ಅರುಣಾಚಲ ಪ್ರದೇಶದಲ್ಲಿ ಮೇಘಸ್ಫೋಟ: ಕೊಚ್ಚಿ ಹೋದ ಹೆದ್ದಾರಿ, 7 ಜಿಲ್ಲೆಗಳ ಸಂಪರ್ಕ ಕಡಿತ

Picture of Savistara

Savistara

Bureau Report

ಇಟಾನಗರ: ಅರುಣಾಚಲ ಪ್ರದೇಶದ ಕೇಯಿ ಪನ್ನೋರ್ ಜಿಲ್ಲೆಯ ಪೂಸಾದಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟ ನಡೆದು ವಾರ ಕಳೆದರೂ, ರಾಜ್ಯದಲ್ಲಿ ಸೃಷ್ಟಿಯಾಗಿರುವ ಪ್ರಕೃತಿ ವಿಕೋಪದ ದೃಶ್ಯಗಳು ಇನ್ನೂ ಕಣ್ಣೆದುರೇ ಇವೆ. ಪ್ರಕೃತಿಯ ವಿಕೋಪಕ್ಕೆ ಪ್ರಮುಖ ರಾಷ್ಟ್ರೀಯ ಹೆದ್ದಾರಿ-13ರ ಹೋಜ್-ಪೋಟೀನ್ ರಸ್ತೆ ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಪರಿಣಾಮವಾಗಿ ಅರುಣಾಚಲ ಪ್ರದೇಶದ ಒಟ್ಟು 7 ಜಿಲ್ಲೆಗಳು ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡು ದ್ವೀಪದಂತಾಗಿವೆ.ಜೂನ್ 24 ರಂದು ನಡೆದ ಈ ದಿಢೀರ್ ಮೇಘಸ್ಫೋಟವು ಭೀಕರ ಭೂಕುಸಿತ ಮತ್ತು ಪ್ರವಾಹವನ್ನು ಸೃಷ್ಟಿಸಿದೆ. ಈ ದುರಂತದಲ್ಲಿ ನೀಪೋ (NEEPCO) ಕಾಲೋನಿಯ 18 ವಸತಿ ಗೃಹಗಳು ನೆಲಸಮಗೊಂಡಿದ್ದು, ಮೂವರು ದುರ್ಮರಣಕ್ಕೀಡಾಗಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ದುರಂತ ಸಂಭವಿಸಿದ ದಿನದಿಂದಲೂ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯು ರಕ್ಷಣಾ ಕಾರ್ಯಕ್ಕೆ ತೀವ್ರ ಅಡ್ಡಿಯುಂಟಾಗಿದೆ.

ಹೆದ್ದಾರಿ ಮರುಸ್ಥಾಪನೆಗೆ ಕನಿಷ್ಠ ಒಂದು ವಾರ ಬೇಕು: ಡಿಸಿ

ಪಪುಮ್‌ ಪಾರೆ ಜಿಲ್ಲೆಯ ಡೆಪ್ಯುಟಿ ಕಮಿಷನರ್ (ಡಿಸಿ) ಲೊಬ್ಬಾಂಗ್ ತೇರಿಂಗ್ ಅವರು ಭಾನುವಾರ ಮಳೆಯ ನಡುವೆಯೇ ಹೋಜ್-ಪೋಟೀನ್ ರಸ್ತೆಯ ದುರಸ್ತಿ ಕಾರ್ಯವನ್ನು ಖುದ್ದಾಗಿ ಪರಿಶೀಲಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮೇಘಸ್ಫೋಟದಿಂದಾಗಿ ಹೆದ್ದಾರಿ ಹಲವು ಕಡೆಗಳಲ್ಲಿ ಹಾನಿಗೊಳಗಾಗಿದೆ. ರಸ್ತೆಯನ್ನು ತಾತ್ಕಾಲಿಕವಾಗಿ ಸಂಚಾರಕ್ಕೆ ಮುಕ್ತಗೊಳಿಸಲು ಕನಿಷ್ಠ ಒಂದು ವಾರಕ್ಕೂ ಹೆಚ್ಚು ಸಮಯ ಬೇಕಾಗಬಹುದು,” ಎಂದು ತಿಳಿಸಿದ್ದಾರೆ.ಸದ್ಯಕ್ಕೆ ಪೋಟೀನ್‌ಗೆ ಸಂಪರ್ಕ ಕಲ್ಪಿಸುವ ‘ಸಗಾಲಿ-ಪರಾಂಗ್’ ರಸ್ತೆ ಮಾತ್ರ ಏಕೈಕ ಪರ್ಯಾಯ ಮಾರ್ಗವಾಗಿದ್ದು, ಈ ಮಾರ್ಗದಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಹೆಚ್ಚುವರಿ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ನಿಯೋಜಿಸಲು ಸಗಾಲಿಯ ಹೆಚ್ಚುವರಿ ಡೆಪ್ಯುಟಿ ಕಮಿಷನರ್‌ಗೆ ಸೂಚನೆ ನೀಡಲಾಗಿದೆ ಎಂದರು.ಈ ಹೆದ್ದಾರಿ ಕೆಯಿ ಪನ್ನೋರ್, ಲೋಯರ್ ಸುಬನ್ಸಿರಿ, ಕುರುಂಗ್ ಕುಮೇ, ಕ್ರಾ ದಾಡಿ, ಕಾಯ್ದೆ, ಅಪ‌ರ್ ಸುಬನ್ಸಿರಿ ಸೇರಿದಂತೆ ಹಲವು ಜಿಲ್ಲೆಗಳ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ರಸ್ತೆ ಬಂದ್ ಆಗಿರುವುದರಿಂದ ಜನರ ಸಂಚಾರ, ಅಗತ್ಯ ವಸ್ತುಗಳ ಸಾಗಣೆ ಹಾಗೂ ದಿನನಿತ್ಯದ ಸರಬರಾಜು ವ್ಯವಸ್ಥೆ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ.

[t4b-ticker]
error: Content is protected !!