ನವದೆಹಲಿ: ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ(ನರೇಗಾ) ಬದಲಿಗೆ ಕೇಂದ್ರ ಸರ್ಕಾರವು ರೂಪಿಸಿರುವ ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ ಜಿರಾಮ್‌ಜಿ) ಕಾಯ್ದೆಯು ಜುಲೈ 1 ರಿಂದ ಅನುಷ್ಠಾನಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ಈ ಕುರಿತು ಗ್ರಾಮೀಣಾಭಿವೃದ್ಧಿ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಜುಲೈ 1 ರಿಂದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಕಾಯ್ದೆ ಜಾರಿಯಾಗಲಿದೆ ಎಂದು ತಿಳಿಸಿದೆ.ಇನ್ನು ಹಳೆಯ ಕಾಯ್ದೆಯ ಬಗ್ಗೆಯೂ ಪ್ರಕಟಣೆ ಹೊರಡಿಸಿದ್ದು, ‘ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಗ್ಯಾರಂಟಿ ಕಾಯ್ದೆ -2005 (ನರೇಗಾ) ರದ್ದಾಗಲಿದ್ದು, ಅದರ ಬದಲು ವಿಬಿ ಜಿರಾಮ್‌ಜಿ ಇರಲಿದೆ ಎಂದು ಸ್ಪಷ್ಟಪಡಿಸಿದೆ.
ಜೂನ್ 30 ರಿಂದ ನರೇಗಾ ಅಡಿಯಲ್ಲಿ ನಡೆಯುತ್ತಿರುವ ಕೆಲಸಗಳನ್ನು ಬಾಕಿ ಉಳಿಸಿ ಹೊಸ ಚೌಕಟ್ಟಿಗೆ ವರ್ಗಾಯಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದ್ದು, ಅಸ್ತಿತ್ವದಲ್ಲಿರುವ ಇ-ಕೆವೈಸಿಯಾದ ನರೇಗಾ ಉದ್ಯೋಗ ಕಾರ್ಡ್‌ಗಳು ಹೊಸ ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್‌ಗಳನ್ನು ನೀಡುವವರೆಗೆ ಮಾನ್ಯವಾಗಿರುತ್ತವೆ ಎಂದೂ ಮಾಹಿತಿ ನೀಡಲಾಗಿದೆ.
ಇ-ಕೆವೈಸಿ ಬಾಕಿ ಇರುವ ಕಾರ್ಮಿಕರಿಗೆ ಉದ್ಯೋಗಕ್ಕೆ ಯಾವುದೇ ತೊಂದರೆಯಾಗದು, ಜತೆಗೆ ಜಾಬ್ ಕಾರ್ಡ್ ಇಲ್ಲದವರ ನೋಂದಣಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮುಂದುವರಿಯುತ್ತದೆ ಎಂದೂ ತಿಳಿಸಿದೆ.
ವೇತನ ಪಾವತಿ, ಕುಂದುಕೊರತೆ ಪರಿಹಾರ, ಹಂಚಿಕೆ ಮಾನದಂಡಗಳು ಮತ್ತು ಇತರ ನಿಬಂಧನೆಗಳಿಗೆ ಸಂಬಂಧಿಸಿದ ಕರಡು ನಿಯಮಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮಾಲೋಚಿಸಿ ಸಿದ್ಧಪಡಿಸಲಾಗುತ್ತಿದೆ, ಶೀಘ್ರದಲ್ಲೇ ಸಾರ್ವಜನಿಕ ಸಮಾಲೋಚನೆಗಾಗಿ ಪ್ರಕಟಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.ಗ್ರಾಮೀಣ ಪ್ರದೇಶದ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿಗಳು ಪ್ರಮುಖ ಆಧಾರಸ್ತಂಭವಿದ್ದಂತೆ. ಹೊಸ ಕಾಯ್ದೆಯು ಹೆಚ್ಚು ಹೆಚ್ಚು ಉದ್ಯೋಗವನ್ನು ಸೃಜಿಸಲಿದೆ. ಜತೆಗೆ ಗ್ರಾಮೀಣ ಪ್ರದೇಶದ ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಸ್ವಾವಲಂಬನೆಯನ್ನು ಹೆಚ್ಚಿಸಲಿದೆ ಎಂದು ಸರ್ಕಾರ ಬಣ್ಣಿಸಿದೆ.












































