ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು ಪಕ್ಷದ ಅಯ್ಕೆಯಲ್ಲ, ಜನಸಾಮಾನ್ಯರ ಆಯ್ಕೆ. ಕರಾವಳಿಯ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಕೋಟ್ಯಂತರ ರೂ. ಅನುದಾನ ನೀಡಿ, ಧಾರ್ಮಿಕ ಅಸ್ಮಿತೆಯನ್ನು ಎತ್ತಿ ಹಿಡಿದರು. ಕರಾವಳಿ ಭಾಗದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಯಾದಾಗ ಖುದ್ದು ಭೇಟಿ ನೀಡಿ ಧೈರ್ಯ ತುಂಬುವ ಮೂಲಕ ಹಿಂದುತ್ವದ ಹೋರಾಟಕ್ಕೆ ಹೊಸ ಚೈತನ್ಯ ನೀಡಿದರು ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ತಿಳಿಸಿದ್ದಾರೆ.
* ಕರಾವಳಿಯನ್ನು ಬಿಜೆಪಿಯ ಭದ್ರಕೋಟೆ ಮಾಡಿದಕೀರ್ತಿ: ಶಿಕಾರಿಪುರ ಪುರಸಭೆ ಸದಸ್ಯನಾಗಿ ಆರಂಭವಾದ ಬಿ.ಎಸ್.ಯಡಿಯೂರಪ್ಪ ಅವರ ಪಯಣ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ಇತಿಹಾಸ ಬರೆಯಿತು. ರೈತ ಚೈತನ್ಯ ಹಾಗೂ ಹಿಂದೂ ಹೃದಯ ಸಾಮ್ರಾಟ್ ಎಂದೇ ಕರೆಯಲ್ಪಡುವ ಯಡಿಯೂರಪ್ಪನವರ 50 ವರ್ಷಗಳ ರಾಜಕೀಯ ಸಾಧನೆ ಅಧಿಕಾರಕ್ಕಾಗಿ ಮಾಡಿದ ಹೋರಾಟವಲ್ಲ, ಅದು ಒಂದು ಸಿದ್ಧಾಂತದ ನೆಲೆಗಟ್ಟಿನ ಮೇಲೆ ಕಟ್ಟಿದ ಸಾಮ್ರಾಜ್ಯ. ಈ ಹಿಂದೆ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪ್ರಾಬಲ್ಯವಿದ್ದಾಗ ಇಲ್ಲಿನ ಧಾರ್ಮಿಕ ನಂಬಿಕೆಗೆ ಪ್ರಾಧಾನ್ಯ ನೀಡುತ್ತಿರಲಿಲ್ಲ. ಇದರಿಂದ ಹಿಂದೂಗಳಿಗೆ ತಮ್ಮ ಧಾರ್ಮಿಕ ಹಕ್ಕು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಬಿಎಸ್ ವೈ ಅವರಿಂದ ಪಕ್ಷ ಸಂಘಟನೆ ಆರಂಭವಾದ ಬಳಿಕ ಕರಾವಳಿ ಭಾಗದಲ್ಲಿ ಬಿಜೆಪಿ ಒಲವು ಹಾಗೂ ಹಿಂದೂ ಜಾಗೃತಿ ಹೆಚ್ಚಾಯಿತು. ಕರಾವಳಿ ಯನ್ನು ಭದ್ರಕೋಟಿ’ಯಾಗಿ ಪರಿವರ್ತಿಸುವಲ್ಲಿ ಅವರ ಪಾತ್ರ ಅನನ್ಯ.
* ಶೂನ್ಯದಿಂದ ಯಡಿಯೂರಪ್ಪನವರ ಶಿಖರಕ್ಕೆ: ರಾಜಕೀಯ ಜೀವನ ಸಂಘರ್ಷದ ಹಾದಿ, 1970ರ ದಶಕದಲ್ಲಿ ಆರೆಸ್ಸೆಸ್ ಸ್ವಯಂಸೇವಕರಾಗಿ ಸಾರ್ವಜನಿಕ ಜೀವನ ಪ್ರವೇಶಿಸಿದ ಅವರು, ತುರ್ತು ಪರಿಸ್ಥಿತಿ ಸಮಯದಲ್ಲಿ ಜೈಲುವಾಸ ಅನುಭವಿಸಿದರು. ಶಿಕಾರಿಪುರದಲ್ಲಿ ಜನಸಂಘದ ಬಲವರ್ಧನೆಗೆ ಶ್ರಮಿಸಿ, ಪುರಸಭೆ ಅಧ್ಯಕ್ಷರಾದರು. 1983 ಮಹತ್ವದ ವರ್ಷ. ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ ಅವರು, ಅಂದಿನಿಂದ ರಾಜ್ಯದಲ್ಲಿ ಬಿಜೆಪಿಯ ಗಟ್ಟಿ ಧ್ವನಿಯಾದರು.* ಅಯೋಧ್ಯೆಯಲ್ಲಿ ಕರ್ನಾಟಕ ಭವನ: ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಹೋರಾಟದಲ್ಲಿ ಯಡಿಯೂರಪ್ಪ ಅವರ ಪಾತ್ರ ದೊಡ್ಡದು. ಮುಖ್ಯಮಂತ್ರಿಯಾದ ನಂತರ ಅಯೋಧ್ಯೆಯಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಜಾಗ ಪಡೆದು ಅನುದಾನವನ್ನೂ ಬಿಡುಗಡೆ ಮಾಡಿದರು.
* ಗೋಹತ್ಯೆ ನಿಷೇಧ- ಹಿಂದುತ್ವದ ಬದ್ಧತೆಗೆ ಸಿಕ್ಕ ಜಯ:ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಾಡಲು ಕರಾವಳಿ ಭಾಗದಿಂದ ಅತಿ ಹೆಚ್ಚಿನ ಕೂಗು ಕೇಳಿ ಬಂದಿತ್ತು. ದ.ಕ. ಜಿಲ್ಲೆಯ ಬಹುತೇಕ ಹಿಂದೂ ಮನೆಯ ಆಧಾರವೇ ಗೋಶಕ್ತಿಯಾಗಿತ್ತು. ಬಹುತೇಕ ಹಿಂದೂಗಳ ಮನೆಯಲ್ಲಿದ್ದ ಗೋವುಗಳನ್ನು ಅನ್ಯಧರ್ಮದವರೇ ಕಳ್ಳತನ ಮಾಡಿ ಮಾಂಸಕ್ಕಾಗಿ ಹತ್ಯೆ ಮಾಡುವ ಪ್ರಕರಣ ಹೆಚ್ಚಾಗಿತ್ತು. ಕರ್ನಾಟಕದಲ್ಲಿ ‘ಗೋಹತ್ಯೆ ನಿಷೇಧ ಕಾಯ್ದೆ’ಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ದಶಕಗಳ ಕಾಲ ಹೋರಾಡಿದರು. 2020ರಲ್ಲಿ ಅವರ ಅಧಿಕಾರ ಅವಧಿಯಲ್ಲಿ ಈ ಕಾಯ್ದೆ ಕಾನೂನು ರೂಪ ಪಡೆಯಿತು. ಇದು
ಅವರ ಹಿಂದುತ್ವದ ಬದ್ಧತೆಗೆ ಸಿಕ್ಕ ದೊಡ್ಡ ಜಯ.
* ಕೃಷಿ ಬಜೆಟ್ ಮಂಡಿಸಿದ ಕೀರ್ತಿ: ಯಡಿಯೂರಪ್ಪನವರು ತಮ್ಮನ್ನು ತಾವು ‘ರೈತ ನಾಯಕ’ ಎಂದು ಗುರುತಿಸಿಕೊಳ್ಳಲು ಹೆಮ್ಮೆ ಪಡುತ್ತಾರೆ. ಅಧಿಕಾರಕ್ಕೆ ಬಂದ ತಕ್ಷಣ ರೈತರ ಸಹಕಾರಿ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡುವ ಮೂಲಕ ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸಿದರು. ದೇಶದಲ್ಲೇ ಮೊದಲ ಬಾರಿಗೆ ಕೃಷಿಗಾಗಿಯೇ ಪ್ರತ್ಯೇಕ ಬಜೆಟ್ ಮಂಡಿಸಿದ ಕೀರ್ತಿ ಅವರದ್ದು. ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ತಂದ ಯೋಜನೆ ಭಾಗ್ಯಲಕ್ಷ್ಮಿ ಇಂದಿಗೂ ಮನೆಮಾತಾಗಿದೆ.
* ಅಪ್ರತಿಮ ಸಂಘಟಕ, ಜನಪ್ರಿಯ ನಾಯಕ: ಯಡಿಯೂರಪ್ಪನವರ ದೊಡ್ಡ ಸಾಧನೆಯೆಂದರೆ ಅದು ಅವರ ಜನಸಾಮಾನ್ಯರೊಂದಿಗಿನ ಸಂಪರ್ಕ. ಅವರು ಸೋತಾಗ ಧೃತಿಗೆಡಲಿಲ್ಲ, ಗೆದ್ದಾಗ ಬೀಗಲಿಲ್ಲ. ಪ್ರತಿಪಕ್ಷ ನಾಯಕರಾಗಿ ಸದನದ ಒಳಗೆ ಮತ್ತು ಹೊರಗೆ ಅವರು ನಡೆಸಿದ ಹೋರಾಟಗಳು ರಾಜ್ಯ ರಾಜಕಾರಣದ ಪಠ್ಯಪುಸ್ತಕಗಳಂತಿವೆ ಎಂದರೆ ಅತಿಶಯೋಕ್ತಿಯಲ್ಲ. ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದರೂ, ಎಲ್ಲ ಸಮುದಾಯಗಳ ಮಠ-ಮಾನ್ಯಗಳಿಗೆ ಅನುದಾನ ನೀಡಿ ‘ಸರ್ವರಿಗೂ ಸಮಪಾಲು’ ಎಂಬ ತತ್ವ ಪಾಲಿಸಿದರು.
ಕರಾವಳಿಯ ನೆಚ್ಚಿನ ನಾಯಕ: ಕರಾವಳಿ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ನಂತರ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಾಯಕನೆಂದರೆ ಅದು ಬಿ.ಎಸ್.ಯಡಿಯೂರಪ್ಪ ಮಾತ್ರ. ಅವರ ಸಂಘಟನಾ ಶಕ್ತಿ, ಹಿಂದುತ್ವದ ಮೇಲಿನ ಬದ್ಧತೆ ಮತ್ತು ಕರಾವಳಿಯ ಆಚರಣೆಗಳ ಬಗೆಗಿನ ಗೌರವ ಇಂದಿಗೂ ಅವರನ್ನು ಕರಾವಳಿಯ ಪ್ರತಿ ಮನೆಯ ‘ಹಿರಿಯಣ್ಣ’ನ ಸ್ಥಾನದಲ್ಲಿ ಕೂರಿಸಿದೆ.
*ಸಭ್ಯತೆಯ ರಾಜಕಾರಣ: 50 ವರ್ಷಗಳ ರಾಜಕೀಯ ಹಾದಿಯಲ್ಲಿ ಎಂದಿಗೂ ಪ್ರತಿಪಕ್ಷದ ನಾಯಕರ ವಿರುದ್ಧ ಕೀಳುಮಟ್ಟದ ಪದಬಳಕೆ ಮಾಡಿಲ್ಲ. ಸದನದ ಸೌಹಾರ್ದ ಕಾಪಾಡುವಲ್ಲಿ ಬಿಎಸ್‌ವೈ ಅವರದ್ದು ದೊಡ್ಡ ಗುಣ. ಯಡಿಯೂರಪ್ಪ ಅವರ ರಾಜಕೀಯ ಜೀವನದ ಅಡಿಪಾಯವೇ ಆರೆಸ್ಸೆಸ್, ತುರ್ತು ಪರಿಸ್ಥಿತಿ ಸಂದರ್ಭವಿ.ಎಸ್.ಅಚಾರ್ಯ ಅಂತಹವರ ಜತೆ ಬಳ್ಳಾರಿ, ಶಿವಮೊಗ್ಗದ ಜೈಲಿನಲ್ಲಿ ಕಠಿಣ ಕಾರಾಗೃಹ ವಾಸ ಅನುಭವಿಸಿದರು. ಈ ಸಂಘರ್ಷದ ದಿನಗಳೇ ಅವರನ್ನು ಒಬ್ಬ ಗಟ್ಟಿಯಾದ ಜನನಾಯಕನನ್ನಾಗಿ ರೂಪಿಸಿತು.
ಎಂದು ಸಂದರ್ಶನದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟ ಯಡಿಯೂರಪ್ಪ ರವರ ಬಗೆಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.










































