ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಬ್ಯಾವರಾ ಪಟ್ಟಣದ 20 ವರ್ಷದ ಸುರೇಂದ್ರ ಸಿಂಗ್ ಚೌಧರಿ ಎಂಬ ಯುವ ಕಲುಷಿತಗೊಂಡಿದ್ದ ಅಜ್ಞಾರ್ ನದಿಯನ್ನು ಸ್ವಚ್ಛಗೊಳಿಸಿ ಸುದ್ದಿಯಲ್ಲಿದ್ದಾರೆ. ಯುವಕನ ಪರಿಸರ ಕಾಳಜಿಗೆ ಆನಂದ್ ಮಹೀಂದ್ರಾ ಸೇರಿ ಡಚ್ ಕಂಪನಿಯ ಸಿಇಒ ವರೆಗೆ ಅನೇಕರು ಶ್ಲಾಷಿಸಿದ್ದಾರೆ.
ಬಿ.ಎಸ್ಸಿ ವಿದ್ಯಾರ್ಥಿಯಾದ ಸುರೇಂದ್ರ ಸಿಂಗ್ ಚೌಧರಿ ಅವರು ಇಂದು ‘ಬಿಟ್ಟು ತಬಾಹಿ’ ಎಂತಲೇ ಖ್ಯಾತಿ ಪಡೆದುಕೊಂಡಿದ್ದಾರೆ.ಯುವಕನ ಪರಿಸರ ಪ್ರೇಮಕ್ಕೆ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರು ಮನಸೋತಿದ್ದಾರೆ. ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಯುವಕನ ಫೋಟೊ ಹಂಚಿಕೊಂಡಿರುವ ಅವರು, ಈ ಯುವಕನಿಗೆ ಅಂತರರಾಷ್ಟ್ರೀಯ ಮನ್ನಣೆ ಸಿಗಬೇಕು ಎಂದಿದ್ದಾರೆ.
‘ಬೆಳಿಗ್ಗೆಯಷ್ಟೇ ಸುರೇಂದ್ರ ಸಿಂಗ್ ಚೌಧರಿಯ ಬಗ್ಗೆ ಓದಿದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅವನ ಕೆಲಸ ನಿಜಕ್ಕೂ ಶ್ಲಾಘನೀಯ. ಈಜಲು ಗೊತ್ತಿಲ್ಲದ ಯುವಕ ಕೈಗವಸು, ಬೂಟುಗಳನ್ನು ಧರಿಸಿ ಕಲುಷಿತಗೊಂಡಿದ್ದ ನದಿಯನ್ನು ಸ್ವಚ್ಛಗೊಳಿಸಿದ್ದಾನೆ. ಇದು ನಿಜಕ್ಕೂ ಅದ್ಭುತ. ಬಿಟ್ಟು, ಜನವರಿ 26ರಂದು ಅಜ್ಞಾರ್ ನದಿಯನ್ನು ಸ್ವಚ್ಛಗೊಳಿಸಲು ಆರಂಭಿಸಿದಾಗ, ಅನೇಕರು ರೀಲ್ಸ್‌ಗಾಗಿ ಎಂದು ಕಾಲೆಳೆದರು. ಆದರೆ, ಇಂದು ಅವನ್ನು ಸಾಧಿಸಿದ್ದಾನೆ’ ಎಂದು ಬರೆದಿದ್ದಾರೆ.
‘ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯದಿಂದ ತುಂಬಿದ್ದ ನದಿಯನ್ನು ಸ್ವಚ್ಛಗೊಳಿಸಿ, ಪೂಜಾ ತ್ಯಾಜ್ಯವನ್ನು ಒಂದು ಕಡೆ ಹಾಕಲು ಬುಟ್ಟಿಗಳನ್ನೂ ಇಟ್ಟಿದ್ದಾನೆ. ಕಸದ ಬುಟ್ಟಿಗಳನ್ನು ಖರೀದಿಸಲು ಆತನ ಬಳಿ ಹಣವಿರಲಿಲ್ಲ. ಆದರೆ, ಸ್ನೇಹಿತರ ಸಹಾಯದಿಂದ ಸುಮಾರು ₹30,000 ಹಣ ಸಂಗ್ರಹಿಸಿ ಬುಟ್ಟಿಗಳನ್ನು ಖರೀದಿಸಿ ಇಟ್ಟಿದ್ದಾನೆ. ನೀರಿನಲ್ಲಿ ಇಳಿದು ತ್ಯಾಜ್ಯವನ್ನು ಸ್ವಚ್ಛಗೊಳಿಸಿದರ ಪರಿಣಾಮ, ಅವನಿಗೆ ಸೋಂಕು ಉಂಟಾಗಿದೆ ಆದರೂ ಕೆಲಸ ಪೂರ್ಣಗೊಳಿಸಿದ್ದಾನೆ’ ಎಂದು ಬರೆದುಕೊಂಡಿದ್ದಾರೆ.
‘ಬಿಟ್ಟು, ಜಲ ಮಾಲಿನ್ಯದ ವಿರುದ್ಧ ಹೋರಾಡಿದ್ದಾನೆ. ಅವನನ್ನು ವೀರ ಎಂದು ಕರೆಯುತ್ತೇನೆ. ಆತನಿಗೆ ಅಂತರರಾಷ್ಟ್ರೀಯ ಮನ್ನಣೆ ಸಿಗಬೇಕು’ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.ಇದೆಲ್ಲದರ ನಡುವೆ ‘ದಿ ಓಷನ್ ಕ್ಲೀನಪ್’ನ ಸ್ಥಾಪಕ ಮತ್ತು ಸಿಇಒ ಬೋಯನ್ ಸ್ಪ್ಯಾಟ್ ಅವರು ಸುರೇಂದ್ರ ಸಿಂಗ್ ಚೌಧರಿ ಅವರಿಗೆ ತಮ್ಮ ಸಂಸ್ಥೆಯಲ್ಲಿ ಕೆಲಸದ ಆಫರ್ ನೀಡಿದ್ದಾರೆ.
















































