1ನೇ ಕ್ಲಾಸ್‌ಗೆ 5.5 ವರ್ಷಕ್ಕೆ ಪ್ರವೇಶ ಕೊಡಿ: ಸಿಎಂಗೆ ಮನವಿ

Picture of Savistara

Savistara

Bureau Report

4 ಲಕ್ಷ ಮಕ್ಕಳಿಗೆ ದಾಖಲಾತಿ ಕೈತಪ್ಪುವ ಭೀತಿ, ಯುಕೆಜಿ ಮುಗಿಸಿದ ಮಕ್ಕಳಿಗೆ 1 ವರ್ಷ ನಷ್ಟದ ಆತಂಕ

ಬೆಂಗಳೂರು: 1ನೇ ತರಗತಿಗೆ 5.5 ವರ್ಷ ತುಂಬಿದ ಮಕ್ಕಳಿಗೂಪ್ರವೇಶ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಹಲವು ಪೋಷಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕ ಸಂಘಟನೆಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ಪೋಷಕರು, ಸರ್ಕಾರ 2 ತಿಂಗಳ ವಯೋಮಿತಿ ಸಡಿಲಗೊಳಿಸುವ ತೀರ್ಮಾನ ಪ್ರಕಟಿಸಿದೆ. ಆದರೆ, ಈ ನಿರ್ಧಾರದಿಂದ ಕೇವಲ 1.56 ಲಕ್ಷ ಮಕ್ಕಳಿಗೆ ಮಾತ್ರ ಪ್ರಯೋಜನವಾಗಲಿದ್ದು, ಸುಮಾರು 4.29 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲಾ ದಾಖಲಾತಿಯಿಂದ ಹೊರಗುಳಿಯುವ ಭೀತಿ ಎದುರಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಆದ್ದರಿಂದ ಕಳೆದ ವರ್ಷದಂತೆಯೇ ಈ ಬಾರಿಯೂ 1ನೇ ತರಗತಿಯ ದಾಖಲಾತಿಯ ಕನಿಷ್ಠ ವಯೋಮಿತಿಯನ್ನು 5.5 ವರ್ಷಕ್ಕೆ ಸೀಮಿತಗೊಳಿಸಿ ಆದೇಶ ಹೊರಡಿಸಬೇಕು ಎಂದು ಪೋಷಕರು ಮನವಿ ಮಾಡಿದ್ದಾರೆ. ಕೇವಲ ಕೆಲವೇ ದಿನಗಳ ಅಥವಾ ತಿಂಗಳುಗಳ ಅಂತರದಿಂದ ಮಕ್ಕಳು ಒಂದು ಇಡೀ ವರ್ಷವನ್ನು ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಯುಕೆಜಿ ಮುಗಿಸಿರುವ ಮಕ್ಕಳು ಮತ್ತೆ ಅದೇ ತರಗತಿಯಲ್ಲಿ ಕಲಿಯುವುದರಿಂದ ಅವರ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ನಿಮ್ಹಾನ್ಸ್ ತಜ್ಞರು ವರದಿ ನೀಡಿದ್ದಾರೆ. ವಯೋಮಿತಿಯ ಗೊಂದಲದಿಂದ ಪೋಷಕರಿಗೆ ಮಾನಸಿಕ ಮತ್ತು ಆರ್ಥಿಕ ಹೊರೆ ಹೆಚ್ಚಾಗುತ್ತಿದೆ ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಅರ್ಜಿಯಲ್ಲಿ ಪೋಷಕರು ನೋವು ತೋಡಿಕೊಂಡಿದ್ದಾರೆ.

ಅಕ್ರಮ ನರ್ಸರಿ ಶಾಲೆಗಳ ಮೇಲೆ ಕ್ರಮವಹಿಸಿ:

ಹಾಗೆಯೇ ನಿಯಮ ಬಾಹಿರವಾಗಿ ತಲೆ ಎತ್ತಿರುವ ಕಿಂಡರ್ ಗಾರ್ಡನ್ ಮತ್ತು ನರ್ಸರಿ ಶಾಲೆಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯದ ಎಲ್ಲ ಶಾಲೆಗಳು ಶಿಕ್ಷಣ ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಪೋಷಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.ಭೇಟಿಯ ಬಳಿಕ ಮಾಧ್ಯಮ ಹೇಳಿಕೆ ನೀಡಿರುವ ಸಮಿತಿಯ ಅಧ್ಯಕ್ಷ ಬಿ.ಎನ್. ಯೋಗಾನಂದ ಅವರು, ಮಕ್ಕಳು ಮತ್ತು ಪೋಷಕರು ಆತಂಕಪಡಬೇಡಿ. ನಾನು ಶಿಕ್ಷಣ ಸಚಿವರ ಜೊತೆ ತಕ್ಷಣವೇ ಮಾತನಾಡಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಏಕೆ ಈ ಆಗ್ರಹ?:

ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇತ್ತೀಚೆಗಷ್ಟೇ ವಿಧಾನಸಭೆಯಲ್ಲಿ 1ನೇ ತರಗತಿ ಸೇರ್ಪಡೆಗೆ ಜೂನ್ 1ಕ್ಕೆ 6 ವರ್ಷ ತುಂಬಿರಬೇಕು ಎಂದು ನಿಗದಿಪಡಿಸಿದ್ದ ನಿಯಮವನ್ನು ತುಸು ಸಡಿಲಿಸಿ 5 ವರ್ಷ 10 ತಿಂಗಳು ತುಂಬಿರುವ ಮಕ್ಕಳಿಗೂ ಪ್ರವೇಶ ಅವಕಾಶ ಕಲ್ಪಿಸುವುದಾಗಿ ಹೇಳಿದ್ದರು. ಆದರೆ, ಇದೀಗ ಈ ವಯೋಮಿತಿಯನ್ನು ಕಳೆದ ವರ್ಷದಂತೆ 5.5 ವರ್ಷಕ್ಕೆ ಇಳಿಸಬೇಕು ಎಂದು ಕೆಲ ಪೋಷಕರು ಆಗ್ರಹಿಸುತ್ತಿದ್ದಾರೆ.

[t4b-ticker]
error: Content is protected !!