‘ಜಿ ರಾಮ್‌ ಜಿ’ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ: ವಿರೋಧ ಪಕ್ಷಗಳಿಂದ ಆಕ್ಷೇಪ

Picture of Savistara

Savistara

Bureau Report

ನವದೆಹಲಿ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (ನರೇಗಾ) ಹೆಸರಿನಲ್ಲಿ ಮಹಾತ್ಮ ಗಾಂಧಿ ಹೆಸರು ಕೈಬಿಟ್ಟಿರುವುದು, ರಾಜ್ಯಗಳ ಮೇಲೆ ಶೇ 40ರಷ್ಟು ಹೊರ ಹೊರಿಸಿರುವುದು ಸೇರಿ ಇತರೆ ವಿಚಾರಗಳಿಗೆ ಸಂಬಂಧಿಸಿ ವಿರೋಧ ಪಕ್ಷಗಳ ತೀವ್ರ ಆಕ್ಷೇಪದ ಮಧ್ಯೆಯೇ ಕೇಂದ್ರ ಸರ್ಕಾರವು “ವಿಕಸಿತ ಭಾರತ- ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆ, 2025′ ಅನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿತು.

ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ ಅವರು ಮಸೂದೆಯನ್ನು ಮಂಡಿಸಿದರು. ನರೇಗಾ ಕಾಯ್ದೆಯ ಹೆಸರನ್ನು ಬದಲಿಸಿ ‘ಪೂಜ್ಯ ಬಾಪು ಗ್ರಾಮೀಣ ರೋಜಗಾರ್ ಯೋಜನೆ’ ಎಂಬ ಹೆಸರಿಡಲು ಈ ಮೊದಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.ಆದರೆ, ಅಂತಿಮವಾಗಿ ಕೇಂದ್ರವು ನರೇಗಾ ಕಾಯ್ದೆಯನ್ನೇ ಹಿಂಪಡೆಯಲು ಹೊಸ ಮಸೂದೆ ಮಂಡಿಸಿದೆ.

ಶಿವರಾಜ್ ಸಿಂಗ್ ಚೌಹಾಣ್ ಅವರು ಮಸೂದೆ ಮಂಡಿಸುತ್ತಿದ್ದಂತೆಯೇ, ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಡಿಎಂಕೆ ಪಕ್ಷದ ಟಿ.ಆ‌ರ್. ಬಾಲು, ಆರ್‌ಎಸ್‌ಪಿ ಪಕ್ಷದ ಎನ್.ಜೆ. ಪ್ರೇಮಚಂದ್ರನ್ ಸೇರಿದಂತೆ ವಿರೋಧ ಪಕ್ಷದ ಹಲವು ಸಂಸದರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ‘ಈ ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಿ’ ಎಂದು ಪಟ್ಟುಹಿಡಿದರು.’ಗ್ರಾಮೀಣಾಭಿವೃದ್ಧಿಗಾಗಿ ಹಿಂದಿನ ಎಲ್ಲ ಸರ್ಕಾರಗಳಿಗಿಂತ ಮೋದಿ ಸರ್ಕಾರವು ಹೆಚ್ಚಿನ ಕೆಲಸ ಮಾಡಿದೆ. ಕೇಂದ್ರ ಸರ್ಕಾರವು ನರೇಗಾ ಯೋಜನೆಯನ್ನು ದುರ್ಬಲಗೊಳಿಸಿಲ್ಲ. ಯಾಕೆಂದರೆ, 100 ಕೆಲಸದ ದಿನಗಳನ್ನು 125 ಕೆಲಸದ ದಿನಗಳಿಗೆ ಏರಿಸಿದ್ದೇವೆ’ ಎಂದು ಸಚಿವ ಚೌಹಾಣ್‌ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ: ಕೇಂದ್ರ ಸರ್ಕಾರವು ಹೊಸ ಮಸೂದೆಯನ್ನು ಮಂಡನೆ ಮಾಡುತ್ತಿದ್ದಂತೆಯೇ, ಕೈಯಲ್ಲಿ ಮಹಾತ್ಮ ಗಾಂಧಿ ಅವರ ಭಾವಚಿತ್ರವನ್ನು ಹಿಡಿದು ಸಂಸತ್ತಿನ ಮಕರ ದ್ವಾರದ ಬಳಿ ಸೇರಿದ ವಿರೋಧ ಪಕ್ಷಗಳ ಸಂಸದರು ಅಲ್ಲಿಂದ ಆವರಣದಲ್ಲಿರುವ ಗಾಂಧಿ ಪ್ರತಿಮೆವರೆಗೆ ನಡೆದು ಹೋಗಿ ಪ್ರತಿಭಟನೆ ನಡೆಸಿದರು. ‘ಮಹಾತ್ಮಾ ಗಾಂಧಿ ಅವರಿಗೆ ಮಾಡಿದ ಅವಮಾನವನ್ನು ದೇಶವು ಸಹಿಸುವುದಿಲ್ಲ’ ಎಂದು ಘೋಷಣೆಗಳನ್ನು ಕೂಗಿದರು.ಕಾಂಗ್ರೆಸ್‌ನಿಂದ ಪ್ರತಿಭಟನೆ: ಹೊಸ ಮಸೂದೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ಬುಧವಾರ ದೇಶದಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ಬಗ್ಗೆ ಪಕ್ಷದ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ರಾಜ್ಯ ಘಟಕದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ‘ಹಕ್ಕು ಆಧರಿತ ಅಭಿವೃದ್ಧಿ ಯೋಜನೆಯನ್ನು ಅಂತ್ಯಗೊಳಿಸುವುದು, ಗಾಂಧೀಜಿ ಅವರ ಸಿದ್ಧಾಂತದ ಮೇಲೆ ದಾಳಿ ನಡೆಸುವ, ಕಾರ್ಮಿಕರ ಹಕ್ಕುಗಳು ಮತ್ತು ಒಕ್ಕೂಟ ವ್ಯವಸ್ಥೆಯ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಪಿತೂರಿಯಾಗಿದೆ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಗಾಂಧಿ ಕನಸು ನನಸು ಮಾಡುತ್ತಿದ್ದೇವೆ’

ಮಹಾತ್ಮ ಗಾಂಧಿಯು ನಮ್ಮ ಹೃದಯದಲ್ಲಿ ಇದ್ದಾರೆ. ನರೇಗಾವನ್ನು ಕಾಂಗ್ರೆಸ್ ಜಾರಿ ಮಾಡಿತು ಮತ್ತು ₹2.13 ಲಕ್ಷ ಕೋಟಿ ಖರ್ಚು ಮಾಡಿತು. ಆದರೆ ಬಡವರ ಅಭಿವೃದ್ಧಿಗಾಗಿ ಮೋದಿ ಸರ್ಕಾರವು ₹8 ಲಕ್ಷ ಕೋಟಿ ಖರ್ಚು ಮಾಡಿದೆ. ಜವಾಹರ್ ರೋಜ್‌ಗಾರ್ ಯೋಜನೆಯ ಹೆಸರನ್ನು ಕಾಂಗ್ರೆಸ್ ಬದಲಾಯಿಸಿತು. ಹಾಗಾದರೆ ಕಾಂಗ್ರೆಸ್ ನೆಹರೂ ಅವರನ್ನು ಅವಮಾನಿಸಿತೇ? ರಾಮ ದೇವರು ನಮ್ಮ ಪ್ರತಿ ಉಸಿರಿನಲ್ಲಿ ಇದ್ದಾರೆ. ‘ಜಿ ರಾಮ್ ಜಿ’ ಕುರಿತು ಅವರಿಗೇನು ತೊಂದರೆ? ಗಾಂಧಿ ಅವರು ರಾಮ ರಾಜ್ಯದ ಕನಸು ಕಂಡಿದ್ದರು ಮತ್ತು ಬಡವರ ಅಭಿವೃದ್ಧಿ ಮೂಲಕ ನಾವು ಈ ಕನಸನ್ನು ನನಸು ಮಾಡುತ್ತಿದ್ದೇವೆ

-ಶಿವರಾಜ್ ಸಿಂಗ್ ಚೌಹಾಣ್ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ

[t4b-ticker]
error: Content is protected !!