ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರು ಇತ್ತೀಚಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ವಿಐಪಿ ಟಿಕೆಟ್ ನಿರಾಕರಿಸಿ, ಬರಿಗಾಲಿನಲ್ಲಿ 3,500 ಮೆಟ್ಟಿಲುಗಳನ್ನು ಹತ್ತಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಸಾಮಾನ್ಯವಾಗಿ ಸೆಲೆಬ್ರೆಟಿಗಳು ಪಾರ್ಟಿ, ಕಾರ್ಯಕ್ರಮ ಹಾಗೂ ಆಚರಣೆಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಾರೆ. ಇನ್ನೂ ಕೆಲವು ನಟ-ನಟಿಯರು ಪ್ರಮುಖ ದೇವಾಲಯಗಳಿಗೆ ತೆರಳಿದಾಗ, ವಿಐಪಿ ಟಿಕೆಟ್ ಪಡೆಯುವ ಮೂಲಕ ಭೇಟಿ ನೀಡುತ್ತಾರೆ. ಆದರೆ ಜಾಹ್ನವಿ ಕಪೂರ್ ಅವರು ತಮ್ಮ ಇಷ್ಟದ ದೇವರ ದರ್ಶನಕ್ಕೆ ಜನಸಾಮಾನ್ಯರಂತೆ ಭೇಟಿ ನೀಡಿದ್ದಾರೆ.
ಜಾಹ್ನವಿ ಕಪೂರ್ ಅವರು ತಿರುಮಲ ದೇವಾಲಕ್ಕೆ ಭೇಟಿ ನೀಡುವಾಗ ತಮಗೆ ಸಿಕ್ಕ ಎಲ್ಲಾ ಸವಲತ್ತುಗಳನ್ನು ತಿರಸ್ಕರಿಸಿದ್ದಾರೆ. ಸುಲಭವಾಗಿ ದೇವಾಸ್ಥಾನಕ್ಕೆ ತಲುಪುವ ಬದಲು ಪಾದಚಾರಿ ಮಾರ್ಗದಲ್ಲಿ ಬಂದು, ಸಾಮಾನ್ಯರಂತೆ 3,500 ಮೆಟ್ಟಿಲುಗಳನ್ನು ಬರಿಗಾಲಿನಲ್ಲಿ ಹತ್ತುವ ಮೂಲಕ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.ರಾಜ್ ಶಮಾನಿ ಅವರೊಂದಿಗೆ ನಡೆದ ಸಂದರ್ಶನದಲ್ಲಿ ತಿರುಪತಿಯ ವೆಂಕಟೇಶ್ವರನ ದರ್ಶನದ ಕುರಿತು ಜಾಹ್ನವಿ ಅವರು ಮಾತನಾಡಿದ್ದಾರೆ. ‘ತಿರುಪತಿಯಲ್ಲಿ ವೆಂಕಟೇಶ್ವರನ ದರ್ಶನ ಪಡೆಯಲು ಅನೇಕ ಭಕ್ತರು ಗಂಟೆಗಟ್ಟಲೆ ಕಾಯುತ್ತಾರೆಂದು ನನಗೆ ತಿಳಿದಿದೆ. ನಾನು ಅವರೊಂದಿಗೆ ಕಳೆಯಲು ಸಮಯ ಸಿಕ್ಕಿರುವುದು ನಿಜಕ್ಕೂ ಅದೃಷ್ಟ ಎಂದು ಭಾವಿಸುತ್ತೇನೆ. ನಾನು ಪ್ರತಿ ಬಾರಿ ತಿರುಮಲಕ್ಕೆ ಭೇಟಿ ನೀಡಿದಾಗ 3,500 ಮೆಟ್ಟಿಲುಗಳನ್ನು ಹತ್ತುವವರೆಗೂ ನನ್ನ ದರ್ಶನ ಪೂರ್ಣವಾಗುವುದಿಲ್ಲ’ ಎಂದು ಹೇಳಿದ್ದಾರೆ.
ಜಾಹ್ನವಿ ಕಪೂರ್ ಮಾತ್ರವಲ್ಲ, ಅವರ ತಾಯಿ ಶ್ರೀದೇವಿ ಅವರು ಕೂಡ ಆಗಾಗ ತಿರುಮಲಕ್ಕೆ ಭೇಟಿ ನೀಡುತ್ತಿರುತ್ತಾರೆ. ಅವರು ಕೂಡ ಪಾದಾಚಾರಿ ಮಾರ್ಗದಲ್ಲೇ ಸಾಗಿ ದೇವರ ದರ್ಶನ ಪಡೆಯುತ್ತಾರೆ.










































