ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನಮಿಲಿಟರಿ ಸಂಘರ್ಷ ಕುತೂಹಲಕಾರಿ ಘಟಕ್ಕೆ ತಲುಪಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಸಂಸತ್ತಿನ (ಕಾಂಗ್ರೆಸ್) ಪೂರ್ವಾನುಮತಿ ಇಲ್ಲದೆ ಆರಂಭಿಸಿದ ಸೇನಾ ಕಾರ್ಯಾಚರಣೆ ವಿಚಾರದಲ್ಲಿ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಇದ್ದ 60 ದಿನಗಳ ಗಡುವು ಶುಕ್ರವಾರ (ಮೇ 1) ಅಂತ್ಯಗೊಳ್ಳಲಿದೆ.1973ರ ‘ಯುದ್ಧ ಅಧಿಕಾರ ನಿರ್ಣಯ’ದ ಪ್ರಕಾರ ಅಧ್ಯಕ್ಷರು ತುರ್ತು ಸಂದರ್ಭದಲ್ಲಿ ‘ಕಾಂಗ್ರೆಸ್’ ಪೂರ್ವಾನುಮತಿಯಿಲ್ಲದೆ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳಬಹುದು. ಆದರೆ, ಅಂತಹ ಕಾರ್ಯಾ ಚರಣೆಯ ಬಗ್ಗೆ 48 ಗಂಟೆಗಳ ಒಳಗಾಗಿ ಕಾಂಗ್ರೆಸ್‌ಗೆ ವರದಿ ಸಲ್ಲಿಸಬೇಕು. ಅಲ್ಲದೆ, ಕಾರ್ಯಾಚರಣೆ ಆರಂಭವಾದ 60 ದಿನಗಳ ಒಳಗಾಗಿ ಕಾಂಗ್ರೆಸ್ ನಿಂದ ಅಧಿಕೃತ ಅನುಮೋದನೆ ಪಡೆಯಬೇಕು. ಒಂದು ವೇಳೆ ಕಾಂಗ್ರೆಸ್ ಅನುಮೋದನೆ ನೀಡದಿದ್ದರೆ, ಅಧ್ಯಕ್ಷರು ಅಮೆರಿಕದ ಪಡೆಗಳನ್ನು ವಾಪಸ್ ಕರೆಸಿಕೊಳ್ಳಬೇಕಾಗುತ್ತದೆ. ಅಲ್ಲದೆ, 60 ದಿನಗಳ ಬಳಿಕ ಕಾರ್ಯಾಚರಣೆ ವಿಚಾರದಲ್ಲಿ ಅಧ್ಯಕ್ಷರು ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅಧಿಕಾರ ಕಳೆದುಕೊಳ್ಳಲಿದ್ದಾರೆ.
ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಫೆಬ್ರವರಿ 28 ರಂದು ಜಂಟಿಯಾಗಿ ದಾಳಿ ನಡೆಸಿದ್ದವು. ಇರಾನ್‌ನ ಪರಮಾಣು ಸ್ಥಾವರಗಳು, ಮಿಲಿಟರಿ ನೆಲೆಗಳು ಮತ್ತು ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿತ್ತು. ‘ಯುದ್ಧ ಅಧಿಕಾರ ನಿರ್ಣಯ’ದ ಪ್ರಕಾರ, ದಾಳಿ ಆರಂಭಿಸಿದ 48 ಗಂಟೆಯ ಒಳಗಾಗಿ ಮಾ.2ರಂದು ಇರಾನ್ ವಿರುದ್ಧದ ಮಿಲಿಟರಿ ಕ್ರಮದ ಬಗ್ಗೆ ಟ್ರಂಪ್ ಸರಕಾರ ಅಮೆರಿಕ ಕಾಂಗ್ರೆಸ್‌ಗೆ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಅತ್ತ ಯುದ್ಧವನ್ನು ಅಂತ್ಯಗೊಳಿಸಲಾಗದೆ, ಇತ್ತ ಮುಂದುವರಿಸಲೂ ಸಾಧ್ಯವಾಗದೆ ಆತಂತ್ರಕ್ಕೆ ಸಿಲುಕಿರುವ ಟ್ರಂಪ್ ಮುಂದಿನ ನಡೆ ಕುತೂಹಲ ಮೂಡಿಸಿದೆ. ಪ್ರಸ್ತುತ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಜಾರಿಯಲ್ಲಿದ್ದರೂ, ಇರಾನ್ ವಿರುದ್ಧ ಅಮೆರಿಕ ನೌಕಾ ದಿಗ್ವಂಧನ ಮುಂದುವರಿದಿದೆ. ಜತೆಗೆ,
ಅಮೆರಿಕ ಪಡೆಗಳು ಕೊಲ್ಲಿ ದೇಶಗಳ ವಾಯುನೆಲೆಗಳಲ್ಲೇ ಬೀಡು ಬಿಟ್ಟಿವೆ. ಮತ್ತೊಂದೆಡೆ ಅಮೆರಿಕದ ಷರತ್ತುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಇರಾನ್ ಸಂಧಾನ ಮಾತುಕತೆಗೆ ಬರಲು ನಿರಾಕರಿಸಿದೆ.ಒತ್ತಡದಲ್ಲಿ ಟ್ರಂಪ್: ಪೆಂಟಗಾನ್ ಮೂಲಗಳ ಪ್ರಕಾರ, ಯುದ್ಧದಿಂದಾಗಿ ಅಮೆರಿಕ ಈಗಾಗಲೇ 25 ಶತಕೋಟಿ ಡಾಲರ್ (ಸುಮಾರು 2.3 ಲಕ್ಷ ಕೋಟಿ ರೂ. ವೆಚ್ಚ ಮಾಡಿದೆ. ಜತೆಗೆ ಗಗನಕ್ಕೇರುತ್ತಿರುವ ಕಚ್ಚಾತೈಲ ದರದಿಂದಾಗಿ ಟ್ರಂಪ್ ಆಡಳಿತದ ಮೇಲೆ ಬಿಕ್ಕಟ್ಟು ಅಂತ್ಯಗೊಳಿಸುವ ಒತ್ತಡ ಹೆಚ್ಚಿದೆ.











































