ದೈವ ನರ್ತಕ ಡಾ|ರವೀಶ್ ಪಡುಮಲೆ, ಹರೇಕಳ ಹಾಜಬ್ಬರಿಗೆ ಮಂಗಳೂರು ವಿ.ವಿ.ಯಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ

Picture of Savistara

Savistara

Bureau Report

ಪುತ್ತೂರು:ಪದ್ಮಶ್ರೀ ಪುರಸ್ಕೃತ ‘ಅಕ್ಷರ ಸಂತ’ ಹರೇಕಳ ಹಾಜಬ್ಬ, ದೈವ ನರ್ತಕ ಡಾ|ರವೀಶ್‌ ಪಡುಮಲೆರವರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.ವಿಶ್ವವಿದ್ಯಾನಿಲಯದ ಆವರಣದ ಮಂಗಳ ಸಭಾಂಗಣದಲ್ಲಿ ಮಾ.28ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯದ 44ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ನಡೆಯಿತು. ಇತ್ತೀಚೆಗೆ ನಿಧನರಾದ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದರಾದ ಸೂರಿಕುಮೇರು ಗೋವಿಂದ ಭಟ್‌ ರವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಪ್ರಕಟಿಸಲಾಗಿದ್ದು ಏ.13ರಂದು ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. ವಿಶ್ವವಿದ್ಯಾನಿಲಯದ ಕುಲಪತಿಯಾಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಗೌರವ ಡಾಕ್ಟರೇಟ್ ಪದವಿಪ್ರದಾನಮಾಡಿದರು.ದ.ಕ.ಸಂಸದಕ್ಯಾ|ಬ್ರಿಜೇಶ್ ಚೌಟ ಘಟಿಕೋತ್ಸವ ಭಾಷಣ ಮಾಡಿದರು.ವಿವಿ www.suddinews.com/putturಕುಲಪತಿ ಪ್ರೊ|ಪಿ.ಎಲ್.ಧರ್ಮ, ಕುಲಸಚಿವ ಪ್ರೊ|ದೇವೇಂದ್ರಪ್ಪ(ಪರೀಕ್ಷಾಂಗ), ಗಣೇಶ್ಸಂಜೀವ (ಪ್ರಭಾರ), ಹಣಕಾಸು ಅಧಿಕಾರಿ ಡಾ.ವೈ ಸಂಗಪ್ಪರವರು ಉಪಸ್ಥಿತರಿದ್ದರು.

ಡಾ|ರವೀಶ್ ಪಡುಮಲೆ: ಬಡಗನ್ನೂರು ಗ್ರಾಮದ ಪಡುಮಲೆ ನಿವಾಸಿಯಾಗಿರುವ ಡಾ|ರವೀಶ್ ಪಡುಮಲೆಯವರು ಉಜಿರೆ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಭಾಗ ಮುಖ್ಯಸ್ಥರಾಗಿದ್ದಾರೆ.

ದೈವನರ್ತಕರಾಗಿಯೂ ಸೇವೆ ಸಲ್ಲಿಸುತ್ತಿರುವ ಇವರು ಈಗಾಗಲೇ ಪಿಎಚ್‌ಡಿ ಪದವಿ ಪಡೆದಿದ್ದು ಇದೀಗ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ. ಏಪ್ರಿಲ್ 9ರಿಂದ ನಡೆಯುವ ಹನುಮಗಿರಿ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಸ್ವಾಗತ ಸಮಿತಿಯ ಅಧ್ಯಕ್ಷರಾಗಿಯೂ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.

ದೈವದ ಚಾಕಿರಿ ಮಾಡುವ ವರ್ಗದವರಿಗೆ ಈ ಗೌರವವನ್ನು ಅರ್ಪಿಸುತ್ತಿದ್ದೇನೆ

ಮಂಗಳೂರು ವಿಶ್ವವಿದ್ಯಾನಿಲಯದಿಂದ ನನಗೆ ಗೌರವ ಡಾಕ್ಟರೇಟ್ ನೀಡುತ್ತಿರುವ ವಿಷಯ ತಿಳಿದು ಬಹಳ ಸಂತೋಷ ಆಗ್ತಾ ಇದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳ ಆಶೀರ್ವಾದ ಮತ್ತು ನನ್ನ ಬೆನ್ನೆಲುಬಾಗಿ ನಿಂತಿರುವ ನನ್ನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗೆ ಮತ್ತು ನನ್ನ ಇಂಜಿನಿಯರಿಂಗ್ ಕಾಲೇಜಿನ ಎಲ್ಲಾ ಸಹೋದ್ಯೋಗಿ ಮಿತ್ರರಿಗೆ ನಾನು ಆಭಾರಿಯಾಗಿದ್ದೇನೆ. ತುಳುನಾಡಿನ ದೈವದ ಕೊಡಿಯಡಿಯಲ್ಲಿ ರಾತ್ರಿಯ ನಿದ್ದೆ ಇಲ್ಲದೆ ದೈವದ ಚಾಕಿರಿ ಮಾಡುವ ಎಲ್ಲಾ ವರ್ಗದವರಿಗೆ ಈ ಗೌರವವನ್ನು ಅರ್ಪಿಸುತಿದ್ದೇನೆ. ರಾಮ ನವಮಿಯ ಪುಣ್ಯ ದಿನದಂದು, ಹನುಮಗಿರಿ ಬ್ರಹ್ಮಕಲಶೋತ್ಸವ ಸಂಭ್ರಮದ ಸಂದರ್ಭದಲ್ಲಿ ಈ ಡಾಕ್ಟರೇಟ್ ಘೋಷಣೆಯಾಗಿದೆ.ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರ ಮಾರ್ಗದರ್ಶನ, ಅಲ್ಲಿ ದೊರೆತ ಸಂಸ್ಕಾರ ಕೂಡಾ ಇಂದು ಸಮಾಜದಲ್ಲಿ ಸೇವೆ ಮಾಡಲು ಪ್ರೇರಣೆ ನೀಡಿದೆ. ಸಾಮರಸ್ಯದ ಸಮಾಜಕ್ಕಾಗಿ ಇನ್ನೂ ಹೆಚ್ಚಿನ ಕೆಲಸವನ್ನು ಮಾಡಲು ನಿಮ್ಮೆಲ್ಲರ ಸಹಕಾರ ಕೋರುತ್ತಿದ್ದೇನೆ.

  • ಡಾ| ರವೀಶ್‌ ಪಡುಮಲೆ, ದೈವನರ್ತಕರು, ವಿಭಾಗ ಮುಖ್ಯಸ್ಥರು, ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜು ಉಜಿರೆ
[t4b-ticker]
error: Content is protected !!