ಅಮರಾವತಿ: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ದೇಶದಲ್ಲಿ ಎಲ್‌ಪಿಜಿ ಅಭಾವ ತಲೆದೋರಿದ್ದು, ಯಾವಾಗ ಸಮಸ್ಯೆ ಬಗೆಹರಿಯುತ್ತದೆಯೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಆಂಧ್ರ ಪ್ರದೇಶ ಸರ್ಕಾರ, ಗ್ರಾಮೀಣ ಪ್ರದೇಶದಲ್ಲಿ ಈ ಹಿಂದೆ ವಿತರಿಸುತ್ತಿದ್ದ ರೀತಿಯಲ್ಲೇ ಮತ್ತೆ ಸೀಮೆಎಣ್ಣೆ ವಿತರಿಸಲು ಮುಂದಾಗಿದೆ ಎಂದು ಶನಿವಾರ(ಮಾ. 20) ವರದಿಯಾಗಿದೆ.
ಈ ಕುರಿತು ವಿಜಯವಾಡದಲ್ಲಿ ಮಾತನಾಡಿರುವ ಆಂಧ್ರ ಪ್ರದೇಶ ನಾಗರಿಕ ಸರಬರಾಜು ಸಚಿವ ನಾದೇಂಡ್ಲಾ ಮನೋಹರ್, ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ಜಾಗತಿಕವಾಗಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಅಡುಗೆ ಅನಿಲದ ಕೊರತೆಯಿಲ್ಲದಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರ ಆಯ್ದ ಏಜೆನ್ಸಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೀಮೆಎಣ್ಣೆ ಪೂರೈಕೆಯನ್ನು ಮತ್ತೆ ಆರಂಭಿಸಲಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಸೀಮೆಎಣ್ಣೆಯನ್ನು ಮುಕ್ತ ಎಂದು ಘೋಷಿಸಲಾಗಿದ್ದ ಆಂಧ್ರ ಪ್ರದೇಶದಲ್ಲಿ, ಯಾವುದೇ ಕುಟುಂಬವು ತೊಂದರೆ ಅನುಭವಿಸದಂತೆ ಸೀಮೆಎಣ್ಣೆ ವಿತರಣೆಯನ್ನು ಪುನರಾರಂಭಿಸಲಾಗುವುದು. ಆರಂಭದಲ್ಲಿ ಕೆಲವು ಏಜೆನ್ಸಿಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ಎಲ್‌ಪಿಜಿ ಅಭಾವ ಜಾಸ್ತಿಯಿರಿವ ಪ್ರದೇಶಗಳಲ್ಲಿ ಸೀಮೆಎಣ್ಣೆ ಪೂರೈಕೆಯನ್ನು ಒದಗಿಸಲಾಗುವುದು ಎಂದಿದ್ದಾರೆ.ಸಿಲಿಂಡರ್ ಪೂರೈಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನಗರ ಪ್ರದೇಶಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳಿಂದ ಪೈಪ್ಡ್ ನೈಸರ್ಗಿಕ ಅನಿಲ (ಪಿಎನ್‌ಜಿ) ಗೆ ಬದಲಾಯಿಸುವುದನ್ನು ಉತ್ತೇಜಿಸುವ ನೀತಿಯನ್ನು ಸರ್ಕಾರ ರೂಪಿಸುತ್ತಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ಜಾಗತಿಕವಾಗಿ ಉಂಟಾಗಿರುವ ಅಡೆತಡೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಎಲ್‌ಪಿಜಿ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವದಂತಿಗಳನ್ನು ನಂಬಬೇಡಿ ಅಥವಾ ಭಯಪಡಬೇಡಿ ಎಂದು ಸಾರ್ವಜನಿಕರಿಗೆ ವಿನಂತಿಸಿದ್ದಾರೆ. ಎಲ್‌ಪಿಜಿ ಸರಬರಾಜನ್ನು ಪ್ರಮುಖ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಿರ್ವಹಿಸುತ್ತಿದ್ದು, ಬೇಡಿಕೆಯನ್ನು ಪೂರೈಸಲು ಸಾಕಷ್ಟು ಸ್ಟಾಕ್ ಲಭ್ಯವಿದೆ ಎಂದು ಹೇಳಿದ್ದಾರೆ













































