ಮಂಗಳೂರು: ರಾಜ್ಯದಲ್ಲಿ ಲಕ್ಷಾಂತರ ಬಡವರು ಬಿಪಿಎಲ್ ಪಡಿತರ ಚೀಟಿಗಾಗಿ ಕಾಯುತ್ತಿದ್ದರೂ, ರಾಜ್ಯ ಸರಕಾರ ಮಾತ್ರ ಕಳೆದ 3 ವರ್ಷಗಳಿಂದ ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನೇ ಕರೆದಿಲ್ಲ. ಇದರಿಂದ ಅರ್ಹ ಬಡವರು ಬಿಪಿಎಲ್ ಸೌಲಭ್ಯ ವಂಚಿತರಾಗಿದ್ದಾರೆ.
ರಾಜ್ಯ ಸರಕಾರದ ಆಹಾರ , ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಸ್ತುತ ವೈದ್ಯಕೀಯ ತುರ್ತು ಪರಿಸ್ಥಿತಿ ಹಿನ್ನೆಲೆಯವರಿಗೆ, ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ, ಬುಡಕಟ್ಟು ಜನಾಂಗದವರಿಗೆ ಆದ್ಯತಾ ಪಡಿತರ ಚೀಟಿ ನೀಡುತ್ತಿದೆ. ಇದರ ಹೊರತಾಗಿ ಲಕ್ಷಾಂತರ ಮಂದಿ ಬಿಪಿಎಲ್ ಪಡಿತರ ನಿರೀಕ್ಷೆಯಲ್ಲಿದ್ದಾರೆ.
ರಾಜ್ಯದಲ್ಲಿ ಅಂತ್ಯೋದಯ ಅನ್ನ ಪಡಿತರ ಚೀಟಿ (ಎಎವೈ)ಗಳು 10,47,080 ಇದ್ದು, 42,76,526 ಫಲಾನುಭವಿಗಳಿದ್ದಾರೆ. ಆದ್ಯತಾ ಪಡಿತರ ಚೀಟಿಗಳು(ಬಿಪಿಎಲ್) 1,14,38,886 ಇದ್ದು, 4,00,46,744 ಫಲಾನುಭವಿಗಳಿದ್ದಾರೆ. ಆದ್ಯತೇತರ ಪಡಿತರ ಚೀಟಿಗಳು 29,71,601 ಇದ್ದು, 1,02,18,470 ಫಲಾನುಭವಿಗಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ 1,54,57,567 ಪಡಿತರ ಚೀಟಿಗಳಿದ್ದು, 5,45,41,740 ಫಲಾನುಭವಿಗಳಿದ್ದಾರೆ.
2025ರ ಅಂತ್ಯಕ್ಕೆ ರಾಜ್ಯದಲ್ಲಿಆದ್ಯತಾ ಪಡಿತರ ಕಾರ್ಡ್‌ಗಾಗಿ 3,36,982 ಮಂದಿ ಸಲ್ಲಿಸಿದ ಅರ್ಜಿಗಳ ಸ್ಥಳ ತನಿಖೆ ಕಾರ್ಯ ನಡೆಸಿ ಅರ್ಹರಿರುವ ಅರ್ಜಿದಾರರಿಗೆ ನಿಯಮಾನುಸಾರ ಆದ್ಯತಾ ಪಡಿತರ ಚೀಟಿ ವಿತರಣೆಗೆ ಕ್ರಮ ವಹಿಸಲಾಗಿದೆ.
7.76 ಲಕ್ಷ ಶಂಕಾಸ್ಪದ ಫಲಾನುಭವಿಗಳ ಗುರುತು
ಕೇಂದ್ರ ಸರಕಾರವು ರಾಜ್ಯದಲ್ಲಿ 7.76 ಲಕ್ಷ ಶಂಕಾಸ್ಪದ ಪಡಿತರ ಫಲಾನುಭವಿಗಳನ್ನು ಗುರುತಿಸಿದೆ. ಇವುಗಳಲ್ಲಿ ವಾರ್ಷಿಕ ಆದಾಯ 1.20 ಲಕ್ಷ ರೂ.ಗೂ ಹೆಚ್ಚಿರುವ ಕುಟುಂಬ, 25 ಲಕ್ಷಕ್ಕೂ ಅಧಿಕ ಜಿಎಸ್‌ಟಿ ವ್ಯವಹಾರ ನಡೆಸಿದ ಕುಟುಂಬ, ನಿಯಮ ಮೀರಿ ದುಬಾರಿ ವಾಹನಗಳ ನೋಂದಣಿ, 7.5 ಎಕರೆಗೂ ಹೆಚ್ಚು ಭೂಮಿ ಹೊಂದಿರುವವರು ಸೇರಿದ್ದಾರೆ.
747 ಪ್ರಕರಣ ದಾಖಲು
ಪಡಿತರ ಅಕ್ಕಿಯ ದುರ್ಬಳಕೆ ತಡೆಗಟ್ಟಲು ಇಲಾಖೆ ಅಗತ್ಯ ವಸ್ತುಗಳ ಕಾಯಿದೆ 1955ರ ಪ್ರಕಾರ 747 ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. 2025-26ನೇ ಸಾಲಿನ ಜನವರಿ ವರೆಗೆ 25,61,894 ಮೌಲ್ಯದ 45,339.39 ಕ್ವಿಂಟಾಲ್ ಆಹಾರ ಧಾನ್ಯ, 6061 ಲೀ. ಎಲ್‌ಪಿಜಿ, ಪೆಟ್ರೋಲ್, ಡೀಸೆಲ್ ಮತ್ತು 419 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿ ಪಡೆಯಲು ಸರಕಾರ ಅರ್ಜಿ ಆಹ್ವಾನಿಸಿರುವ ಬಗ್ಗೆ ಅಧಿವೇಶನದಲ್ಲಿ ಪ್ರಶ್ನೆ ಕೇಳಿದಾಗ ಯಾವುದೇ ಅರ್ಜಿ ಆಹ್ವಾನಿಸಿಲ್ಲ ಎಂದು ಉತ್ತರ ನೀಡಲಾಗಿದೆ. ಲಕ್ಷಾಂತರ ಮಂದಿ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದು, ಅರ್ಹ ಬಡವರಿಗೆ ಪಡಿತರ ಸಿಗುವಂತಾಗಬೇಕು ಎಂಬುದು ನಮ್ಮ ಅಹವಾಲು.
–ಐವನ್ ಡಿಸೋಜ, ವಿಧಾನ ಪರಿಷತ್ ಸದಸ್ಯ










































