ಡೆಂಗ್ಯೂ ಹರಡುವ ಸಮಯ; ಮುನ್ನೆಚ್ಚರಿಕೆಯೇ ಮದ್ದು

Picture of Savistara

Savistara

Bureau Report

ಮಂಗಳೂರು: ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಮಳೆ ಬಿಟ್ಟುಬಿಟ್ಟು ಸುರಿಯು ತ್ತಿದ್ದು, ಮುಂಗಾರು ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಇಂತಹ ವಾತಾವರಣವು ಡೆಂಗ್ಯೂ ಹರಡುವ ಈಡಿಸ್‌ ಸೊಳ್ಳೆಗಳ ಲಾರ್ವಾ ಉತ್ಪತ್ತಿಗೆ ಪೂರಕವಾಗಿದ್ದು, ಸಾರ್ವಜನಿಕರು ತೀವ್ರ ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.

ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳೆದ ವರ್ಷ ಡೆಂಗ್ಯೂ ಸಂಪೂರ್ಣ ನಿಯಂತ್ರಣದಲ್ಲಿತ್ತು. ಅದೇ ರೀತಿ ಈ ವರ್ಷವೂ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ಸಜ್ಜಾಗಿದೆ.ಕರಾವಳಿಯಲ್ಲಿ ಕಳೆದ ಕೆಲವು ವಾರಗಳಿಂದ ಆಗಾಗ್ಗೆ ಮಳೆಯಾಗುತ್ತಿದ್ದು, ಐದು ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15 ಡೆಂಗ್ಯೂ ಪ್ರಕರಣ ಗಳು ದಾಖಲಾಗಿವೆ. ಮುಂದಿನ ದಿನಗಳಲ್ಲಿ ಮಳೆ ಚುರುಕಾಗಲಿದ್ದು, ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಆತಂಕವಿದೆ.ಮುಂಗಾರು ಅವಧಿಯಲ್ಲಿ ಡೆಂಗ್ಯೂ ಹಾವಳಿ ಸಾಮಾನ್ಯ. ಇದರ ನಿರ್ಮೂಲನೆಗೆ ಜನರ ಸಹಕಾರ ಅವಶ್ಯ. ಸೊಳ್ಳೆಗಳ ಲಾರ್ವಾ ಉತ್ಪತ್ತಿ ಯಾಗದಂತೆ ತಡೆಯಲು ಪ್ರತಿಯೊಬ್ಬರೂ ತಮ-¾ ಮನೆಯಿಂದಲೇ ಸ್ವಚ್ಛತ ಕಾರ್ಯ ಕೈಗೊಳ್ಳಬೇಕು ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ರೋಗ ಲಕ್ಷಣಗಳೇನು?

ಡೆಂಗ್ಯೂ ಜ್ವರ ಬಾಧಿಸಿದ ತತ್‌ಕ್ಷಣವೇ ಮಕ್ಕಳು ಅಥವಾ ಹಿರಿಯರಲ್ಲಿ ಲಕ್ಷಣಗಳು ತೀವ್ರವಾಗಿ ಕಂಡುಬರುವುದಿಲ್ಲ. ಆದರೆ 4ರಿಂದ 7 ದಿನಗಳ ಬಳಿಕ ಪ್ರಮುಖ ಲಕ್ಷಣಗಳು ಗೋಚರಿಸುತ್ತವೆ. ತೀವ್ರ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು. ಮೈ-ಕೈ ನೋವು ಹಾಗೂ ಕೀಲು ನೋವು. ವಾಕರಿಕೆ, ವಾಂತಿ ಮತ್ತು ತೀವ್ರ ಸುಸ್ತು. ದೇಹದ ಚರ್ಮದ ಮೇಲೆ ಅಲ್ಲಲ್ಲಿ ಕೆಂಪು ಕಲೆಗಳು ಕಾಣಿಸಿಕೊಳ್ಳುತ್ತವೆ.

ಆರಂಭವಾಗಬೇಕಿದೆ ‘ಸೊಳ್ಳೆ ನಿರ್ಮೂಲನ ದಿನ’

ಡೆಂಗ್ಯೂ ನಿಯಂತ್ರಣಕ್ಕಾಗಿ ಜಿಲ್ಲೆಯಾದ್ಯಂತ ಪ್ರತೀ ಶುಕ್ರವಾರ ಲಾರ್ವಾ ಉತ್ಪತ್ತಿ ತಾಣಗಳ ನಾಶದ ಅಭಿಯಾನ ನಡೆಯುತ್ತದೆ. ಮನೆ, ಕಚೇರಿಗಳ ಸುತ್ತಮುತ್ತ ನೀರು ನಿಲ್ಲುವು ದರಿಂದ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ. ಹೀಗಾಗಿ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಹಾಗೂ ಸರಕಾರಿ ಕಚೇರಿ, ಶಾಲಾ-ಕಾಲೇಜುಗಳ ಸಿಬಂದಿ ತಮ್ಮ ಆವರಣದಲ್ಲಿನ ಡ್ರಮ್, ಟ್ಯಾಂಕ್, ಬ್ಯಾರಲ್‌ಗಳನ್ನು ಪ್ರತೀ ಶುಕ್ರವಾರ ಕಡ್ಡಾಯವಾಗಿ ಸ್ವಚ್ಛಗೊ ಳಿಸಬೇಕು. ಈ ಅಭಿಯಾ ನವನ್ನು ಮಳೆಗಾಲದ ಆರಂಭದಿಂದಲೇ ಚುರುಕುಗೊಳಿಸಬೇಕಿದೆ.

ಮಂಗಳೂರಿನಲ್ಲೇ ಡೆಂಗ್ಯೂ ಅಧಿಕ!

ಕಳೆದ ಕೆಲವು ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಜಿಲ್ಲೆಯ ಒಟ್ಟು ಪ್ರಕರಣಗಳ ಪೈಕಿ ಶೇ. 50ರಿಂದ ಶೇ. 60ರಷ್ಟು ಪ್ರಕರಣಗಳು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ ವರದಿಯಾಗುತ್ತಿವೆ. ವಿವಿಧ ಜಿಲ್ಲೆ ಮತ್ತು ರಾಜ್ಯಗಳಿಂದ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಸಾವಿರಾರು ಜನರು ನಗರಕ್ಕೆ ಆಗಮಿಸುತ್ತಾರೆ. ಈ ವಲಸಿಗರಲ್ಲಿ ಕೆಲವರು ಈಗಾಗಲೇ ಜ್ವರದ ಲಕ್ಷಣಗಳನ್ನು ಹೊಂದಿರಬಹುದಾಗಿದ್ದು, ಅವರಿಂದ ನಗರ ಪ್ರದೇಶದಲ್ಲಿ ರೋಗ ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.

ಕೆಲವು ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯು ಡೆಂಗ್ಯೂ ಹರಡಲು ಪೂರಕವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆಯಿಂದ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದ್ದು, ಮನೆ-ಮನೆಗಳಿಗೆ ಭೇಟಿ ನೀಡಿ ಲಾರ್ವಾ ಹಾಗೂ ಜ್ವರದ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ನವೀನ್‌ಚಂದ್ರ ಕುಲಾಲ್ ತಿಳಿಸಿದ್ದಾರೆ.

ಡೆಂಗ್ಯೂ ತಡೆಗೆ ಮುನ್ನೆಚ್ಚರಿಕೆ ಕ್ರಮಗಳು

  1. ಮನೆಯ ಸುತ್ತಮುತ್ತ, ತಾರಸಿ, ಹೂ ಕುಂಡಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ
  2. ನೀರು ಶೇಖರಣಾ ತೊಟ್ಟಿ, ಟ್ಯಾಂಕ್ ಮುಚ್ಚಳ ಭದ್ರವಾಗಿ ಮುಚ್ಚಿ
  3. ಸೊಳ್ಳೆ ಪರದೆಯನ್ನು ಉಪಯೋಗಿಸಿ
  4. ತೊಟ್ಟಿ, ಡ್ರಮ್‌ಗಳಲ್ಲಿ 2 ರಿಂದ 3 ದಿನಗಳಿಗೊಮ್ಮೆ ನೀರು ಬದಲಿಸಿ ಸ್ವಚ್ಛಗೊಳಿಸಿ
  5. ಕೈಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ, ದೇಹವನ್ನು ಪೂರ್ತಿ ಮುಚ್ಚುವ ಬೆಚ್ಚಗಿನ ಉಡುಪುಗಳನ್ನು ಧರಿಸಿ
  6. ಕುಡಿಯಲು ಕುದಿಸಿ ಆರಿಸಿದ ಶುದ್ಧ ನೀರನ್ನು ಉಪಯೋಗಿಸಿ
  7. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಸೇವನೆ ಮಾಡಿ
  8. ಜ್ವರ ಸಹಿತ ರೋಗ ಲಕ್ಷಣ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ
  9. ವೈದ್ಯರ ಸಲಹೆಯಿಲ್ಲದೆ ಯಾವುದೇ ಮಾತ್ರೆ ಸೇವಿಸಬೇಡಿ
[t4b-ticker]
error: Content is protected !!