ಅಂಕಾರ: ‘ಇರಾನ್ ಜತೆಗಿನ ಮಧ್ಯಂತರ ಕದನ ವಿರಾಮ ಒಪ್ಪಂದ ಮುಗಿದಿದೆ, ಮತ್ತೆ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದು, ಇದು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಪುನರಾರಂಭಗೊಳ್ಳುವ ಆತಂಕ ಹೆಚ್ಚಿಸಿದೆ.
ಇರಾನ್‌ನ ಹಲವು ನೆಲೆಗಳನ್ನು ಗುರಿಯಾಗಿಸಿ ಅಮೆರಿಕ ಸೇನೆ ಮಂಗಳವಾರ ರಾತ್ರಿ ದಾಳಿ ನಡೆಸಿದೆ. ಈ ದಾಳಿಗೆ ಪ್ರತಿಯಾಗಿ ಬಹರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿರುವುದಾಗಿ ಇರಾನ್ ಸೇನೆ ಹೇಳಿದೆ.ಟರ್ಕಿಯ ಅಂಕಾರದಲ್ಲಿ ನಡೆಯುತ್ತಿರುವ ನ್ಯಾಟೊ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್, ‘ನನ್ನ ಮಟ್ಟಿಗೆ ಇರಾನ್ ಜತೆಗಿನ ತಾತ್ಕಾಲಿಕ ಕದನ ವಿರಾಮ ಒಪ್ಪಂದ ಮುಗಿದ ಅಧ್ಯಾಯ. ಈ ವಿಚಾರವಾಗಿ ಮತ್ತೆ ನನ್ನ ಸಮಯ ವ್ಯರ್ಥ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಅವರು (ಇರಾನ್) ದುಷ್ಟರು ಮತ್ತು ಮೂರ್ಖರು. ಆದಾಗ್ಯೂ, ನಮ್ಮ ಸಂಧಾನಕಾರರು ಮಾತುಕತೆ ಮುಂದುವರಿಸಲು ಸಿದ್ಧರಿದ್ದಾರೆ. ಆದರೆ, ಅದು ಇರಾನ್‌ಗೆ ಬೇಕಿದ್ದರೆ ಮಾತ್ರ, ಅಂತಹ ಸಾಧ್ಯತೆಗಳು ಕಡಿಮೆ’ ಎಂದು ಹೇಳಿದ್ದಾರೆ.’ಅಣ್ವಸ್ತ್ರ ಹೊಂದುವುದಿಲ್ಲ ಎಂದು ಇರಾನ್ ಒಪ್ಪಿಕೊಂಡಿತ್ತು. ಹೀಗಾಗಿ ಅವರೊಂದಿಗೆ ಮಧ್ಯಂತರ ಒಪ್ಪಂದ ಮಾಡಿಕೊಂಡೆವು. ಈಗ ಅಲ್ಲಗಳೆಯುತ್ತಿದ್ದಾರೆ. ಅವರು ಸುಳ್ಳುಗಾರರು’ ಎಂದು ಟ್ರಂಪ್ ಕಿಡಿಕಾರಿದ್ದಾರೆ.
‘ಇರಾನ್ ಮತ್ತು ಅಲ್ಲಿನ ಆಡಳಿತ ವ್ಯವಸ್ಥೆ ರೋಗದಿಂದ ನರಳುತ್ತಿದೆ. ಆ ದೇಶವನ್ನು ದುಷ್ಟರು ಮುನ್ನಡೆಸುತ್ತಿದ್ದಾರೆ. ಅವರ ಬಳಿ ಅಣ್ವಸ್ತ್ರ ಇದ್ದರೆ ಅದನ್ನು ಬಳಸುತ್ತಿದ್ದರು’ ಎಂದು ಹೇಳಿದ್ದಾರೆ.ಜೂನ್ 17ರಂದು ಮಾಡಿಕೊಂಡಿರುವ ಮಧ್ಯಂತರ ಒಪ್ಪಂದದ ವಿಷಯವಾಗಿ, ತಮ್ಮ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಶ್ವೇತಭವನದ ಸಲಹೆಗಾರ ಜಾರೆಡ್ ಕಶ್ವರ್ ಅವರೊಂದಿಗೆ ಮಾತುಕತೆ ನಡೆಸುವುದಾಗಿಯೂ ಟ್ರಂಪ್ ಹೇಳಿದ್ದಾರೆ.
ಇರಾನ್ ಮೇಲೆ ತೀವ್ರ ದಾಳಿ
ದುಬೈ: ಇರಾನ್ ರಕ್ಷಣಾ ವ್ಯವಸ್ಥೆ, ರೇಡಾರ್ ಸೌಲಭ್ಯ ಮತ್ತು 60ಕ್ಕೂ ಹೆಚ್ಚು ಬೋಟ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವ ಅಮೆರಿಕ, ಅಲ್ಲಿನ ಬಂದರು ಮತ್ತು ತೈಲ ಘಟಕಗಳ ಮೇಲೆ ಮತ್ತೆ ನಿರ್ಬಂಧ ಹೇರಲು ಮುಂದಾಗಿದೆ. ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ, ಈ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ.ಮಧ್ಯಂತರ ಕದನ ವಿರಾಮ ಒಪ್ಪಂದದ ಪ್ರಕಾರ, ಜಾಗತಿಕವಾಗಿ ಇರಾನ್ ತೈಲ ಮಾರಾಟಕ್ಕೆ ನೀಡಿದ ಪರವಾನಗಿಯನ್ನು ಅಮೆರಿಕ ರದ್ದುಪಡಿಸಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಹೊಸ ದಾಳಿಗಳು ಹೊರ್ಮುಜ್ ಜಲಸಂಧಿಯಲ್ಲಿ ಬಿಕ್ಕಟ್ಟು ಹೆಚ್ಚಿಸಿದ್ದು, ಹಡಗುಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗಿದೆ. ಇರಾನ್ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ, ಅಮೆರಿಕ -ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಹತರಾದ ಬೆನ್ನಲ್ಲೇ, ಫೆಬ್ರುವರಿ 28ರಿಂದ ಪಶ್ಚಿಮ ಏಷ್ಯಾ ಸಂಘರ್ಷ ಆರಂಭವಾಗಿತ್ತು. ಖಮೇನಿ ಅವರ ಅಂತ್ಯಕ್ರಿಯೆ ವಿಧಿಗಳು ಜುಲೈ 9ರಂದು ಪೂರ್ಣಗೊಳ್ಳಲಿದ್ದು, ಮತ್ತೆ ಯುದ್ಧಾರಂಭದ ಅಪಾಯ ಹೆಚ್ಚಿದೆ.
ಟ್ರಂಪ್ ಆಟಕ್ಕೆ ಮಾರುಕಟ್ಟೆ ಪತನ
ಮುಂಬೈ (ಪಿಟಿಐ): ಇರಾನ್ ಜೊತೆಗಿನ ಮಧ್ಯಂತರ ಒಪ್ಪಂದದಕಥೆ ಮುಗಿದಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಯ ಪರಿಣಾಮವಾಗಿ ಭಾರತದ ಷೇರುಪೇಟೆ ಸೂಚ್ಯಂಕಗಳು ಬುಧವಾರ ದೊಡ್ಡ ಮಟ್ಟದ ಕುಸಿತ ದಾಖಲಿಸಿದವು.55ಅಲ್ಲದೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ತೀವ್ರ ಪ್ರಮಾಣದಲ್ಲಿ ಜಿಗಿಯಿತು. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 52 ಪೈಸೆಯಷ್ಟು ಕುಸಿತ ಕಂಡಿತು. ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ₹8.96 ಲಕ್ಷ ಕೋಟಿಯಷ್ಟು ಕರಗಿದೆ.









































