ಚುನಾವಣಾ ಆಯೋಗ ಅನುಮತಿ ನೀಡಿದರೆ ಏ.7ರಂದೇಫಲಿತಾಂಶ: ಪಿಯು ಮಂಡಳಿ
ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶಪ್ರಕಟಣೆಗೆ ಅನುಮತಿ ಕೋರಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು ಉತ್ತರದ ನಿರೀಕ್ಷೆಯಲ್ಲಿದೆ.ರಾಜ್ಯದಲ್ಲಿ ಏ. 9ರಂದು ಎರಡು ಕ್ಷೇತ್ರಗಳಿಗೆ ವಿಧಾನಸಭಾ ಉಪ ಚುನಾವಣೆ ನಡೆಯುತ್ತಿದೆ. ಈ ಮಧ್ಯೆ ಮಂಡಳಿಯು ಪಿಯು ಪರೀಕ್ಷಾ ವೇಳಾಪಟ್ಟಿ ಪ್ರಕಟಣೆಯ ಸಂದರ್ಭದಲ್ಲೇ ಏಪ್ರಿಲ್ 7ಕ್ಕೆ ಫಲಿತಾಂಶ ಪ್ರಕಟಿಸುವುದಾಗಿ ಘೋಷಿಸಿದ್ದು ಅದರಂತೆ ಫಲಿತಾಂಶ ಪ್ರಕಟಣೆಗೆ ಸಕಲ ತಯಾರಿ ನಡೆಸುತ್ತಿದೆ. ಒಂದು ವೇಳೆ ಚುನಾವಣಾ ಆಯೋಗ ಅನುಮತಿ ನೀಡಿದರೆ ಏ.7 ಅಥವಾ 8ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಮಂಡಳಿಯ ಮೂಲಗಳು ತಿಳಿಸಿದೆ.ಒಂದು ವೇಳೆ ಚುನಾವಣೆಯ ಬಳಿಕ ಅಂದರೆ ಏ. 9ರ ಬಳಿಕ ಫಲಿತಾಂಶ ಪ್ರಕಟಿಸುವುದಾದರೆ ಪರೀಕ್ಷೆ 2 ಮತ್ತು ಪರೀಕ್ಷೆ 3 ನಡೆಸಲು ವಿಳಂಬವಾಗಲಿದೆ. ಆದ್ದರಿಂದ ಏ.7 ಅಥವಾ 8ರಂದೇ ಪ್ರಕಟಿಸಲು ಒಪ್ಪಿಗೆ ನೀಡಬೇಕೆಂದು ಕೋರಲಾಗಿದೆ.
ನೀತಿ ಸಂಹಿತೆ ಅಡ್ಡಿಯಾಗಲ್ಲ: ಫಲಿತಾಂಶವನ್ನು ಅಧಿಕಾರಿಗಳೇ ಪ್ರಕಟಿಸಲು ನೀತಿ ಸಂಹಿತೆ ಅಡ್ಡಿಯಾಗಲಾರದು. ಆದರೆ, ಫಲಿತಾಂಶ ಪ್ರಕಟಣೆಯ ವೇಳೆ ಸಚಿವರ ಉಪಸ್ಥಿತಿಯು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಬಹುದು ಎಂಬ ಅಭಿಪ್ರಾಯವಿದ್ದು, ಫಲಿತಾಂಶ ಪ್ರಕಟಣೆಯ ದಿನದ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಿಸುವ ಸಂಬಂಧ ಪರೀಕ್ಷಾ ಮಂಡಳಿಯು ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು ಉತ್ತರದ ನಿರೀಕ್ಷೆಯಲ್ಲಿದೆ. ಫಲಿತಾಂಶ ಪ್ರಕಟಣೆಗೆ ಸರ್ಕಾರ ಮತ್ತು ಚುನಾವಣಾ ಆಯೋಗ ಅನುಮತಿ ನೀಡುವುದರ ಮೇಲೆ ಫಲಿತಾಂಶ ಪ್ರಕಟಣೆಯ ದಿನಾಂಕ ನಿರ್ಧಾರವಾಗಲಿದೆ. ಸೋಮವಾರ (ಏ.6) ನಮಗೆ ಈ ಬಗ್ಗೆ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.ಫೆ.28ರಿಂದ ಮಾ.17ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.













































