ಪುತ್ತೂರು ಗಣೇಶೋತ್ಸವ ಶೋಭಾಯಾತ್ರೆಯಲ್ಲಿ ಅವಧಿ ಮೀರಿ ಧ್ವನಿವರ್ಧಕ ಬಳಸಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಅಜಿತ್ ರೈ ಹೊಸಮನೆ ಹಾಗೂ ಟ್ಯಾಬ್ಲೊ ಆಯೋಜಕರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು…
ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಸೆ. 17ರಂದು ನಡೆದ ಗಣೇಶೋತ್ಸವ ವಿಸರ್ಜನಾ ಶೋಭಾಯಾತ್ರೆಯ ವೇಳೆ, ನಿಗದಿತ ಸಮಯದ ನಂತರವೂ ಧ್ವನಿವರ್ಧಕ ಬಳಸಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜಿತ್ ರೈ ಹೊಸಮನೆ, ಪಂಚಮುಖಿ ಫ್ರೆಂಡ್ಸ್ ಸ್ತಬ್ಧಚಿತ್ರದ ಆಯೋಜಕರು ಹಾಗೂ ಇತರರ ವಿರುದ್ಧ ಪ್ರಕರಣಕ್ಕೆ ದಾಖಲಾಗಿದೆ.
ದೂರಿನಲ್ಲಿ ಏನಿದೆ?
ಪೊಲೀಸ್ ಉಪನಿರೀಕ್ಷಕರ ದೂರಿನ ಪ್ರಕಾರ, ಶೋಭಾಯಾತ್ರೆಯಲ್ಲಿ ಧ್ವನಿವರ್ಧಕ ಬಳಕೆಗೆ ರಾತ್ರಿ 10 ಗಂಟೆಯವರೆಗೆ ಮಾತ್ರ ಷರತ್ತುಬದ್ಧ ಅನುಮತಿ ನೀಡಲಾಗಿತ್ತು. ಮೆರವಣಿಗೆಯಲ್ಲಿದ್ದ ಹಲವು ಸ್ತಬ್ಧಚಿತ್ರಗಳು ನಿಗದಿತ ಸಮಯದ ಬಳಿಕ ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸಿದ್ದವು. ಆದರೆ, ರಾತ್ರಿ ಸುಮಾರು 10.35ರ ವೇಳೆಗೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಜಂಕ್ಷನ್‌ನಲ್ಲಿ ತೆರಳುತ್ತಿದ್ದ ‘ಪಂಚಮುಖಿ ಫ್ರೆಂಡ್ಸ್’ ಹೆಸರಿನ ಸ್ತಬ್ಧಚಿತ್ರದಲ್ಲಿ ಧ್ವನಿವರ್ಧಕ ಬಳಕೆ ಮುಂದುವರಿದಿರುವುದನ್ನು ಗಮನಿಸಿದ ಪೊಲೀಸರು, ಅದನ್ನು ಬಂದ್ ಮಾಡುವಂತೆ ಸೂಚಿಸಿದ್ದರು. ಅದರಂತೆ ಧ್ವನಿವರ್ಧಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಧ್ವನಿವರ್ಧಕ ಬಂದ್ ಮಾಡಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಜಿತ್ ರೈ ಹೊಸಮನೆ ಹಾಗೂ ಇತರರು, ಧ್ವನಿವರ್ಧಕವನ್ನು ಬಂದ್ ಮಾಡಬಾರದೆಂದು ಪಟ್ಟುಹಿಡಿದು, ಪುನಃ ಧ್ವನಿವರ್ಧಕ ಬಳಸುವಂತೆ ಸ್ತಬ್ಧಚಿತ್ರದ ಆಯೋಜಕರಿಗೆ ಸೂಚಿಸಿದ್ದಾರೆ. ಅಂತೆಯೇ ಧ್ವನಿವರ್ಧಕವನ್ನು ಮರುಬಳಕೆ ಮಾಡಲಾಗಿದೆ. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳು ಹಾಗೂ ಷರತ್ತುಗಳ ಕುರಿತು ಮನವರಿಕೆ ಮಾಡಲು ಯತ್ನಿಸಿದರೂ, ಸೂಚನೆಯನ್ನು ಧಿಕ್ಕರಿಸಿ ಧ್ವನಿವರ್ಧಕ ಬಳಕೆಯನ್ನು ಮುಂದುವರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.















































