ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಂತ್ ಅಂಬಾನಿ ಅವರು ಕೇರಳದ ಅತ್ಯಂತ ಪ್ರಸಿದ್ಧ ದೇವಾಲಯ ಗಳಾದ ತಳಿಪರಂಬ ರಾಜರಾಜೇಶ್ವರ ದೇವಸ್ಥಾನ ಮತ್ತು ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಈ ಎರಡು ದೇವಾಲಯಗಳಿಗೆ ತಲಾ 3 ಕೋಟಿ ರೂ.ಗಳಂತೆ 6 ಕೋಟಿ ರೂ.ಗಳನ್ನು ದೇಣಿಗೆಯಾಗಿ ಸಮರ್ಪಿಸಿದರು.ಇನ್ನು ರಾಜರಾಜೇಶ್ವರ ದೇಗುಲದ ನವೀಕರಣಕ್ಕಾಗಿ 12 ಕೋಟಿ ರೂ.ಗಳ ಆರ್ಥಿಕ ನೆರವನ್ನು ಘೋಷಿಸಿದರು. ಗುರುವಾಯೂರು ಶ್ರೀ ಕೃಷ್ಣನ ಸನ್ನಿಧಾನದಲ್ಲಿರುವ ಆನೆಗಳ ಕ್ಷೇಮಾ ಭಿವೃದ್ಧಿಗಾಗಿ ಹೆಚ್ಚುವರಿ ಆರ್ಥಿಕ ನೆರವನ್ನು ಅನಂತ್ ಅಂಬಾನಿ ಪ್ರಕಟಿಸಿದರು. ಏಪ್ರಿಲ್ 2ರಂದು ರಾತ್ರಿ 8 ಗಂಟೆಗೆ ತಳಿಪರಂಬದ ಐತಿಹಾಸಿಕ ರಾಜರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅನಂತ್ ಅಂಬಾನಿ ಅವರು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಸಾಂಪ್ರದಾಯಿಕ ಸೇವೆಗಳಾದ ಪೊನ್ನುಂಕುಡಂ, ಪಟ್ಟಂ, ತಾಲಿ, ನೆಯ್ಯಾಮೃತು ಅರ್ಪಿಸಿ ಅಶ್ವಮೇಧ ನಮಸ್ಕಾರವನ್ನು ನೆರವೇರಿಸಿದರು.
ದೇವಾಲಯದ ಪ್ರಸ್ತುತ ನಡೆಯುತ್ತಿರುವ ನವೀಕರಣ ಕಾಮಗಾರಿಗಳಿಗಾಗಿ ಮೊದಲ ಹಂತದಲ್ಲಿ 3 ಕೋಟಿ ರೂಪಾಯಿಗಳ ಚೆಕ್ ಅನ್ನು ಹಸ್ತಾಂತರಿಸಿದರು. ರಾಜರಾಜೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಅಂಬಾನಿ ಅವರು ಒಟ್ಟು 12 ಕೋಟಿ ರೂಪಾಯಿಗಳ ಕೊಡುಗೆ ನೀಡುವುದಾಗಿ ತಿಳಿಸಿದ್ದಾರೆ. ಈ ದೇಣಿಗೆಯಿಂದ ದೇವಸ್ಥಾನದ ಪುರಾತನ ಪೂರ್ವ ಗೋಪುರವನ್ನು ಪುನರ್ ನಿರ್ಮಿಸಲಾಗುವುದು. ಸುಮಾರು ಎರಡು ಶತಮಾನಗಳಿಂದ ಶಿಥಿಲಾವಸ್ಥೆ ಯಲ್ಲಿದ್ದ ಈ ಗೋಪುರವು ದೇವಸ್ಥಾನದಷ್ಟೇ ಪುರಾತನವಾದ ಇತಿಹಾಸ ಮತ್ತು ವಾಸ್ತುಶಿಲ್ಪವನ್ನು ಹೊಂದಿದೆ. ಇದರ ಜೀರ್ಣೋದ್ಧಾರವು ಭಕ್ತರ ದಶಕಗಳ ಕನಸಾಗಿದ್ದು, ಈಗ ಸಾಕಾರಗೊಳ್ಳುತ್ತಿದೆ. ಅಲ್ಲದೆ ಈ ಅನುದಾನದಡಿ ಭಕ್ತರಿಗಾಗಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಮತ್ತು ಮೂಲಸೌಕರ್ಯಗಳನ್ನು ಸಹ ಮೇಲ್ದರ್ಜೆಗೇರಿಸಲಾಗುವುದು. ಟಿಟಿಕೆ ದೇವಸ್ವಂ ಅಧ್ಯಕ್ಷರಾದ ಟಿ.ಪಿ. ವಿನೋದ್ ಕುಮಾರ್ ಮತ್ತು ಮುಖ್ಯ ಅರ್ಚಕರಾದ ಇ.ಪಿ. ಕುಬೇರನ್ ನಂಬೂದರಿ ಅವರು ಅನಂತ್ ಅಂಬಾನಿ ಅವರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.
ಗುರುವಾಯೂರು ದೇಗುಲಕ್ಕೆ ಭೇಟಿ: ಇದಕ್ಕೂ ಮುನ್ನ, ಸಂಜೆ 5ಗಂಟೆಗೆ ಅನಂತ್ ಅಂಬಾನಿ ಅವರು ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಿ ಗುರುವಾಯೂರಪ್ಪನ ದರ್ಶನ ಪಡೆದರು. ಅಲ್ಲಿನ ದೇವಸ್ಥಾನದ ಟ್ರಸ್ಟ್‌ಗೆ 3 ಕೋಟಿ ರೂಪಾಯಿಗಳ ದೇಣಿಗೆಯನ್ನು ಅರ್ಪಿಸಿದರು. ದೇವಸ್ವಂ ಅಧ್ಯಕ್ಷರಾದ ಎ.ವಿ. ಗೋಪಿನಾಥ್ ಅವರು ಅಂಬಾನಿ ಅವರನ್ನು ಗೌರವಿಸಿ ಪ್ರಸಾದವನ್ನು ನೀಡಿದರು. ಪ್ರಾಣಿ ಸಂರಕ್ಷಣೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಅನಂತ್ ಅಂಬಾನಿ ಅವರು, ಗುರುವಾಯೂರು ದೇವಸ್ಥಾನದ ಆನೆಗಳ ಕಲ್ಯಾಣಕ್ಕಾಗಿ ತಮ್ಮ ”ವನತಾರಾ’ ಉಪಕ್ರಮದ ಮೂಲಕ ವಿಶೇಷ ಬೆಂಬಲ ಘೋಷಿಸಿದರು. ಆನೆಗಳಿಗೆ ಸಂಕೋಲೆಮುಕ್ತವಾದ ಮುಕ್ತ ಆಶ್ರಯ ತಾಣ, ಆನೆಗಳಿಗಾಗಿ ಆಧುನಿಕ ಆಸ್ಪತ್ರೆ ಮತ್ತು ಅವುಗಳ ವೈಜ್ಞಾನಿಕ ಆರೈಕೆಗಾಗಿ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು. ಅನಂತ್ ಅಂಬಾನಿ ಅವರ ಈ ಕನಸು ನನಸಾದಲ್ಲಿ ಗುರುವಾಯೂರಿನ ಗಜಪಡೆಗಳ ಜೀವನಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ದೇಶದ ಪವಿತ್ರ ಪರಂಪರೆ ಮುಂದಿನ ಪೀಳಿಗೆಗೆ ಸಂರಕಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿ
ಈ ಸಂದರ್ಭದಲ್ಲಿ ಮಾತನಾಡಿದ ಅನಂತ್ ಅಂಬಾನಿ ಅವರು, “ಭಾರತದ ಆಧ್ಯಾತ್ಮಿಕ ಕೇಂದ್ರಗಳು ಕೇವಲ ಪೂಜಾ ಸ್ಥಳಗಳಲ್ಲ, ಅವು ಶ್ರದ್ಧೆ, ಕರುಣೆ ಮತ್ತು ಪ್ರಕೃತಿಯೊಂದಿಗಿನ ನಮ್ಮ ಅವಿನಾಭಾವ ಸಂಬಂಧವನ್ನು ಪೋಷಿಸುವ ಜೀವಂತ ಸಂಸ್ಥೆಗಳು. ಈ ಪವಿತ್ರ ಪರಂಪರೆಯನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ನಮ್ಮ ಸಂಪ್ರದಾಯದ ಅವಿಭಾಜ್ಯ ಅಂಗವಾಗಿರುವ ಪ್ರಾಣಿಗಳನ್ನು ಅತ್ಯಂತ ಗೌರವ ಮತ್ತು ವೈಜ್ಞಾನಿಕ ಕಾಳಜಿಯಿಂದ ಆರೈಕೆ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ’ ಎಂದರು.ಅನಂತ್ ಅಂಬಾನಿ ಅವರ ಈ ಕೊಡುಗೆಯು ಭಾರತದ ಪ್ರಾಚೀನ ಆಧ್ಯಾತ್ಮಿಕ ಮೌಲ್ಯಗಳು, ಪರಂಪರೆ ಮತ್ತು ನಿಸರ್ಗದೊಂದಿಗಿನ ಸಾಮರಸ್ಯವನ್ನು ಎತ್ತಿ ಹಿಡಿಯುವ ವಿಶಾಲ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತಿದೆ.
ಕೇರಳದಲ್ಲಿ ಅನಂತ್ ಅಂಬಾನಿ
- ಕೇರಳದ ಅತ್ಯಂತ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಂತ್ ಅಂಬಾನಿ
- ಎರಡು ಶತಮಾನಗಳಿಂದ ಶಿಥಿಲಾವಸ್ಥೆ ಯಲ್ಲಿದ್ದ ರಾಜರಾಜೇಶ್ವರ ದೇವಸ್ಥಾನದ ಪುರಾತನ ಪೂರ್ವ ಗೋಪುರದ ಪುನರ್ ನಿರ್ಮಾಣಕ್ಕೆ ದೇಣಿಗೆ ಬಳಕೆ
- ಆನೆಗಳಿಗಾಗಿ ಆಧುನಿಕ ಆಸ್ಪತ್ರೆ ಮತ್ತು ವೈಜ್ಞಾನಿಕ ಆರೈಕೆಗಾಗಿ ಅತ್ಯಾಧುನಿಕ ಸೌಕರ್ಯ










































