ಡ್ರಗ್ಸ್ ಮಕ್ತ ಭಾರತಕ್ಕೆ ಭಾಗ್ವತ್, ಅಮಿತ್ ಶಾ ಇದ್ದ ಸಭೆ ಸಂಕಲ್ಪ

Picture of Savistara

Savistara

Bureau Report

ಬೆಂಗಳೂರು: ಸಮಕಾಲೀನ ಜಾಗತಿಕ ಬೆಳವಣಿಗೆಯ ಮಧ್ಯೆಭಾರತದ ಶಕ್ತಿ ಹಾಗೂ ಶಾಂತಿಯ ಮಹತ್ವವನ್ನು ಎತ್ತಿ ಹಿಡಿಯುವ ಜತೆಗೆ ದೇಶವನ್ನು ಡ್ರಗ್ಸ್ ಮುಕ್ತಗೊಳಿಸುವ ಮಹತ್ವದ ನಿರ್ಧಾರದ ಬಗ್ಗೆ ಬೆಂಗಳೂರು ಹೊರವಲಯದಲ್ಲಿ ನಡೆದ ಹಿಂದು ಧರ್ಮ ಆಚಾರ್ಯ ಮಹಾಸಭಾದ ಸಮಾವೇಶದಲ್ಲಿ ಸಮಾಲೋಚಿಸಲಾಗಿದೆ.ದೇಶದ ನಾನಾ ಭಾಗಗಳಿಂದ ಬಂದ 300ಕ್ಕೂ ಹೆಚ್ಚು ಪ್ರಮುಖ ಸಾಧು ಸಂತರು ಈ ಸಭೆಯಲ್ಲಿ ಭಾಗಿಯಾಗಿದ್ದರು. ನಂತರ ಆಚಾರ್ಯ ಮಹಾಸಭಾದ 14 ಮಂದಿ ಸದಸ್ಯರು, ಆರ್‌ಎಸ್‌ಎಸ್‌ ಸರಸಂಘ ಚಾಲಕ ಮೋಹನ್ ಭಾಗವತ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿದ್ದ ಈ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಆನ್‌ಲೈನ್ ಮೂಲಕ ಸೇರ್ಪಡೆಗೊಂಡು ಹಿಂದೂ ಸಮಾಜ ಹಾಗೂ ದೇಶದ ಸಾಮಾಜಿಕ ಆಗುಹೋಗು ಮತ್ತು ಭವಿಷ್ಯದ ಬಗ್ಗೆ ವಿಚಕ್ಷಕ ದೃಷ್ಟಿಯಿಂದ ಚರ್ಚೆ ನಡೆಸಲಾಯಿತು.ಒಟ್ಟಾರೆ ಈ ಸಭೆಯಲ್ಲಿ ಶೇ.20ರಷ್ಟು ಭಾಗ ಹಿಂದಿನ ಘಟನಾವಳಿಗಳು, ಶೇ.40ರಷ್ಟು ಭಾಗ ವರ್ತಮಾನದ ಸಂಗತಿಗಳು ಹಾಗೂ ಶೇ.40ರಷ್ಟು ಭಾಗ ಭವಿಷ್ಯದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಧಾರ್ಮಿಕ ವಿಚಾರಗಳ ಜತೆಗೆ ಹಿಂದೂ ಸಮಾಜದ ಜನಸಂಖ್ಯೆಯ, ಹಿಂದೂ ಚಿಂತನೆ, ಸಂಘರ್ಷದಲ್ಲಿರುವ ಜಗತ್ತಿಗೆ ಭಾರತದ ಶಕ್ತಿ ಹಾಗೂ ಶಾಂತಿಯ ಮಹತ್ವದ ಬಗ್ಗೆ ಸಮಾಲೋಚಿಸಲಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ‘ನಕ್ಸಲ್ ಮುಕ್ತ ಭಾರತ’ದ ನಿರ್ಮಾಣ ಸಾಧ್ಯವಾಗಿದ್ದರ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದೆ. ಆ ದಿಶೆಯಲ್ಲೇ ಮುಂದುವರಿದು ‘ಡ್ರಗ್ಸ್ ಮುಕ್ತ ಭಾರತ’ ನಿರ್ಮಾಣದ ಸಂಕಲ್ಪ ಈ ಸಭೆಯಲ್ಲಿ ಕುಡಿ ಒಡೆದಿದೆ. ಭಾರತದ ಎಲ್ಲ ರಾಜ್ಯಗಳಲ್ಲೂ ಈಗ ಡ್ರಗ್ಸ್ ಮಹಾಮಾರಿಯಂತೆ ವ್ಯಾಪಿಸುತ್ತಿದೆ. ವಿಶೇಷವಾಗಿ ಯುವ ಸಮೂಹ ಈ ಪಿಡುಗಿನ ದಾಸ್ಯಕ್ಕೆ ಒಳಗಾಗುತ್ತಿದೆ. ಹೀಗಾಗಿ ಡ್ರಗ್ಸ್ ಮುಕ್ತ ಭಾರತ ನಿರ್ಮಾಣ ಸಮಾಜದ ಹಿತದೃಷ್ಟಿಯಿಂದ ಅತಿಮುಖ್ಯ ಎಂದು ಪ್ರತಿಪಾದಿಸಲಾಗಿದೆ.

ದೇಶದ ಅಖಂಡತೆಯಲ್ಲಿ ಸಾಂಸ್ಕೃತಿಕ ಚಿಹ್ನೆಗಳ ಪಾತ್ರ, ಧಾವಂತದ ಜಗತ್ತಿನ ಸಮಸ್ಯೆಗಳು ಇತ್ಯಾದಿ ಸೂಕ್ಷ್ಮ ಸಂಗತಿಗಳ ಬಗ್ಗೆಯೂ ಪ್ರಸ್ತಾಪವಾಗಿದ್ದು ಮುಂದಿನ 15 ವರ್ಷಗಳಲ್ಲಿ ಒಟ್ಟಾರೆ ಸಮಾಜದ ಬೆಳವಣಿಗೆ ಹೇಗಿರಬೇಕೆಂಬ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಮೇಲ್ಲಿಂದ ಮೇಲೆ ನಡೆಯುವ ಈ ಸಭೆ 20 ವರ್ಷಗಳ ನಂತರ ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯಿತು. ನಿಗದಿತ ಸಮಯಕ್ಕಿಂತ ಎರಡು ಗಂಟೆ ಮುಂಚಿತವಾಗಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಗೆ ತೆರಳಿದರು.

100ಕ್ಕೂ ಅಧಿಕ ಸ್ವಾಮೀಜಿಗಳು ಭಾಗಿ:

ನೆಲಮಂಗಲದ ಅರಿಶಿನಕುಂಟೆಯ ನಗರೂರಿನ ಬಿಜಿಎಸ್ ಎಂಸಿಎಚ್‌ ಆಸ್ಪತ್ರೆ ಹಾಗೂ ಪಿಯು ಕಾಲೇಜು ಆವರಣದಲ್ಲಿ ಹಿಂದೂಧರ್ಮ ಆಚಾರ್ಯ ಮಹಾಸಭಾದಿಂದ ಆಯೋಜಿಸಿದ್ದ 2 ದಿನಗಳ ಈ ಸಮಾವೇಶದಲ್ಲಿ ಅಂತಿಮ ದಿನ ಶನಿವಾರದ ಸಭೆಯಲ್ಲಿ ದೇಶದ 100ಕ್ಕೂ ಅಧಿಕ ಸ್ವಾಮೀಜಿಗಳು ಪಾಲ್ಗೊಂಡು ಚರ್ಚೆ ನಡೆಸಿದರು. ಕರ್ನಾಟಕ, ಗುಜರಾತ್, ತಮಿಳುನಾಡು, ಅಸ್ಸಾಂ, ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ಕೇರಳ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ 28 ರಾಜ್ಯದ ಪ್ರಮುಖ ನೂರಾರು ಸ್ವಾಮೀಜಿಗಳು ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದರು. ರಾಜ್ಯದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪೇಜಾವರ ಶ್ರೀಗಳು ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು.

[t4b-ticker]
error: Content is protected !!