ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ತವಣೂರು ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದರೆ ಪಕ್ಷದ ಕಾರ್ಯಕರ್ತರಿಗೆ ಉಚಿತ ಗಲ್ಫ್ ಪ್ರವಾಸ ಆಯೋಜಿಸಲಾಗುವುದು ಎಂದು ಐಯುಎಂಎಲ್(ಮುಸ್ಲಿಂ ಲೀಗ್) ನಾಯಕ ನೀಡಿದ ಭರವಸೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಮಂಗಳವಾರ ತವಣೂರಿನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಐಯುಎಂಎಲ್ ರಾಜ್ಯ ಉಪಾಧ್ಯಕ್ಷ ಸಿ.ಪಿ. ಬಾವಾ ಹಾಜಿ ಈ ಭರವಸೆ ನೀಡಿದ್ದಾರೆ. ಐಯುಎಂಎಲ್ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ಪ್ರಮುಖ ಅಂಗಪಕ್ಷವಾಗಿದೆ.
ಯುಡಿಎಫ್ ಅಭ್ಯರ್ಥಿ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಜೆ. ಜಾಯ್ ಅವರು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದರೆ, ಐಯುಎಂಎಲ್ ಮಂಡಲ್ ಹಾಗೂ ಪಂಚಾಯತಿ ಸಮಿತಿ ಸದಸ್ಯರಿಗೆ 15 ದಿನಗಳ ಉಚಿತ ಗಲ್ಫ್ ಪ್ರವಾಸ ಒದಗಿಸಲಾಗುವುದು ಎಂದು ಸಿ.ಪಿ. ಬಾವಾ ಹಾಜಿ ತಿಳಿಸಿದ್ದಾರೆ. ಈ ಕುರಿತು ಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ.
ಈ ಪ್ಯಾಕೇಟ್ನಲ್ಲಿ ಪ್ರಯಾಣದ ಟಿಕೆಟ್ ಗಳು, ವಾಸ್ತವ್ಯ ಮತ್ತು ಇತರ ವೆಚ್ಚಗಳು ಒಳಗೊಂಡಿವೆ ಎಂದು ಅವರು ಹೇಳಿದ್ದಾರೆ.ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ಮತಗಟ್ಟೆಗಳಲ್ಲಿ ಗಮನ ಕೇಂದ್ರೀಕರಿಸಿ ಯುಡಿಎಫ್ ಅಭ್ಯರ್ಥಿಯ ಗೆಲುವನ್ನು ಖಚಿತಪಡಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಮಲಪ್ಪುರಂ ಜಿಲ್ಲಾಧಿಕಾರಿ ವಿನಯ್ ಗೋಯಲ್, “ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ.
X “ಜಿಲ್ಲಾ ಪೊಲೀಸ್ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದೇನೆ. ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು,’ ಎಂದು ಅವರು ಹೇಳಿದ್ದಾರೆ.ಮುಂದಿನ ಕ್ರಮಗಳ ಕುರಿತು ನಿರ್ಧರಿಸುವ ಮೊದಲು ಚುನಾವಣಾ ನಿಯಮಗಳನ್ವಯ ವಿಷಯವನ್ನು ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಈ ಉಡುಗೊರೆಯ ಆಫರ್ ಮತದಾರರಿಗೆ ನೀಡಲಾಗಿಲ್ಲ; ಬದಲಿಗೆ ಕಾರ್ಯಕರ್ತರಿಗೆ ಮಾತ್ರ ನೀಡಲಾಗಿದೆ ಎಂದು ಯುಡಿಎಫ್ ಮೂಲಗಳು ಸಮರ್ಥಿಸಿಕೊಂಡಿವೆ.
ಎಪ್ರಿಲ್ 9ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ LDF ಬೆಂಬಲಿತ ಸ್ವತಂತ್ರ ಶಾಸಕ ಕೆ.ಟಿ. ಜಲೀಲ್ ವಿರುದ್ಧ ತವಣೂರು ಕ್ಷೇತ್ರದಲ್ಲಿ ವಿ.ಜೆ. ಜಾಯ್ ಸ್ಪರ್ಧಿಸುತ್ತಿದ್ದಾರೆ.













































