ನವದೆಹಲಿ: ಮಹಿಳೆಯರನ್ನು ತಿಂಗಳಿನ ಮೂರು ದಿನಗಳ ಕಾಲ ‘ಅಸ್ಪೃಶ್ಯರು’ ಎಂದು ಪರಿಗಣಿಸುವುದು ಸರಿಯಲ್ಲ. ಒಂದು ವೇಳೆ ಆ ಮೂರು ದಿನ ಅವರನ್ನು ಅಸ್ಪೃಶ್ಯರೆಂದು ಪರಿಗಣಿಸುವುದಾದರೆ, ನಾಲ್ಕನೇ ದಿನದಿಂದ ಅವರು ಅಸ್ಪೃಶ್ಯರಲ್ಲ ಎಂದು ಹೇಗೆ ತೀರ್ಮಾನಿಸುತ್ತೀರಿ? ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಗಂಭೀರ ಪ್ರಶ್ನೆ ಎತ್ತಿದ್ದಾರೆ.
ಕೇರಳದ ಶಬರಿಮಲೆ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧ ನಡೆಯುವ ತಾರತಮ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಯ ಕುರಿತು ಸುಪ್ರೀಂ ಕೋರ್ಟ್‌ನ 9 ನ್ಯಾಯಾಧೀಶರ ಸಾಂವಿಧಾನಿಕ ಪೀಠವು ವಿಚಾರಣೆ ನಡೆಸುತ್ತಿದೆ.ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಈ ಪೀಠದಲ್ಲಿ ನ್ಯಾ. ಬಿ.ವಿ. ನಾಗರತ್ನ, ನ್ಯಾ. ಅರವಿಂದ್ ಕುಮಾರ್, ನ್ಯಾ. ಪ್ರಸನ್ನ ಬಿ. ವರಾಳೆ ಸೇರಿದಂತೆ ಒಂಬತ್ತು ನ್ಯಾಯಮೂರ್ತಿಗಳು ಧಾರ್ಮಿಕ ಹಕ್ಕು ಮತ್ತು ಲಿಂಗ ಸಮಾನತೆಯ ಕುರಿತಾದ ಹಲವು ಅರ್ಜಿಗಳ ವಿಚಾರಣೆ ನಡೆಸುತ್ತಿದ್ದಾರೆ.
ಕೇಂದ್ರದ ವಾದವೇನು?
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಅವರು, 2018ರ ಶಬರಿಮಲೆ ತೀರ್ಪಿನ ಕೆಲವು ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು. “10 ರಿಂದ 50 ವರ್ಷದೊಳಗಿನ ಮಹಿಳೆಯರನ್ನು ದೇವಸ್ಥಾನದಿಂದ ಹೊರಗಿಡುವುದು ಅಸ್ಪೃಶ್ಯತೆ’ಯ ಒಂದು ರೂಪ ಎಂದು ಅಂದಿನ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ನೀಡಿದ್ದ ವೀಕ್ಷಣೆಯನ್ನು ನಾವು ಒಪ್ಪುವುದಿಲ್ಲ. ಇದು ಸಂವಿಧಾನದ 17ನೇ ವಿಧಿಯ (ಅಸ್ಪೃಶ್ಯತೆ ನಿರ್ಮೂಲನೆ) ಉಲ್ಲಂಘನೆಯಲ್ಲ.” ಎಂದು ವಾದಿಸಿದರು.
ಮುಂದುವರಿದು ಮಾತನಾಡಿದ ಮೆಹ್ರಾ. “ಶಬರಿಮಲೆ ದೇವಸ್ಥಾನದ ನಿರ್ಬಂಧವು ಕೇವಲ ವಯಸ್ಸಿನ ಆಧಾರದ ಮೇಲಿದೆಯೇ ಹೊರತು ಮುಟ್ಟಿನ ಪ್ರಕ್ರಿಯೆಯ ಆಧಾರದ ಮೇಲಲ್ಲ. ವಿಶ್ವದಾದ್ಯಂತ ಇರುವ ಇತರ ಅಯ್ಯಪ್ಪ ಸ್ವಾಮಿ ದೇವಾಲಯಗಳಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶವಿದೆ. ಈ ಸಂಪ್ರದಾಯವು ಕೇವಲ ಶಬರಿಮಲೆಗೆ ಮಾತ್ರ ಸೀಮಿತವಾಗಿದೆ.” ಎಂದು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.
ಪ್ರಕರಣದ ಹಿನ್ನೆಲೆ:2018ರಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕಿದ್ದ ನಿಷೇಧವನ್ನು ತೆರವುಗೊಳಿಸಿ ಐತಿಹಾಸಿಕ ತೀರ್ಪು ನೀಡಿತ್ತು. ಆದರೆ, ಈ ತೀರ್ಪಿನ ವಿರುದ್ಧ ಹಲವು ಮರುಪರಿಶೀಲನಾ ಅರ್ಜಿಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ, ಧಾರ್ಮಿಕ ಆಚರಣೆ ಮತ್ತು ಮಹಿಳಾ ಹಕ್ಕುಗಳ ನಡುವಿನ ಸಮತೋಲನವನ್ನು ಪರಿಶೀಲಿಸಲು ಪ್ರಕರಣವನ್ನು 9 ನ್ಯಾಯಾಧೀಶರ ವಿಶಾಲ ಪೀಠಕ್ಕೆ ವರ್ಗಾಯಿಸಲಾಗಿತ್ತು.










































