನದಲ್ಲಿ ರಕ್ತವನ್ನೇ ಸುರಿಸಿ ಆತ ತನ್ನ ದೇಹವನ್ನು ಒಂದು ಅದ್ಭುತ ಯಂತ್ರದಂತೆ ರೂಪಿಸಿಕೊಂಡ. ಆ ಸಿಕ್ಸ್ ಪ್ಯಾಕ್ ಅಡಿಯಲ್ಲಿರುವುದು ಕೇವಲ ಮಾಂಸಖಂಡಗಳಲ್ಲ, ಅಪಮಾನದ ಕಲೆಗಳು!ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್, ಜುವೆಂಟಸ್… ಆತ ಹೋದ ಕಡೆಯಲ್ಲೆಲ್ಲಾ ಇತಿಹಾಸ ಬರೆಯುತ್ತಾ ಹೋದ. ಐದು ಬಾರಿ ‘ಬ್ಯಾಲನ್ ಡಿ ಓರ್’ ಪ್ರಶಸ್ತಿ ಗೆದ್ದು, ವಿಶ್ವದ ಅತಿ ಹೆಚ್ಚು ಗೋಲು ಬಾರಿಸಿದ ಧೀರನಾಗಿ ನಿಂತಾಗ ಇಡೀ ಜಗತ್ತು ಆತನ ಕಾಲಿಗೆ ನಮಸ್ಕರಿಸಿತು. ರೊನಾಲ್ಡೊ ಮೈದಾನದಲ್ಲಿ ಹಾರುವಾಗ ಗಾಳಿಗೂ ಒಂದು ಕ್ಷಣ ಮತ್ಸರವಾಗುತ್ತದೆ. ಆ ‘CR7’ ಎಂಬ ಬ್ರ್ಯಾಂಡ್‌ನ ಹಿಂದೆ ಇರುವುದು ಕೇವಲ ಪಬ್ಲಿಸಿಟಿ ಅಲ್ಲ, ಅದರ ಹಿಂದೆ ಕೋಟ್ಯಂತರ ಅಭಿಮಾನಿಗಳ ಹೃದಯ ಬಡಿತವಿದೆ.ಜನ ಆತನನ್ನು ಅಹಂಕಾರಿ ಅಂದುಕೊಳ್ಳುತ್ತಾರೆ. ತಲೆ ಎತ್ತಿ ನಡೆಯುತ್ತಾನೆ, ಗರ್ವದ ಕಣ್ಣುಗಳಿವು ಎನ್ನುತ್ತಾರೆ. ಆದರೆ ಆ ಕಲ್ಲಿನಂತಹ ದೇಹದೊಳಗೆ ಒಂದು ಮೃದುವಾದ ತಾಯಿಯ ಮನಸ್ಸಿದೆ.ತನ್ನ ಮೈಮೇಲೆ ಒಂದೇ ಒಂದು ಹಚ್ಚೆ ಹಾಕಿಸಿಕೊಳ್ಳದ ಏಕೈಕ ಸ್ಟಾರ್ ಆಟಗಾರ ಈತ. ಇಂದಿನ ಯುವಕರು ಸ್ಟೈಲಿಗಾಗಿ ಮೈಯನ್ನೆಲ್ಲಾ ಕರಡಾಗಿಸಿಕೊಳ್ಳುವಾಗ, ಈ ಬಿಲಿಯನೇರ್ ದೇವನ ಮೈಮೇಲೆ ಒಂದು ಇಂಚು ಮಸಿಯೂ ಇಲ್ಲ. ಕಾರಣ ಕೇಳಿದರೆ ಕಣ್ಣಾಲಿಗಳು ತುಂಬಿ ಬರುತ್ತವೆ,”ನಾನು ನಿಯಮಿತವಾಗಿ ರಕ್ತದಾನ ಮಾಡುತ್ತೇನೆ, ಹಚ್ಚೆ ಹಾಕಿಸಿಕೊಂಡರೆ ರಕ್ತ ಕೊಡಲು ಸಾಧ್ಯವಿಲ್ಲ. ನನ್ನ ರಕ್ತ ಯಾರದ್ದೋ ಜೀವ ಉಳಿಸಬಹುದಾದರೆ, ನನಗೀ ಸ್ಟೈಲುಗಳ ಅವಶ್ಯಕತೆಯಿಲ್ಲ.”ಕೋಟಿ ಕೋಟಿ ಹಣವನ್ನು ಕ್ಯಾನ್ಸರ್ ಪೀಡಿತ ಮಕ್ಕಳಿಗೆ, ಯುದ್ಧ ಪೀಡಿತ ಅನಾಥ ಆಶ್ರಮಗಳಿಗೆ ದಾನ ಮಾಡುವ ಈತನ ಔದಾರ್ಯ ಆತನ ಗೋಲುಗಳಿಗಿಂತಲೂ ದೊಡ್ಡದು. ತನಗೆ ಸಿಕ್ಕ ಪ್ರಶಸ್ತಿಗಳನ್ನು ಮಾರಿ ಆ ಹಣವನ್ನು ಬಡವರ ಹೊಟ್ಟೆಗೆ ತಂಪು ಮಾಡಲು ನೀಡಿದ ಹೃದಯವಂತ ಈತ.ಗೆಳೆಯರೇ, ರೊನಾಲ್ಡೊ ಇವತ್ತು ಕೇವಲ ಫುಟ್‌ಬಾಲ್ ಆಟಗಾರನಾಗಿ ಉಳಿದಿಲ್ಲ. ಆತ ಸೋತು ಸುಣ್ಣವಾಗಿ ಸವೆದುಹೋಗುವ ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೂ ಒಂದು ಭರವಸೆಯ ಬೆಳಕು. ನಿನ್ನ ಕೈಯಲ್ಲಿ ಏನೂ ಇಲ್ಲದಾಗ, ಇಡೀ ಜಗತ್ತೇ ನಿನ್ನನ್ನು ಹೀಯಾಳಿಸುವಾಗ, ನಿನ್ನ ದೇಹವೇ ನಿನಗೆ ಸಾಥ್ ಕೊಡದಿದ್ದಾಗ… ಎದ್ದು ನಿಲ್ಲುವುದು ಹೇಗೆ ಎಂಬುದನ್ನು ಈ ಮನುಷ್ಯ ಕಲಿಸುತ್ತಾನೆ.ಬಡತನ, ರೋಗ, ತಂದೆಯ ಸಾವು, ನಿಂದನೆ, ಅಪಮಾನ… ಇವೆಲ್ಲವನ್ನೂ ಮೆಟ್ಟಿ ನಿಂತು ಹೇಗೆ ಸಿಂಹಾಸನ ಏರಬೇಕು ಎಂಬುದಕ್ಕೆ ರೊನಾಲ್ಡೊಗಿಂತ ದೊಡ್ಡ ಉದಾಹರಣೆ ಬೇಕಿಲ್ಲ. ವಿಧಿ ಬರೆದ ಹಣೆಬರಹ ಅಂತಿಮವಲ್ಲ, ನಮ್ಮೊಳಗಿನ ಹಠದ ಮುಂದೆ ಆ ವಿಧಿಯೂ ಮಂಡಿಯೂರಿ ಕೂರಬೇಕು ಎಂಬುದಕ್ಕೆ ಈ CR7 ಸಾಕ್ಷಿ.ಇತಿಹಾಸದಲ್ಲಿ ರಾಜರು ಬರುತ್ತಾರೆ, ಹೋಗುತ್ತಾರೆ. ಸಾಮ್ರಾಜ್ಯಗಳು ಹುಟ್ಟಿ ಧೂಳೀಪಟವಾಗುತ್ತವೆ. ಆದರೆ ಈ ಫುಟ್‌ಬಾಲ್ ಸಾಮ್ರಾಜ್ಯಕ್ಕೆ ರೊನಾಲ್ಡೊ ಒಬ್ಬನೇ ರಾಜ… ಕೊನೆಯವರೆಗೂ ಆತನೇ ಸಾರ್ವಭೌಮ.
ಹಠ ಬಿಡದ ಮನಸ್ಸುಗಳಿಗೆ ಈ ಅಕ್ಷರ ನಮನ,— ಶ್ರೀಧರ್ ಚಿಕ್ಕಬಳ್ಳಾಪುರ









































