ನಾಳೆ(ಏ.10) : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಆರಂಭ

Picture of Savistara

Savistara

Bureau Report

ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಏ.10ಕ್ಕೆ ಆರಂಭಗೊಳ್ಳಲಿದೆ.ಪ್ರತಿ ದಿನ ಶ್ರೀ ದೇವರ ಉತ್ಸವ ಬಲಿ, ಪೇಟೆ ಸವಾರಿಯೊಂದಿಗೆ ಕಟ್ಟೆ ಪೂಜೆ ಸ್ವೀಕಾರ ನಡೆಯಲಿದೆ.ಪ್ರತಿ ದಿನ ಸಂಜೆ ದೇವಳದ ನಟರಾಜ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು,ದೇವಳದ ರಾಜಗೋಪುರದಲ್ಲಿ ನಿರಂತರ ಭಜನಾ ಕಾರ್ಯಕ್ರಮ,ಅನ್ನದ ಅಗುಳು ಮುತ್ತಾದ ಕೆರೆಯ ಬಳಿಯೇ ಅನ್ನಪ್ರಸಾದ ವಿತರಣೆ ನಡೆಯಲಿದೆ.ಶಾಸಕ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಂತೆ ಉತ್ಸವಾದಿಗಳು ಸಮಯಕ್ಕೆ ಸರಿಯಾಗಿ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ತಿಳಿಸಿದ್ದಾರೆ.ಏ.10ಕ್ಕೆ ಬೆಳಿಗ್ಗೆ ಧ್ವಜಾರೋಹಣ ನಡೆಯಲಿದೆ.

ಮಧ್ಯಾಹ್ನ ಕುರಿಯ ಮಾಡಾವು ಏಳ್ಳಾಡುಗುತ್ತು ಕುಟುಂಬದವರಿಂದ ಅನ್ನಸಂತರ್ಪಣೆ ನಡೆಯಲಿದೆ.ಅದೇ ದಿನ ಸಂಜೆಯಿಂದ ಶ್ರೀ ದೇವರ ಪೇಟೆ ಸವಾರಿ ಆರಂಭಗೊಳ್ಳಲಿದೆ.ಪೇಟೆ ಸವಾರಿಯುದ್ದಕ್ಕೂ ಪ್ರತಿ ಕಟ್ಟೆಯಲ್ಲಿ ಶ್ರೀ ದೇವರು ಪೂಜೆ ಸ್ವೀಕರಿಸಲಿದ್ದಾರೆ. ರಾತ್ರಿ ಅಂಕುರಾರ್ಪಣೆ ಬಲಿ ಹೊರಟು ಉತ್ಸವ, ಬೊಳುವಾರು ಶ್ರೀ ರಾಮಪೇಟೆ ಕಾರ್ಜಾಲು, ರಕೇಶ್ವರಿ ದೇವಸ್ಥಾನ, ಕಲ್ಲೇಗ, ಕರ್ಮಲ ಸವಾರಿ ನಡೆಯಲಿದೆ.ಏ.11ಕ್ಕೆ ಮಧ್ಯಾಹ್ನ ಕೆ.ಎಸ್.ಆ‌ರ್.ಟಿ.ಸಿ ಪುತ್ತೂರು ವಿಭಾಗದವರಿಂದ ಅನ್ನಸಂರ್ಪಣೆ ನಡೆಯಲಿದೆ. ರಾತ್ರಿ ನೆಲ್ಲಿಕಟ್ಟೆ, ಸಾಲ್ಮರ, ಸೂತ್ರಬೆಟ್ಟು ಸವಾರಿ,ಏ.12ಕ್ಕೆ ಶಿವಪೇಟೆ, ತೆಂಕಿಲ, ಕೊಟ್ಟಿಬೆಟ್ಟು ಏಳ್ಳಾಡುಗುತ್ತು ಬೈಪಾಸ್ ಹೆದ್ದಾರಿ, ರಾಧಾಕೃಷ್ಣ ಮಂದಿರ ಸವಾರಿ,ಏ.13ರಂದು ಕೋರ್ಟ್ ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೊಳುವಾರುಬೈಲು ಸವಾರಿ, ಏ.14ರಂದು ಮೇಷ ಸಂಕ್ರಮಣದಂದು ಕೊಂಬೆಟ್ಟು, ಬೊಳುವಾರು, ಹಾರಾಡಿ, ತಾಳೆಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೆಲ್, ಸಕ್ಕೆರೆಕಟ್ಟೆ ಸವಾರಿ, ಏ.15ಕ್ಕೆ ಸೌರಮಾನ ಯುಗಾದಿ(ವಿಷು)ಯಂದು ಬೆಳಿಗ್ಗೆ ಉತ್ಸವ, ವಸಂತಕಟ್ಟೆಪೂಜೆ, ರಾತ್ರಿ ಉತ್ಸವ, ಬಂಡಿ ಉತ್ಸವ, ಬನ್ನೂರು, ಅಶೋಕನಗರ, ರೈಲ್ವೇಮಾರ್ಗ ಸವಾರಿ ನಡೆಯಲಿದೆ.ಏ.16ಕ್ಕೆ ಬೆಳಿಗ್ಗೆ ತುಲಾಭಾರ ಸೇವೆ, ರಾತ್ರಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳು, ಪಾಲಕಿ ಉತ್ಸವ, ಸಣ್ಣರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವ ನಡೆಯಲಿದೆ.

ಏ.17ರಂದು ಬೆಳಿಗ್ಗೆ ಉತ್ಸವ ವಸಂತಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಬ್ರಹ್ಮರಥದ ದಾನಿ ದಿ.ನೆಟ್ಟಾಳ ಮುತ್ತಪ್ಪ ರೈ ದೇರ್ಲ ಇವರ ಸ್ಮರಣಾರ್ಥ ಸಹೋದರಿ, ಸಹೋದರರು ಮತ್ತು ಮಕ್ಕಳಿಂದ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 7.30ರಿಂದ ಉತ್ಸವದ ಬಳಿಕ ‘ಪುತ್ತೂರು ಬೆಡಿ’ ಎಂದೇ ಪ್ರಸಿದ್ಧಿ ಪಡೆದಿರುವ ಸಿಡಿಮದ್ದು ಪ್ರದರ್ಶನ ನಡೆದು ಬ್ರಹ್ಮರಥೋತ್ಸವ ನಡೆಯಲಿದೆ. ಬಳಿಕ ಬಂಗಾರ್ ಕಾಯರ್‌ಕಟ್ಟೆ ಸವಾರಿ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ, ಶ್ರೀ ಭೂತಬಲಿ, ಶಯನ ನಡೆಯಲಿದೆ. ಏ.18ಕ್ಕೆ ಬೆಳಿಗ್ಗೆ ಗಂಟೆ 7.30ಕ್ಕೆ ಬಾಗಿಲು ತೆರೆಯುವ ಮುಹೂರ್ತ, ತುಲಾಭಾರ ಸೇವೆ, ಸಂಜೆ ಗಂಟೆ 3.30ರಿಂದ ವೀರಮಂಗಲ ಅವನೃತ ಸ್ನಾನಕ್ಕೆ ಸವಾರಿ ನಡೆಯಲಿದೆ.ಏ.19ಕ್ಕೆ ಬೆಳಿಗ್ಗೆ ಧ್ವಜಾವರೋಹಣ, ರಾತ್ರಿ ಚೂರ್ಣೋತ್ಸವ ವಸಂತ ಪೂಜೆ ಪ್ರಾರಂಭಗೊಳ್ಳಲಿದೆ.ಹುಲಿ ಭೂತ, ರಕೇಶ್ವರಿ ನೇಮ ನಡೆಯಲಿದೆ. ಏ.20ಕ್ಕೆ ಸಂಪ್ರೋಕ್ಷಣೆ, ರಾತ್ರಿ ಮಂತ್ರಾಕ್ಷತೆ, ಅಂಣತ್ತಾಯ, ಪಂಜುರ್ಲಿ, ವಗೈರೆ ದೈವಗಳ ನೇಮ ನಡೆಯಲಿದೆ ಎಂದು ಪಂಜಿಗುಡ್ಡೆ ಈಶ್ವರ ಭಟ್ ತಿಳಿಸಿದ್ದಾರೆ.ಎಲ್ಲಾ ಉತ್ಸವಾದಿಗಳಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಧಾನ ಅರ್ಚಕ ವೇ.ಮೂ.ವಸಂತ ಕೆದಿಲಾಯ ಅವರು ದೇವಳದ ಒಳಾಂಗಣದ ಅರ್ಚಕ ವ್ಯವಸ್ಥೆಯಲ್ಲಿ ಸದಸ್ಯರಾದ ಈಶ್ವರ ಬೆಡೇಕ‌ರ್, ಕೃಷ್ಣವೇಣಿ, ನಳಿನಿ ಪಿ ಶೆಟ್ಟಿ, ದಿನೇಶ್ ಕುಲಾಲ್, ಮಹಾಬಲ ರೈ ವಳತ್ತಡ್ಕ, ಸುಭಾಶ್ ರೈ ಬೆಳ್ಳಿಪ್ಪಾಡಿ, ವಿನಯ ಕುಮಾ‌ರ್ ಸುವರ್ಣ ಅವರ ವ್ಯವಸ್ಥಿತ ಜೋಡಣೆಯಂದಿಗೆ ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯಲಿದೆ ಎಂದವರು ಹೇಳಿದ್ದಾರೆ.

ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮ:

ಜಾತ್ರೆಯ ಸಲುವಾಗಿ ಏ.17ರ ಬ್ರಹ್ಮರಥೋತ್ಸವದ ಸಂದರ್ಭ ಬಿಟ್ಟು ಉಳಿದಂತೆ ಏ.10ರಿಂದ ಏ.20ರ ತನಕ ಪ್ರತಿ ದಿನ ಸಂಜೆಯಿಂದ ರಾತ್ರಿ ತನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ದೇವಳದ ನಟರಾಜ ವೇದಿಕೆಯಲ್ಲಿ ನಡೆಯಲಿದೆ.ಸಂಜೆ ಗಂಟೆ 5ರಿಂದ ರಾತ್ರಿ ಗಂಟೆ 10ರ ಒಳಗೆ ಕಾರ್ಯಕ್ರಮ ಮುಗಿಯಲಿದೆ ಎಂದು ಈಶ್ವರ ಭಟ್ ಪಂಜಿಗುಡ್ಡೆ ತಿಳಿಸಿದ್ದಾರೆ.

5 ಕಟ್ಟೆಗಳು ಪೂರ್ಣ

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಜೊತೆಯಲ್ಲೇ ದೇವಸ್ಥಾನದ ಜೀರ್ಣೋದ್ದಾರ ಮತ್ತು ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿದೆ. ಜಾತ್ರೆಯ ಮೊದಲು ದೇವಳದ ರಾಜಾಂಗಣದಲ್ಲಿರುವ 5 ಕಟ್ಟೆಗಳನ್ನು ಶಿಲಾಮಯವನ್ನಾಗಿ ಪುನರ್‌ನಿರ್ಮಾಣ ಮಾಡುವ ಕಾರ್ಯ ಪೂರ್ಣಗೊಂಡಿದ್ದು ಏ.8ರಂದು ರಾತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಕುಂಟಾರು ಗುರು ತಂತ್ರಿಯವರು ವಾಸ್ತು ಹೋಮ ನೆರವೇರಿಸಿದ್ದಾರೆ.ಐದು ಕಟ್ಟೆಗಳೂ ಕಲಾತ್ಮಕವಾಗಿ ನಿರ್ಮಾಣಗೊಂಡಿವೆ.

ವಿಸ್ತಾರಗೊಂಡ ಅನ್ನಪೂರ್ಣ ಭೋಜನ ಮಂಟಪ

ಕಳೆದ ಬಾರಿಗಿಂತಲೂ ಈ ಬಾರಿ ಅನ್ನಪೂರ್ಣ ಭೋಜನ ಮಂಟಪ ವಿಸ್ತಾರಗೊಂಡಿದೆ.ಸುಮಾರು 25 ಸಾವಿರ ಮಂದಿಗೆ ಏಕಕಾಲದಲ್ಲಿ ಅನ್ನಪ್ರಸಾದ ಸ್ವೀಕರಿಸಲು ವಿಶಾಲವಾದ ಭೋಜನಶಾಲೆಯನ್ನು ಕೆರೆಯ ಬಳಿ ನಿರ್ಮಾಣ ಮಾಡಲಾಗಿದೆ. ಬೋಜನಶಾಲೆಗೆ ಎರಡು ಕಡೆಯಿಂದ ಬೃಹತ್ ಸ್ವಾಗತ ದ್ವಾರ ನಿರ್ಮಾಣ ಮಾಡಲಾಗಿದೆ.ಸುಮಾರು 12 ಸಾವಿರ ಚದರ ಅಡಿಯಲ್ಲಿ ಬೃಹತ್ ಪೆಂಡಾಲ್‌ ನಿರ್ಮಾಣ ಮಾಡಲಾಗಿದೆ. ಎಲ್ಲೂ ಕೂಡಾ ಭಕ್ತರು ಬಿಸಿಲಿನಲ್ಲಿ ನಿಲ್ಲದಂತೆ ವ್ಯವಸ್ಥಿತವಾಗಿ ಪೆಂಡಾಲ್‌ ನಿರ್ಮಾಣ ಮಾಡಲಾಗಿದೆ.

ಪ್ರತಿ ಮನೆಯಿಂದ ಕನಿಷ್ಠ ದೇಣಿಗೆ ಸಮರ್ಪಣೆಯಾಗಲಿ

ದೇವಳದ ವಾರ್ಷಿಕ ಜಾತ್ರೆಗೆ ಏ.10ರಂದು ಧ್ವಜಾರೋಹಣ ನಡೆಯಲಿದೆ. ಬಳಿಕ ದೇವಳದ ರಾಜಾಂಗಣದಲ್ಲಿ ಜೀರ್ಣೋದ್ದಾರ ಕಚೇರಿಯನ್ನು ಶಾಸಕರು ಉದ್ಘಾಟಿಸಲಿದ್ದಾರೆ.ಉದ್ಘಾಟನೆಯ ಸಂದರ್ಭ ಸೀಮೆಯ ಪ್ರತಿಯೋರ್ವ ಭಕ್ತರಿಂದ ಕನಿಷ್ಠ ದೇಣಿಗೆಯಾದರೂ ಸಮರ್ಪಣೆಯಾಗಬೇಕು. ಜಾತ್ರೆ ಮುಗಿಯುವ ಸಂದರ್ಭ ಜೀರ್ಣೋದ್ದಾರ ಕಚೇರಿಯಲ್ಲಿ ದೇವರ ಪೂರ್ಣ ಆಶೀರ್ವಾದ ಸಿಗುವಂತಾಗಲಿ. ಇದೇ ಕಚೇರಿಯಲ್ಲಿ ಜಾತ್ರೆಗೆ ಸಂಬಂಧಿಸಿ ಹೊರೆಕಾಣಿಕೆಯನ್ನೂ ಸ್ವೀಕರಿಸಲಾಗುವುದು

ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

ಪ್ರತಿ ದಿನ ಸಂಜೆ ಗಂಟೆ 5ಕ್ಕೆ ಶ್ರೀ ದೇವರ ಬಲಿ ಹೊರಡಲಿದ್ದು, ಕಟ್ಟೆಯಲ್ಲಿ ಕಟ್ಟೆಪೂಜೆ ಮಾಡಿಸಿದ ಸೇವಾದಾರರಿಗೆ ಪ್ರಸಾದ ವಿತರಣೆ ನಡೆಯಲಿದೆ.ದೇವಳದಲ್ಲಿ ಕಟ್ಟೆಪೂಜೆ ಮಾಡಿಸಲಿಚ್ಚುವವರು ಏ.17ರ ಒಳಗೆ ಸೇವಾ ರಶೀದಿ ಮಾಡಬೇಕು.ಅನ್ನದಾನಕ್ಕೆ ಹಸಿರು ಹೊರೆಕಾಣಿಕೆಗಳನ್ನು ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸಲಾಗುವುದು.ಏ.17ರಂದು ಬ್ರಹ್ಮರಥೋತ್ಸವ ಸೇವೆ, ಏ.16ಕ್ಕೆ ಸಣ್ಣರಥೋತ್ಸವ ಸೇವೆ, ವಿಶೇಷ ಪಾಲಕಿ ಸೇವೆ, ಗರ್ಭಗುಡಿಯ ಪುಷ್ಪಾಲಂಕಾರ ಸೇವೆ, ಗುಡಿಗಳ ಪುಷ್ಪಾಲಂಕಾರ ಸೇವೆಗಳಿಗೆ ಅವಕಾಶವಿದೆ.ಮೇ 14ಕ್ಕೆ ಪುನರ್ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ನಡೆಯಲಿದೆ

ಈಶ್ವರ ಭಟ್‌ ಪಂಜಿಗುಡ್ಡೆ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

ಧ್ವಜಾರೋಹಣ ಸಂದರ್ಭ ಅಡ್ಡಿ ಪಡಿಸಲು ಪ್ರಯತ್ನಿಸಿದರೆ ಕಾನೂನು ಕ್ರಮ-ಇಒ ಎಚ್ಚರಿಕೆ

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಏ.10ರಂದು ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸಲು ಯಾರಾದರೂ ಪ್ರಯತ್ನಿಸಿದರೆ ಅಂಥವರ ವಿರುದ್ಧ ಕಾನೂನು ಕ್ರಮವಹಿಸಲಾಗುವುದು ಎಂದು ದೇವಳದ ಕಾರ್ಯನಿರ್ವಹಣಾಕಾರಿ ಕೆ.ವಿ.ಶ್ರೀನಿವಾಸ್‌ ತಿಳಿಸಿದ್ದಾರೆ.

News Updates

ಇಂದು ರಾತ್ರಿ ಇಡೀ ನಾಗರಿಕತೆಯ ಸರ್ವನಾಶವಾಗಲಿದೆ : ಇರಾನ್ ಮೇಲೆ ಪ್ರಬಲ ದಾಳಿಯ ಎಚ್ಚರಿಕೆ ನೀಡಿದ ಟ್ರಂಪ್ : 48 ಗಂಟೆ ವಿದ್ಯುತ್ ಸಂಪರ್ಕ ಉಪಯೋಗಿಸದೆ ಮನೆಯೊಳಗಿರುವಂತೆ ಭಾರತೀಯರಿಗೆ ಎಚ್ಚರಿಸಿ ಸಹಾಯವಾಣಿ ತೆರೆದ ಕೇಂದ್ರ ಸರ್ಕಾರ..!

[t4b-ticker]
error: Content is protected !!