ಭಾಗ್ಯರಾಜ್ ಅಂತ್ಯಕ್ರಿಯೆ ವೇಳೆ ಪಾಪರಾಜಿಗಳ ಅಮಾನವೀಯ ನಡವಳಿಕೆ:ನಟಿ ರಾಧಿಕಾ ಆಕ್ರೋಶ

Picture of Savistara

Savistara

Bureau Report

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಹಿರಿಯ ನಟ, ನಿರ್ದೇಶಕ ಹಾಗೂ ಚಿತ್ರಕಥೆಗಾರ ಕೆ. ಭಾಗ್ಯರಾಜ್ (73) ಅವರ ನಿಧನದ ಬೆನ್ನಲ್ಲೇ, ಅಂತ್ಯಕ್ರಿಯೆಯ ಸಂದರ್ಭದಲ್ಲಿ ಪಾಪರಾಜಿಗಳು ನಡೆದುಕೊಂಡ ರೀತಿಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಭಾಗ್ಯರಾಜ್ ಅವರ ಆಪ್ತ ಸ್ನೇಹಿತೆಯೂ ಆಗಿರುವ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಅವರು ಪಾಪರಾಜಿಗಳ ಅಮಾನವೀಯ ನಡವಳಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಜೂನ್ 27ರಂದು ಹೃದಯಾಘಾತದಿಂದ ನಿಧನರಾಗಿದ್ದ ಭಾಗ್ಯರಾಜ್ ಅವರ ಪಾರ್ಥಿವ ಶರೀರವನ್ನು ಜೂನ್ 28ರಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಈ ವೇಳೆ ನಡೆದ ಗದ್ದಲದ ವಿಡಿಯೊಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಭಾಗ್ಯರಾಜ್ ಅವರಿಗೆ ಭಾವುಕ ಶ್ರದ್ಧಾಂಜಲಿ ಸಲ್ಲಿಸಿರುವ ರಾಧಿಕಾ, ‘ಕೊನೆಯ ವಿದಾಯ.. 50 ವರ್ಷಗಳ ಅತ್ಯಂತ ವಿಶೇಷವಾದ ಸ್ನೇಹಕ್ಕೆ ಪೂರ್ಣವಿರಾಮ ಬಿದ್ದಿದೆ. ಅವರು ಶ್ರೇಷ್ಠ ಸೃಷ್ಟಿಕರ್ತ, ಅದ್ಭುತ ಲೇಖಕ ಮತ್ತು ಸಿನಿಮಾದಲ್ಲಿ ವಿಶಿಷ್ಟ ಗಡಿಗಳನ್ನು ಗುರುತಿಸಿದ ಮಹಾನ್ ವ್ಯಕ್ತಿ. ನಾನು ಅವರೊಂದಿಗೆ ನಗು ಮತ್ತು ಅದ್ಭುತ ಕೆಲಸಗಳನ್ನು ಹಂಚಿಕೊಂಡಿದ್ದೇನೆ. ನನ್ನ ಕುಟುಂಬದ ಪರವಾಗಿ ಯಾವಾಗಲೂ ಮೌನವಾಗಿ ಹಾಗೂ ನಿಷ್ಠಾವಂತನಾಗಿ ನಿಂತ ವ್ಯಕ್ತಿ ಅವರು, ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಇದು ಅತ್ಯಂತ ಆಘಾತಕಾರಿ ವಿದಾಯ’ ಎಂದು ಬರೆದುಕೊಂಡಿದ್ದಾರೆ.

ಅಂತ್ಯಕ್ರಿಯೆಯ ಸ್ಥಳದಲ್ಲಿ ನಡೆದ ಗದ್ದಲದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ‘ಎಲ್ಲರೂ ಮೌನವಾಗಿ ದುಃಖಿಸಬೇಕಾದ ಪವಿತ್ರ ಜಾಗವನ್ನು, ಅಂತಿಮ ನಮನ ಸಲ್ಲಿಸಲು ಬಂದವರ ಸಮ್ಮುಖದಲ್ಲೇ ಒಂದು ಸರ್ಕಸ್ ರೀತಿಯಲ್ಲಿ ಪರಿವರ್ತಿಸಲಾಯಿತು. ನಾವು ಯಾವಾಗ ಇಷ್ಟು ಕಲ್ಲೆದೆಯವರಾಗಿ ಬದಲಾದೆವು? ಮೃತರ ಆತ್ಮಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಸರ್ಕಾರ ಮತ್ತು ಚಲನಚಿತ್ರ ರಂಗವು ಒಟ್ಟಾಗಿ ಕುಳಿತು ಅಂತ್ಯಕ್ರಿಯೆಗಳ ಸಂದರ್ಭದಲ್ಲಿ ಮಾಧ್ಯಮಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮವನ್ನು ರೂಪಿಸಬೇಕಾಗಿದೆ’ ಎಂದು ಒತ್ತಾಯಿಸಿದ್ದಾರೆ.’ಅಂತ್ಯಕ್ರಿಯೆಯಲ್ಲಿ ಪಾಪರಾಜಿಗಳು ಮತ್ತು ಇತರರ ದುಃಖವನ್ನು ತಮಾಷೆ ನೋಡುವವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇದು ಅತ್ಯಂತ ದುಃಖಕರ ಸಂಗತಿ. ಸಾವಿನ ಮನೆಯಲ್ಲಿ ಜನರ ಕಣ್ಣೀರನ್ನು ಕ್ಯಾಮೆರಾದಲ್ಲಿ ಜೂಮ್ ಮಾಡಿ ನೋಡುವುದು ಮತ್ತು ಸೆಲ್ಪಿ ಕ್ಲಿಕ್ಕಿಸಿಕೊಳ್ಳುವುದು ವಿಕೃತಿಯ ಪರಮಾವಧಿ. ಇಂತಹ ಜಾಗಗಳಲ್ಲಿ ಮಾಧ್ಯಮಗಳಿಗೆ ನಿರ್ಬಂಧಕಾಜ್ಞೆ ಹೊರಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

[t4b-ticker]
error: Content is protected !!