ಬಾಲಿವುಡ್ ನಟ ದಿವಂಗತ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಈ ಪ್ರಶಸ್ತಿಯನ್ನು ಹೇಮಾ ಮಾಲಿನಿ ದೆಹಲಿಯಲ್ಲಿ ಸ್ವೀಕರಿಸಲಿದ್ದಾರೆ.
2025ರ ನವೆಂಬರ್ 24 ರಂದು ಧರ್ಮೇಂದ್ರ ಅವರು ವಿಧಿವಶರಾದರು. ಇವರ ನಿಧನ ಬಳಿಕ ಸಿನಿಮಾ ಕ್ಷೇತ್ರದಲ್ಲಿನ ಇವರ ಜೀವಮಾನ ಸಾಧನೆಗೆ ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮವಿಭೂಷಣ ಪ್ರಶಸ್ತಿಯನ್ನು 2026ರ ಸಾಲಿನಲ್ಲಿ ಮರಣೋತ್ತರವಾಗಿ ನೀಡಲಾಗಿತ್ತು. ಇಂದು ರಾಷ್ಟ್ರಪತಿ ದೌಪದಿ ಮುರ್ಮು ಅವರು ಹೇಮಾ ಮಾಲಿನಿ ಅವರಿಗೆ ಔಪಚಾರಿಕವಾಗಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಹೇಮಾ ಮಾಲಿನಿ ಅವರು ‘ಈ ಕ್ಷಣ ನಿಜಕ್ಕೂ ಭಾವನಾತ್ಮಕ ಗಳಿಗೆಯಾಗಿದೆ. ಅಹಾನಾ ಡಿಯೋಲ್ ಕೂಡ ನನ್ನೊಂದಿಗೆ ಆಗಮಿಸಿದ್ದಾರೆ. ಇಶಾ ಬರಲು ಸಾಧ್ಯವಾಗಲಿಲ್ಲ. ಸನ್ನಿ ಮತ್ತು ಬಾಬಿ ಎಲ್ಲರಿಗೂ ತುಂಬಾ ಸಂತೋಷದ ಕ್ಷಣವಾಗಿದೆ’ ಎಂದು ಹಿಂದೂಸ್ತಾನ್ ಟೈಮ್ಸ್ ಗೆ ತಿಳಿಸಿದ್ದಾರೆ.2026ರ ಜನವರಿಯಲ್ಲಿ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಘೋಷಣೆಯಾದ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಹೇಮಾ ಮಾಲಿನಿ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ‘ಧರ್ಮೇಂದ್ರ ಅವರಿಗೆ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡುವ ಮೂಲಕ ಅವರು ಚಲನಚಿತ್ರೋದ್ಯಮಕ್ಕೆ ನೀಡಿದ ಅಪಾರ ಕೊಡುಗೆಯನ್ನು ಸರ್ಕಾರ ಗುರುತಿಸಿದೆ. ಇದು ಹೆಮ್ಮೆಯ ವಿಷಯ’ ಎಂದು ಬರೆದುಕೊಂಡಿದ್ದರು.
ಪದ್ಮ ಪ್ರಶಸ್ತಿ ಬಗ್ಗೆ : ಕಲೆ, ಸಾಹಿತ್ಯ, ಸಮಾಜ ಸೇವೆ, ವೈದ್ಯಕೀಯ, ಶಿಕ್ಷಣ ಮತ್ತು ಸಾರ್ವಜನಿಕ ಸೇವೆಯಂತಹ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಭಾರತೀಯ ನಾಗರಿಕರಿಗೆ ಈ ಪ್ರಶಸ್ತಿಯನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ರಾಷ್ಟ್ರಪತಿ ಅವರು ಪ್ರಧಾನ ಮಾಡುತ್ತಾರೆ. ಪದ್ಮ ಪ್ರಶಸ್ತಿಯಲ್ಲಿ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂಬ 3 ಪ್ರಶಸ್ತಿಗಳಿವೆ.













































