ದೆಹಲಿ: ಕಾಂಗ್ರೆಸ್ ಪಕ್ಷದ ಇತಿಹಾಸ ಮತ್ತು ತುರ್ತು ಪರಿಸ್ಥಿತಿಯ ನಿರ್ಧಾರಗಳನ್ನು ಕಟುವಾಗಿ ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), 1984ರಲ್ಲಿ ದಾಖಲೆಯ ಸ್ಥಾನಗಳನ್ನು ಗೆದ್ದಿದ್ದರೂ ಕಾಂಗ್ರೆಸ್ ದೇಶದ ಜನರಿಗೆ ದ್ರೋಹ ಬಗೆದಿದ್ದು, ಆ ಪಕ್ಷವು ಕೇವಲ ಒಂದು ಕುಟುಂಬದ ಹಿತಾಸಕ್ತಿಗಾಗಿ ಮಾತ್ರ ಕೆಲಸ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯ ಸಂಸ್ಥಾಪನಾ ದಿನದ ಅಂಗವಾಗಿ ವಿಡಿಯೋ ಮೂಲಕ ಸಂದೇಶ ನೀಡಿರುವ ಪ್ರಧಾನಿ ಮೋದಿ, ಕಾಂಗ್ರೆಸ್ನ ನಡೆಗೆ ವ್ಯತಿರಿಕ್ತವಾಗಿ ಭಾರತೀಯ ಜನತಾ ಪಕ್ಷವು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
1980ರಲ್ಲಿ ಪಕ್ಷ ಸ್ಥಾಪನೆಯಾದಾಗಿನಿಂದಲೂ ನಮ್ಮ ಪಕ್ಷದ ಕಾರ್ಯಕರ್ತರು ಜನಸಾಮಾನ್ಯರ ಸಮಸ್ಯೆಗಳಿಗಾಗಿ ಪ್ರಾಣತ್ಯಾಗಕ್ಕೂ ಸಿದ್ಧರಾಗಿ ಕೆಲಸ ಮಾಡಿದ್ದಾರೆ. ಬಿಜೆಪಿಯ ಮೇಲಿನ ಜನರ ನಂಬಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭ್ರಷ್ಟಾಚಾರ ಮತ್ತು ಒಳನುಸುಳುವಿಕೆಯಂತಹ ಗಂಭೀರ ವಿಷಯಗಳ ವಿರುದ್ಧ ಪಕ್ಷದ ಹೋರಾಟ ಮುಂದುವರಿಯಲಿದೆ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಪಕ್ಷವನ್ನು ತಾಯಿ ಎಂದು ಪರಿಗಣಿಸುವ ಏಕೈಕ ರಾಜಕೀಯ ಶಕ್ತಿ ಎಂದರೆ ಅದು ಬಿಜೆಪಿ, ಈ ಸಂಸ್ಥಾಪನಾ ದಿನವು ಕೇವಲ ರಾಜಕೀಯ ಕಾರ್ಯಕ್ರಮವಲ್ಲ, ಬದಲಾಗಿ ಪ್ರತಿಯೊಬ್ಬ ಕಾರ್ಯಕರ್ತನಿಗೂ ಅದೊಂದು ಭಾವನಾತ್ಮಕ ಸಂದರ್ಭವಾಗಿದೆ, ರಾಷ್ಟ್ರ ಸೇವೆಗೆ ಅವಕಾಶ ಮಾಡಿಕೊಟ್ಟ ಪಕ್ಷಕ್ಕೆ ಕೃತಜ್ಞತೆ ಸಲ್ಲಿಸಲು ಇದು ಸುಸಮಯ ಎಂದಿರುವ ಪ್ರಧಾನಿಯವರು, ತಮ್ಮ ಆಡಳಿತ ಅವಧಿಯಲ್ಲಿ ಕೈಗೊಂಡ ಐತಿಹಾಸಿಕ ನಿರ್ಧಾರಗಳನ್ನು ಮೆಲುಕು ಹಾಕಿದರು.370ನೇ ವಿಧಿಯ ರದ್ಧತಿ, ತ್ರಿವಳಿ ತಲಾಖ್ ವಿರುದ್ಧದ ಕಾನೂನು, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಂತಹ ಅಸಾಧ್ಯವೆನಿಸಿದ್ದ ಕಾರ್ಯಗಳನ್ನು ಬಿಜೆಪಿ ಸಾಧ್ಯವಾಗಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿರುವ ಮೋದಿ, ಮುಂದಿನ ದಿನಗಳಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಗುರಿಯನ್ನು ಪಕ್ಷ ಹೊಂದಿದೆ ಎಂದು ಇದೇ ವೇಳೆ ಘೋಷಿಸಿದರು.
ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನ ಬದಲಾಗುತ್ತಿರುವ ಬಗ್ಗೆ ಮಾತನಾಡಿದ ಮೋದಿ, ಹಿಂದೆ ಅನೇಕ ದೇಶಗಳಿಂದ ದೂರವಿದ್ದ ಭಾರತ ಇಂದು ವಿಶ್ವದ ಎಲ್ಲಾ ರಾಷ್ಟ್ರಗಳೊಂದಿಗೆ ಸದೃಢ ಸಂಬಂಧವನ್ನು ಹೊಂದುತ್ತಿದೆ ಎಂದು ತಿಳಿಸಿದರು. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ನಾಯಕತ್ವವನ್ನು ಶ್ಲಾಘಿಸಿದ ಅವರು, ಮುಂಬರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ಚುನಾವಣೆಗಳಲ್ಲಿ ಪಕ್ಷವು ಹೊಸ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವುದೇ ತಮ್ಮ ಅಂತಿಮ ಗುರಿಯಾಗಿದ್ದು, ಅದಕ್ಕಾಗಿ ನಿಸ್ವಾರ್ಥ ಸೇವೆ ಮುಂದುವರಿಯಲಿದೆ ಎಂದು ಪುನರುಚ್ಚರಿಸಿದರು. ಇನ್ನು ಕೆಲವು ವರ್ಷಗಳಲ್ಲಿ ಬಿಜೆಪಿ ಐವತ್ತು ವರ್ಷಗಳನ್ನು ಪೂರ್ಣಗೊಳಿಸಲಿದ್ದು, ಬದಲಾಗುತ್ತಿರುವ ತಂತ್ರಜ್ಞಾನದ ಯುಗಕ್ಕೆ ತಕ್ಕಂತೆ ಹೊಸ ಗುರಿಗಳನ್ನು ರೂಪಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕರೆ ನೀಡಿದರು.
ಕಾಂಗ್ರೆಸ್ನಿಂದ ಸಶಸ್ತ್ರ ಪಡೆಗಳಿಗೆ ಅವಮಾನ
ರಾಷ್ಟ್ರ ಮೊದಲು ಎಂಬ ಮಂತ್ರದೊಂದಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ತಮ್ಮ ಸಂಕಲ್ಪವಾಗಿದ್ದು, ಒಂದೆರಡು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಎಂದಿಗೂ ತನ್ನ ರಿಪೋರ್ಟ್ ಕಾರ್ಡ್‌ನೊಂದಿಗೆ ಜನರ ಬಳಿಗೆ ಹೋಗುವುದಿಲ್ಲ, ಆದರೆ ಬಿಜೆಪಿ ತಾನು ಮಾಡಿದ ಕೆಲಸಗಳನ್ನು ಮತ್ತು ರೈತರ ಸಮೃದ್ಧಿಗಾಗಿ ಕೈಗೊಂಡ ಕ್ರಮಗಳನ್ನು ಸದಾ ಸಾರ್ವಜನಿಕರ ಮುಂದೆ ಮಂಡಿಸುತ್ತದೆ ಎಂದರು.ಕಾಂಗ್ರೆಸ್ ಪಕ್ಷ ಸಶಸ್ತ್ರ ಪಡೆಗಳ ಶೌರ್ಯವನ್ನು ಅವಮಾನಿಸುತ್ತಿದೆ ಎಂದು ಆರೋಪಿಸಿದ ಮೋದಿ, ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್ ಸಮಯದಲ್ಲಿ ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಗಳು ಪಾಕಿಸ್ತಾನದ ಅಜೆಂಡಾಕ್ಕೆ ಪೂರಕವಾಗಿದ್ದವು ಎಂದು ಟೀಕಿಸಿದರು. ಈ ಪಾಕಿಸ್ತಾನ ಸಂಪರ್ಕ ದೇಶಕ್ಕೆ ಹಾನಿ ಮಾಡಿದ್ದು, ಒಂದು ಶ್ರೇಣಿ ಒಂದು ಪಿಂಚಣಿ ವಿಷಯದಲ್ಲಿ ಕಾಂಗ್ರೆಸ್ ಸಶಸ್ತ್ರ ಪಡೆಗಳಿಗೆ ದ್ರೋಹ ಬಗೆದಿದೆ ಎಂದು ಕಿಡಿಕಾರಿದರು










































