ಹೈದರಾಬಾದ್: ಭಾನುವಾರ (ಮೇ 10) ತೆಲಂಗಾಣದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ( PM Modi ), ದೇಶದ ಜನತೆಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಮಧ್ಯಪ್ರಾಚ್ಯದ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ತೈಲ ಬಿಕ್ಕಟ್ಟು ಉಂಟಾಗಿದ್ದು, ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಣನೀಯವಾಗಿ ಏರಿಕೆಯಾಗುವ ಭೀತಿ ಎದುರಾಗಿದೆ ಎಂದು ತಿಳಿಸಿದರು. ಈ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಹಾಗೂ ದೇಶದ ವಿದೇಶಿ ವಿನಿಮಯವನ್ನು ತಡೆಯಲು, ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕೆಂದು ಪ್ರಧಾನಿ ಮೋದಿ ಜನತೆಯಲ್ಲಿ ಮನವಿ ಮಾಡಿದರು.
ಇಂಧನ ಉಳಿತಾಯ ಮತ್ತು ವಿದೇಶಿ ವಿನಿಮಯದ ರಕ್ಷಣೆಗೆ ಒತ್ತು ನೀಡಿದ ಪ್ರಧಾನಿ ಮೋದಿಯವರು, ದೇಶದ ಜನತೆಗೆ ಮಹತ್ವದ ಕರೆ ನೀಡಿದ್ದಾರೆ. ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ಮಾಡುವುದು (Work from home), ಆನ್‌ಲೈನ್ ಸಭೆಗಳನ್ನು ನಡೆಸುವುದು, ಎಲೆಕ್ಟ್ರಿಕ್ ವಾಹನಗಳ ಬಳಕೆ, ಕಾರುಗಳ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಮೆಟ್ರೋದಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಬಳಸುವಂತೆ ಅವರು ಸಲಹೆ ನೀಡಿದರು. ಕೊರೊನಾ ಅವಧಿಯಲ್ಲಿ ನಾವು ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿಗೆ ಈಗಾಗಲೇ ಒಗ್ಗಿಕೊಂಡಿದ್ದೇವೆ ಎಂಬುದನ್ನು ನೆನಪಿಸಿದ ಅವರು, ದೇಶದ ಹಿತದೃಷ್ಟಿಯಿಂದ ಒಂದು ವರ್ಷದವರೆಗೆ ವಿದೇಶಿ ಪ್ರವಾಸಗಳು, ವಿದೇಶಗಳಲ್ಲಿ ನಡೆಯುವ ಡೆಸ್ಟಿನೇಶನ್ ವೆಡ್ಡಿಂಗ್‌ಗಳು ಮತ್ತು ಚಿನ್ನದ ಖರೀದಿಯನ್ನು ಕಡಿಮೆ ಮಾಡುವಂತೆ ಜನರಲ್ಲಿ ಮನವಿ ಮಾಡಿದರು.ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದ ಪ್ರಧಾನಿಯವರು, ಈ ಗೊಬ್ಬರಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ನೆನಪಿಸಿದರು. ಇದರೊಂದಿಗೆ, ಮಧ್ಯಮ ವರ್ಗದ ಜನರು ತಮ್ಮ ಐಷಾರಾಮಿ ವೆಚ್ಚಗಳನ್ನು ತಗ್ಗಿಸಬೇಕು ಎಂದು ಸಲಹೆ ನೀಡಿದ ಅವರು, ಇದೇ ವೇಳೆ ಅಡುಗೆ ಎಣ್ಣೆಯ ಬಳಕೆಯನ್ನು ಸಹ ಮಿತಿಗೊಳಿಸುವಂತೆ ಜನತೆಗೆ ಕರೆ ನೀಡಿದರು.
ಮೋದಿ ಮಾತಿನ ಅರ್ಥವೇನು?ಯೂಕ್ರೇನ್ ಮತ್ತು ಇರಾನ್ನಲ್ಲಿ ನಡೆಯುತ್ತಿರುವ ಯುದ್ಧಗಳಿಂದಾಗಿ ಜಾಗತಿಕ ಪೂರೈಕೆ ಸರಪಳಿಯಲ್ಲಿ ಏರುಪೇರಾಗಿದ್ದು, ಇರಾನ್ ಯುದ್ಧದ ಪರಿಣಾಮಗಳು ನೇರವಾಗಿ ಭಾರತದ ಮೇಲೆ ಗೋಚರಿಸುತ್ತಿವೆ. ಹಾರ್ಮುಜ್ ಜಲಸಂಧಿಯ ದಿಗ್ಬಂಧನದಿಂದಾಗಿ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರುತ್ತಿದ್ದು, ಪ್ರತಿ ಬ್ಯಾರೆಲ್ ತೈಲದ ಬೆಲೆ ಸುಮಾರು $70 ರಿಂದ $126 ರವರೆಗೆ ತಲುಪಿದೆ. ಈ ಕಾರಣದಿಂದಾಗಿ ಪ್ರಧಾನಮಂತ್ರಿಯವರು ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಲು ಸೂಚಿಸಿದ್ದು, ವಿದೇಶಗಳಿಂದ ಆಮದು ಮಾಡಿಕೊಳ್ಳುವ ತೈಲ, ಚಿನ್ನ ಮತ್ತು ರಾಸಾಯನಿಕ ಗೊಬ್ಬರಗಳನ್ನು ಮಿತವಾಗಿ ಬಳಸುವಂತೆ ಸಲಹೆ ನೀಡಿದ್ದಾರೆ. ಈ ಮುನ್ನೆಚ್ಚರಿಕೆ ಕ್ರಮಗಳಿಂದ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಉಳಿಸಲು ಸಾಧ್ಯವಾಗುತ್ತದೆ ಎಂಬುದು ಅವರ ಆಶಯವಾಗಿದೆ.













































