ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದ ವಿಶ್ವದ ಹಲವು ದೇಶಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ತೈಲ ಬಿಕ್ಕಟ್ಟು ತಲೆದೊರಿದ್ದು, ವಿನಂತಿ ಮೇರೆಗೆ ಭಾರತ 38 ಸಾವಿರ ಮೆಟ್ರಿಕ್ ಟನ್ ಇಂಧನವನ್ನು ಕಳುಹಿಸಿದೆ ಎಂದು ಭಾನುವಾರ(ಮಾ. 29) ವರದಿಯಾಗಿದೆ.
ತೀವ್ರ ಇಂಧನ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾದಲ್ಲಿ ವಿದ್ಯುತ್ ಉತ್ಪಾದನೆಯೂ ಅಲ್ಲಿ ನಿಂತು ಹೋದ ಹಿನ್ನೆಲೆ ಅದರ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ, ಭಾರತದ ಪ್ರಧಾನಿ ಜೊತೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿ ಇಂಧನ ಪೂರೈಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ಶ್ರೀಲಂಕಾ ಅಧ್ಯಕ್ಷರ ಕೋರಿಕೆಯ ಮೇರೆಗೆ ಕೇಂದ್ರ ಸರ್ಕಾರ, 38 ಸಾವಿರ ಮೆಟ್ರಿಕ್ ಟನ್ ಇಂಧನವನ್ನು ಕಳುಹಿಸಿ ನೆರವು ನೀಡಿದೆ ಎನ್ನಲಾಗಿದೆ. ಇದರಲ್ಲಿ 20 ಸಾವಿರ ಮೆಟ್ರಿಕ್ ಟನ್ ಡೀಸೆಲ್ ಮತ್ತು 18 ಸಾವಿರ ಮೆಟ್ರಿಕ್ ಟನ್ ಪೆಟ್ರೋಲ್ ಸೇರಿದೆ.ಕೊಲಂಬೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ಇತ್ತೀಚೆಗೆ ಕೊಲಂಬೊ ಬಂದರಿಗೆ ಇಂಧನ ತುಂಬಿದ ಹಡಗು ಬಂದಿದೆ ಎಂದು ಮಾಹಿತಿಯನ್ನು ಬಹಿರಂಗಪಡಿಸಿದೆ. ಮತ್ತು ಕಠಿಣ ಸಮಯದಲ್ಲಿ ನೆರವು ನೀಡಿದ್ದಕ್ಕೆ, ಶ್ರೀಲಂಕಾ ಅಧ್ಯಕ್ಷರು ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ













































