ಕಡಬ: ಹೊಸಮಠದಲ್ಲಿ ಮಾಸ್ ಲಿಮಿಟೆಡ್ ನ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ | ಮಾಸ್ ಕೃಷಿಕರಿಗೆ ಉತ್ತಮ ಧಾರಣೆ ನೀಡುತ್ತಿದೆ – ಸೀತಾರಾಮ ರೈ ಸವಣೂರು

Picture of Savistara

Savistara

Bureau Report

ಮಾರುಕಟ್ಟೆಯಲ್ಲಿ ಅಡಿಕೆಗೆ ಧಾರಣೆ ಕುಸಿದಾಗ ವಾರಣಾಶಿ ಸುಬ್ರಾಯ ಭಟ್, ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸೇರಿದಂತೆ ಹಿರಿಯ ಸಹಕಾರಿಗಳ ಮುತುವರ್ಜಿಯಿಂದ 2001ರಲ್ಲಿ ಹುಟ್ಟಿಕೊಂಡ ಮಾಸ್ ಸಂಸ್ಥೆ ಇವತ್ತು 13 ಶಾಖೆಗಳನ್ನು ಹೊಂದಿ ಅಡಿಕೆ ಬೆಳೆಗಾರರಿಗೆ ಉತ್ತಮ ಧಾರಣೆ ನೀಡುತ್ತಿದೆ. ಮಾಸ್ ಕ್ಯಾಂಪ್ಕೋ ಅಥವಾ ಇನ್ನಿತರ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿಲ್ಲ. ಕೃಷಿಕರು ಬೆಳೆದ ಅಡಿಕೆಗೆ ಉತ್ತಮ ಮೌಲ್ಯ ನೀಡುವುದು ಮಾತ್ರ ಉದ್ದೇಶ.

ಸುಳ್ಯ, ಪುತ್ತೂರು ಮತ್ತು ಕಡಬ ತಾಲೂಕಿನ ಅಡಿಕೆಗಳನ್ನು ಸುಳ್ಯದ ಸಂಸ್ಕರಣಾ ಘಟಕದಲ್ಲಿ‌ ಸಂಸ್ಕರಿಸಿ ಮಂಗಳೂರಿಗೆ ಕಳುಹಿಸಲಾಗುತ್ತಿದೆಎಂದು ಮಾಸ್ ಲಿಮಿಟೆಡ್ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಹೇಳಿದರು. ಅವರು ಫೆ. 16ರಂದು ಹೊಸಮಠ ಪ್ರಾ.ಕೃ.ಪ.ಸ.ಸಂಘದ ಕಟ್ಟಡದಲ್ಲಿ ಮಾಸ್ ಲಿಮಿಟೆಡ್ ನ ಅಡಿಕೆ ಖರೀದಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ ರೈ ಬಾಲ್ಯೊಟ್ಟು ಮಾತನಾಡಿ ಸಂಸ್ಥೆ ವ್ಯವಹಾರದಲ್ಲಿ ಆರ್ಥಿಕವಾಗಿ ಕುಂಠಿತಗೊಂಡಾಗ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮತ್ತಿತರ ಸಹಕಾರಿಗಳ ಒತ್ತಡಕ್ಕೆ ಮಣಿದು ಸೀತಾರಾಮ ರೈಯವರು ಅಧ್ಯಕ್ಷರಾದರು. ಅಧ್ಯಕ್ಷರಾಗಿ 2 ವರ್ಷಗಳಲ್ಲಿ 4 ಶಾಖೆಗಳನ್ನು ತೆರೆದಿರುವುದಲ್ಲದೆ, ಸಂಸ್ಥೆಯ ಆರ್ಥಿಕವಾಗಿ ಸದೃಢವಾಗುವಂತೆ ಮಾಡಿದ್ದಾರೆಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಮಾತನಾಡಿ ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಿರು ಸೀತಾರಾಮ ರೈಯವರು ಕೈ ಹಾಕಿದ ಕೆಲಸದಲ್ಲಿ ಯಶಸ್ಸುನ್ನು ಕಂಡವರು. ಅಡಿಕೆ ಕೃಷಿಕರಿಗೆ ಮಾಸ್ ಮೂಲಕ ಉತ್ತಮ ಬೆಲೆ ಸಿಗುತ್ತಿದೆ ಎಂದರು.

ವೇದಿಕೆಯಲ್ಲಿ ಪುತ್ತೂರು ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ರಘು ಎಸ್.ಎಂ, ಮಾಸ್ ನಿರ್ದೇಶಕರಾದ ನಿತ್ಯಾನಂದ ಮುಂಡೋಡಿ, ರಾಜಾರಾಮ ಶೆಟ್ಟಿ ಮತ್ತು ಶ್ರೀಮತಿ ಸುಧಾ ಎನ್. ರೈ, ಹೊಸಮಠ ಸಹಕಾರಿ ಸಂಘದ ಮಾಜಿ ನಿರ್ದೇಶಕ ಕರುಣಾಕರ ಗೋಗಟೆ, ಕೃಷಿಕರಾದ ಜಯರಾಮ ಶರ್ಮ ಬಲ್ಯ ಉಪಸ್ಥಿತರಿದ್ದರು. ಕು. ಧನ್ಯಶ್ರೀ ಬಲ್ಯ ಪ್ರಾರ್ಥಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಹೊಸಮಠ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೃಷ್ಣಪ್ಲ ದೇವಾಡಿಗ ಸನಿಲ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಚಿದಾನಂದ ಕೊಡೆಂಕಿರಿ ವಂದಿಸಿದರು. ಸಂಘದ ನಿರ್ದೇಶಕ ಶಿವಪ್ರಸಾದ್ ರೈ ಮೈಲೇರಿ ಕಾರ್ಯಕ್ರಮ ನಿರೂಪಿಸಿದರು. ಹೊಸಮಠ ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಸುಂದರ ಶೆಟ್ಟಿ ಎಂ.ಕೆ ಮತ್ತು ಸಿಬ್ಬಂದಿಗಳು, ನಿರ್ದೇಶಕರು ಮತ್ತು ಸದಸ್ಯರು, ಮಾಸ್ ಲಿಮಿಟೆಡ್ ನ ಸಿಇಒ ಟಿ. ಮಹಾಬಲೇಶ್ವರ ಭಟ್, ಸಿಇಒ ಟ್ರೈನಿ ಭರತ್ ಬಳ್ಳಕ್ಕ, ಮಾರಟಾಧಿಕಾರಿ ಕೆ.ಎಂ.ಲೋಕೇಶ್ ಮತ್ತು ಸಿಬ್ಬಂದಿಗಳು, ಜಿ.ಪಂ. ಮಾಜಿ‌ ಸದಸ್ಯ ಕೃಷ್ಣ ಶೆಟ್ಟಿ ಕಡಬ, ತಾ.ಪಂ.‌ ಮಾಜಿ ಸದಸ್ಯೆ ಶ್ರೀಮತಿ ಪುಲಸ್ಯ ರೈ ಸೇರಿದಂತೆ ಅನೇಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

[t4b-ticker]
error: Content is protected !!