ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಶೂಟಿಂಗ್‌ಗೆ ಬ್ರೇಕ್‌ ಹಾಕಿ: ಗ್ರಾಮಸ್ಥರ ಇತರರೆ ಬೇಡಿಕೆ – ಮಾ.31ಕ್ಕೆ ಜಿಲ್ಲಾಧಿಕಾರಿಗಳ ತುರ್ತು ಸಭೆ

Picture of Savistara

Savistara

Bureau Report

ಸಕಲೇಶಪುರ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪವಿತ್ರ ಧಾರ್ಮಿಕ ಕೇಂದ್ರವಾದ ಬೆಟ್ಟದ ಭೈರವೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಪ್ರಿ-ವೆಡ್ಡಿಂಗ್ ಶೂಟಿಂಗ್ ಹಾಗೂ ರೀಲ್ಸ್ ಮಾಡದಂತೆ ತಾಲ್ಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.​

ದೇವಾಯಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಶನಿವಾರ ದೇವಸ್ಥಾನದ ಆವರಣದಲ್ಲಿ ತುರ್ತು ಸಭೆ ನಡೆಸಿ, ಇತ್ತೀಚೆಗೆ ನಡೆದ ಅಹಿತಕರ ಘಟನೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.​ಮುಜರಾಯಿ ಇಲಾಖೆ ವಿರುದ್ಧ ಆಕ್ರೋಶ​

ಶುಕ್ರವಾರ ಫೋಟೋ ಶೂಟ್ ಮಾಡುತ್ತಿದ್ದ ಛಾಯಾಗ್ರಾಹಕರು ಹಾಗೂ ಮೂಡಿಗೆರೆ ತಾಲ್ಲೂಕಿನ ಭಕ್ತರ ನಡುವೆ ನಡೆದ ವಾಗ್ವಾದ ಮತ್ತು ಹಲ್ಲೆ ಪ್ರಕರಣಕ್ಕೆ ಮುಜರಾಯಿ ಇಲಾಖೆಯೇ ನೇರ ಹೊಣೆ ಎಂದು ರೆಸಾರ್ಟ್ ಮಾಲೀಕರ ಸಂಘದ ತಾಲ್ಲೂಕು ಅಧ್ಯಕ್ಷ ಮಸ್ತಾರೆ ಲೋಕೇಶ್ ಹಾಗೂ ಮಂಜುನಾಥ್ ಸಂಘಿ ಆರೋಪಿಸಿದರು.

​”ಪಶ್ಚಿಮ ಘಟ್ಟದ ನಿಸರ್ಗದ ಮಡಿಲಲ್ಲಿರುವ ಈ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಇದು ಹಾಸನ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸಾವಿರಾರು ಕುಟುಂಬಗಳ ಮನೆದೇವರು. ಇಂತಹ ಪವಿತ್ರ ಸ್ಥಳದಲ್ಲಿ ನಡೆಯುತ್ತಿರುವ ಘಟನೆಗಳು ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತಿವೆ,” ಎಂದು ಅವರು ಬೇಸರ ವ್ಯಕ್ತಪಡಿಸಿದರು. ​ನಿಯಮಗಳ ಪಾಲನೆಗೆ ಆಗ್ರಹ​ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಲೋಕೇಶ್ ಮಾತನಾಡಿ, “ದೇವಸ್ಥಾನದಲ್ಲಿ ಶಿಸ್ತು ಕಾಪಾಡಲು ಯಾರೂ ಇಲ್ಲದಂತಾಗಿದೆ. ಸರ್ಕಾರ ತಕ್ಷಣವೇ ಇಲ್ಲಿಗೆ ವಾಚ್‌ಮನ್ ಮತ್ತು ಗೈಡ್ ನೇಮಕ ಮಾಡಬೇಕು. ಗೇಟ್ ಅಳವಡಿಸಿ ಪ್ರವಾಸಿಗರ ಮೇಲೆ ನಿಗಾ ಇಡಬೇಕು,” ಎಂದು ಒತ್ತಾಯಿಸಿದರು.​

ಭಕ್ತರು ದೇವಸ್ಥಾನಕ್ಕೆ ಅಸಭ್ಯ ಉಡುಗೆ ತೊಟ್ಟು ಬರುವುದು ಹಾಗೂ ಪಾದರಕ್ಷೆಗಳೊಂದಿಗೆ ಗರ್ಭಗುಡಿಯವರೆಗೂ ಬರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡಿಲ್ಲ ಎಂದು ಅವರು ದೂರಿದರು.​

ಮಾ. 31ಕ್ಕೆ ಜಿಲ್ಲಾಧಿಕಾರಿಗಳ ತುರ್ತು ಸಭೆ​ದೇವಸ್ಥಾನದಲ್ಲಿ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಮಾರ್ಚ್ 31ರಂದು ಹಾನುಬಾಳಿನ ‘ಫೆಬಲ್ಸ್ ಅಂಡ್ ಬೀನ್ಸ್’ ರೆಸಾರ್ಟ್‌ನಲ್ಲಿ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ.​

ಸಭೆಯ ಪ್ರಮುಖಾಂಶಗಳು:

• ​ಭಾಗವಹಿಸುವ ಇಲಾಖೆಗಳು: ಕಂದಾಯ, ಜಿಲ್ಲಾ ಪಂಚಾಯಿತಿ, ಪೊಲೀಸ್, ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆ.

• ​ಉದ್ದೇಶ: ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು.

• ​ಭೇಟಿ: ಸಭೆಗೂ ಮುನ್ನ ಜಿಲ್ಲಾಧಿಕಾರಿಗಳು ಬೆಟ್ಟದ ಭೈರವೇಶ್ವರಸ್ವಾಮಿ ದೇವಸ್ಥಾನಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.​

ಸಭೆಯಲ್ಲಿ ರೆಸಾರ್ಟ್ ಮತ್ತು ಹೋಂ ಸ್ಟೇ ಸಂಘಗಳ ಸದಸ್ಯರು ಕೂಡ ಭಾಗವಹಿಸಲಿದ್ದು, ಪ್ರವಾಸೋದ್ಯಮ ಮತ್ತು ಧಾರ್ಮಿಕ ಶ್ರದ್ಧೆಯ ನಡುವೆ ಸಮತೋಲನ ಕಾಯ್ದುಕೊಳ್ಳುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

[t4b-ticker]
error: Content is protected !!