Elections: ಬಹಿರಂಗ ಪ್ರಚಾರ ಇನ್ನು ಮೂರೇ ದಿನ

Picture of Savistara

Savistara

Bureau Report

ಬೆಂಗಳೂರು/ಬಾಗಲಕೋಟೆ: ದಾವಣಗೆರೆ ದಕ್ಷಿಣ ಹಾಗೂಬಾಗಲಕೋಟೆ ಉಪ ಚುನಾವಣೆಗಳ ಬಹಿರಂಗ ಪ್ರಚಾರಕ್ಕೆ ಇನ್ನು ಕೇವಲ ಮೂರು ದಿನ ಬಾಕಿ ಇದ್ದು, ಈ ದಿನಗಳು ಅಭ್ಯರ್ಥಿಗಳ ಪಾಲಿಗೆ ನಿರ್ಣಾಯಕವಾಗಲಿದೆ. ಅದರೆ, ಮತದಾರರ ಓಲೈಕೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಕಾರ್ಯಕರ್ತರು “ರಾತ್ರಿ ಕಾರ್ಯಾಚರಣೆ’ ಯನ್ನು ರವಿವಾರದಿಂದ ನಡೆಸಲಿದ್ದಾರೆ.ಈ ಎರಡೂ ಕ್ಷೇತ್ರಗಳಿಗೆ ಎ.9ರಂದು ಮತದಾನ ನಡೆಯಲಿದ್ದು ರವಿವಾರ, ಸೋಮವಾರ ಹಾಗೂ ಮಂಗಳವಾರ ಬಹಿರಂಗ ಪ್ರಚಾರ ಮಾಡಬಹುದು. ಬುಧವಾರ ಮನೆ ಮನೆಗೆ ತೆರಳಿ ಮತ ಯಾಚಿಸಬಹುದಾಗಿದೆ. ಹೀಗಾಗಿ ಇನ್ನು 3 ದಿನಗಳು ಮಾತ್ರ ಬಹಿರಂಗ ಪ್ರಚಾರ/ ರ್ಯಾಲಿಗಳು ನಡೆಯಲಿವೆ.ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಈ ಉಪ ಚುನಾವಣೆಯಲ್ಲಿ ನೇರ ಹಣಾಹಣಿ ನಡೆದಿದ್ದು, ಆಡಳಿತಾರೂಢ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯಾಗಿದ್ದರೆ ವಿಪಕ್ಷ ಬಿಜೆಪಿಗೆ ದೊಡ್ಡ ಸವಾಲಾಗಿದೆ. ಹೀಗಾಗಿ ಗೆಲ್ಲಲು ಎರಡೂ ಪಕ್ಷಗಳು ತಂತ್ರ-ಪ್ರತಿತಂತ್ರ ರೂಪಿಸುತ್ತಿವೆ. ಉಭಯ ಪಕ್ಷಗಳ ದಿಗ್ಗಜರು ಬಹಿರಂಗ ಪ್ರಚಾರದಲ್ಲಿ ತೊಡಗಿದ್ದರೆ, ಕಾರ್ಯಕರ್ತರು ಮತದಾರರ ಓಲೈಕೆಗೆ ರಾತ್ರಿ ಕಾರ್ಯಾಚರಣೆಗೆ ನಡೆಸಲಿದ್ದಾರೆ. ಅದರಲ್ಲೂ ವಿಶೇಷವಾಗಿ ಬೂತ್ ಮಟ್ಟದ ಮುಖಂಡರು ಹಣ ಮತ್ತಿತರ ಆಮಿಷಗಳೊಂದಿಗೆ ಮತದಾರರ ಮನೆ ಬಾಗಿಲು ತಟ್ಟಲಿದ್ದಾರೆ.ಚುನಾವಣೆಯಲ್ಲಿ ಇದು ಅತ್ಯಂತ ಪ್ರಮುಖ ಘಟ್ಟವಾಗಿರುವುದರಿಂದ ಅಭ್ಯರ್ಥಿಗಳ ಭವಿಷ್ಯವೂ ರಾತೋರಾತ್ರಿ ಬದಲಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಯಾರು ಏನು ಮಾಡುತ್ತಾರೆ, ಏನೇನು ಕೊಡುತ್ತಾರೆ ಎಂಬುದನ್ನು ಕಾಯುವುದೇ ಕೆಲಸವಾಗಲಿದೆ. ಪರಸ್ಪರರ ಚಲನವಲನದ ಮೇಲೆ ನಿಗಾ ಇಡುವ ಹದ್ದಿನ ಕಣ್ಣಿನ ಕೆಲಸ ಈ ಅವಧಿಯಲ್ಲಿ ನಡೆಯುತ್ತದೆ.

ಬಾಗಲಕೋಟೆಯಲ್ಲಿ ಘಟಾನುಘಟಿಗಳು

ಸ್ವತಃ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ| ಜಿ. ಪರಮೇಶ್ವರ್, ಕೆ.ಎಚ್‌.ಮುನಿಯಪ್ಪ ಸಹಿತ ಸರಕಾರದ ಡಜನ್‌ಗೂ ಹೆಚ್ಚು ಸಚಿವರು ಕೋಟೆ ನಾಡಲ್ಲಿ ಬೀಡು ಬಿಟ್ಟಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಶನಿವಾರ ವೀರಶೈವ ಲಿಂಗಾಯತ ಸಮುದಾಯಗಳ ಸುಮಾರು 40 ಉಪ ಪಂಗಡಗಳ ಸಮಾಜದ ಪ್ರಮುಖರು ಹಾಗೂ ವ್ಯಾಪಾರಿಗಳ ಸಭೆ ನಡೆಸಿ ಕಾಂಗ್ರೆಸ್ ಬೆಂಬಲಿಸಲು ಮನವಿ ಮಾಡಿದ್ದಾರೆ. ಬಿಜೆಪಿಯಿಂದ ವಿಪಕ್ಷ ನಾಯಕ ಆ‌ರ್.ಅಶೋಕ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಶ್ರೀರಾಮುಲು, ಸಿ.ಟಿ.ರವಿ, ಸುನಿಲ್‌ಕುಮಾರ್, ರಾಜುಗೌಡ ನಾಯಕ ಸಹಿತ ಹಲವು ಘಟಾನುಘಟಿ ನಾಯಕರೂ ಪ್ರಚಾರದಲ್ಲಿ ತೊಡಗಿದ್ದಾರೆ.

ಬಿಜೆಪಿಯಿಂದ ದಲಿತ ಸಿಎಂ ಅಸ್ತ್ರ

ಉಪ ಚುನಾವಣೆಯಲ್ಲಿ ದಲಿತ ಸಿಎಂ ಅಸ್ತ್ರವನ್ನೂ ಬಿಟ್ಟಿರುವ ಬಿಜೆಪಿ, ಎ.20ರ ಬಳಿಕ ಸಿದ್ದರಾಮಯ್ಯ ಸಿಎಂ ಹುದ್ದೆಯಲ್ಲಿ ಇರುವುದಿಲ್ಲ. ನಿಮ್ಮ ಸೀಟು ನಿಮಗೆ ಖಾತ್ರಿ ಇಲ್ಲ. ಬದಲಾಗಿ ಎಸ್‌ಸಿ, ಎಸ್‌ಟಿ ವರ್ಗದವರಲ್ಲಿ ಯಾರನ್ನು ಮುಖ್ಯಮಂತ್ರಿ ಮಾಡುತ್ತೀರಿ ಎಂದು ಹೇಳಿ. ಬಾಗಲಕೋಟೆ ಉಪ ಚುನಾವಣೆ ಮೂಲಕ ದಲಿತರ ಭಾಗ್ಯದ ಬಾಗಿಲಾದರೂ ತೆರೆಯಲಿ ಎಂದು ವಿಪಕ್ಷ ನಾಯಕ ಆ‌ರ್. ಅಶೋಕ ಹೇಳುತ್ತಿದ್ದಾರೆ.ಸಚಿವ ಸತೀಶ ಜಾರಕಿಹೊಳಿ ತಂಡ, ಪ್ರಚಾರಕ್ಕೆ ಹೋದಲ್ಲೆಲ್ಲ ಕಾಂಗ್ರೆಸ್ ಅನ್ನು ಗೆಲ್ಲಿಸಿದರೆ ಮುಂದೆ ಜಾರಕಿಹೊಳಿ ಸಿಎಂ ಆಗುತ್ತಾರೆ ಎಂದು ಹೇಳುತ್ತಿದ್ದಾರೆ. ಸತೀಶಣ್ಣನನ್ನು ಸಿಎಂ ಮಾಡುತ್ತಾರಾ ಎಂದು ಹೇಳಲಿ. ಮಾಡಿದರೆ ನಾವೇ ಕಾಂಗ್ರೆಸ್ ಪರವಾಗಿ ಮತ ಹಾಕಿ ಎಂದು ಹೇಳುತ್ತೇವೆ ಎಂದು ಮಾಜಿ ಸಚಿವ ರಾಜುಗೌಡ ನಾಯಕ ಸವಾಲು ಹಾಕಿದ್ದಾರೆ.

ಅಭಿವೃದ್ಧಿಯೆಂದರೆ ಕೇವಲ ರಸ್ತೆ, ಸೇತುವೆ, ಕಟ್ಟಡಗಳು ಮಾತ್ರವಲ್ಲ. ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸುವುದು ಕೂಡ ಅಭಿವೃದ್ಧಿಯ ಭಾಗ. ಕಾಂಗ್ರೆಸ್ ಸರಕಾರದ ಕಾರ್ಯಕ್ರಮಗಳು ಬಡವರಿಗಾಗಿ ರೂಪಿಸಲ್ಪಟ್ಟಿವೆ. ರಾಜ್ಯದಲ್ಲಿ ಆರ್ಥಿಕ ಸ್ಥಿತಿಯೊಂದಿಗೆ ಎಲ್ಲ ಜಾತಿ, ಧರ್ಮ, ಭಾಷೆಗಳಿಗೆ ಸೇರಿದ ಜನರಿಗೆ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದು, ಗ್ಯಾರಂಟಿ ಯೋಜನೆಗಳು ಸಾಮಾಜಿಕ ಬದ್ಧತೆಯನ್ನು ಒದಗಿಸುವ ಹೂಡಿಕೆಯಾಗಿದೆ. ಇದು ಕೂಡ ಅಭಿವೃದ್ದಿ.- ಸಿದ್ದರಾಮಯ್ಯ, ಮುಖ್ಯಮಂತ್ರಿ

ಸಿದ್ದರಾಮಯ್ಯ ಸಾಲದ ಸರದಾರ. ನಾವು ಹಣಕಾಸಿನ ಸ್ಥಿತಿಗತಿ ಕೇಳಿದರೆ ಮಾಹಿತಿ ಕೊಟ್ಟಿದ್ದಾರೆ. ಆದರೆ ಸಾಲದ ವಿವರ ಹೇಳಿಲ್ಲ. ಆ ಮೂಲಕ ಪೇಪ‌ರ್ ರಾಮಯ್ಯ ಕೂಡ ಆಗಿದ್ದಾರೆ. 53 ಸಾವಿರ ಕೋಟಿ ರೂ. ಕಳ್ಳ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ಅನ್ನಭಾಗ್ಯ ಕೊಡುತ್ತಿದ್ದೇವೆ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಮೋದಿ ಅವರು 5 ಕೆಜಿ. ಅಕ್ಕಿ ಕೊಡುತ್ತಿದ್ದಾರೆ. ರಾಜ್ಯದ್ದು ಬರೀ ಚೀಲ ಮಾತ್ರ. ಹೀಗಾಗಿ ಇವರು ಚೀಲದ ರಾಮಯ್ಯ ಕೂಡ ಆಗಿದ್ದಾರೆ. ಆರ್. ಅಶೋಕ್, ವಿಪಕ್ಷ ನಾಯಕ

[t4b-ticker]
error: Content is protected !!