ಬಗರ್‌ಹುಕುಂ ಸಾಗುವಳಿದಾರರಿಗೆ ನೋಟಿಸ್‌ ನೀಡಬಾರದು: ಸಿಎಂ ಡಿ.ಕೆ. ಶಿವಕುಮಾ‌ರ್

Picture of Savistara

Savistara

Bureau Report

ತೀರ್ಥಹಳ್ಳಿ (ಶಿವಮೊಗ್ಗ): ‘ಬಗರ್‌ಹುಕುಂ ಸಾಗುವಳಿದಾರರು ಸೇರಿದಂತೆ ಸಾಂಪ್ರದಾಯಿಕ ಅರಣ್ಯ ಒತ್ತುವರಿದಾರರಿಗೆ ಯಾವುದೇ ಕಾರಣಕ್ಕೂ ನೋಟಿಸ್‌ ನೀಡಬಾರದು. ಆದರೆ, ಹೊಸದಾಗಿ ಒತ್ತುವರಿಗೆ ಅವಕಾಶ ಆಗದಂತೆ ನಿಗಾ ವಹಿಸಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಕಸ್ತೂರಿ ರಂಗನ್ ವರದಿ ಹಾಗೂ ಮಲೆನಾಡಿನ ಸಮಸ್ಯೆಗಳು’ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಸ್ಥಳೀಯರ ಅಳಲು ಆಲಿಸಿ ಮಾತನಾಡಿದ ಅವರು, 94 ‘ಸಿ’ ಹಾಗೂ ಬಗರ್‌ಹುಕುಂ ಭೂಮಿಯ ಹಕ್ಕುಪತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಶೀಘ್ರದಲ್ಲಿ ಪ್ರತ್ಯೇಕ ಸಂಪುಟ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.ಬಗರ್‌ಹುಕುಂ, ಅಕ್ರಮ-ಸಕ್ರಮ ಕುರಿತಾದ ಅರ್ಜಿಗಳ ವಿಲೇವಾರಿಗೆ ಪ್ರತೀ ತಿಂಗಳು ತಪ್ಪದೇ ಸಭೆ ನಡೆಸಿ ಬಡವರಿಗೆ ನೆರವಾಗಬೇಕು ಎಂದು ಸ್ಥಳೀಯ ಶಾಸಕರಿಗೆ ಕಿವಿಮಾತು ಹೇಳಿದ ಅವರು, ಭೂಮಿ ಮಂಜೂರಾತಿ ವಿಚಾರದಲ್ಲಿ ತೊಡಕುಗಳಿದ್ದರೆ ಆ ಕುರಿತು ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚಿಸಬಹುದು ಎಂದರು.’ಮಲೆನಾಡಿನ ಜನ ದಿನಬೆಳಗಾದರೆ ಅರಣ್ಯ ಇಲಾಖೆಯಿಂದ ಕಿರುಕುಳ ಅನುಭವಿಸುತ್ತಿದ್ದೇವೆ. ಶವಸಂಸ್ಕಾರಕ್ಕೂ ಅಡ್ಡಿಪಡಿಸುತ್ತಾರೆ. ಹೊಸನಗರದಲ್ಲಿ 1931ರ ಸಂದರ್ಭದಲ್ಲಿ ಮೈಸೂರು ಮಹಾರಾಜರು ಮಂಜೂರು ಮಾಡಿದ್ದ ಜಮೀನಿನ ಮೇಲೂ ಒತ್ತುವರಿ ಪ್ರಕರಣ ದಾಖಲಿಸಲಾಗಿದೆ. ಹಂದಿ, ಕಾಡೆಮ್ಮೆ, ಆನೆ ದಾಳಿ, ಮಂಗಗಳ ಹಾವಳಿಯಿಂದ ಕಂಗೆಟ್ಟ ಜನ ಊರುಗಳನ್ನೇ ಖಾಲಿ ಮಾಡಿದ್ದಾರೆ’ ಎಂದು ಶಾಸಕರಾದ ಆರಗ ಜ್ಞಾನೇಂದ್ರ, ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆ‌ರ್.ಎಂ.ಮಂಜುನಾಥ ಗೌಡ ಮುಖ್ಯಮಂತ್ರಿ ಎದುರು ಸಮಸ್ಯೆಗಳ ಸರಮಾಲೆಯನ್ನು ಬಿಚ್ಚಿಟ್ಟರು.

ಸಿಬ್ಬಂದಿಯಿಂದ ಸ್ಥಳೀಯರಿಗೆ ಆಗುತ್ತಿರುವ ತೊಂದರೆಗಳನ್ನು ಆಲಿಸಿ, ಪರಿಹಾರ ಕಂಡುಕೊಳ್ಳಲು ಶೀಘ್ರವೇ ತೀರ್ಥಹಳ್ಳಿಗೆ ಬಂದು ಸಭೆ ಮಾಡುವೆ’ ಎಂದು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

28ವಂದೇ ಮಾತರಂ: ಶಾಸಕ ಚನ್ನಬಸಪ್ಪಗೆ ಸಿ.ಎಂ ತಿರುಗೇಟು

ತೀರ್ಥಹಳ್ಳಿ: ಸಂವಾದದ ಆರಂಭದಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣ ಮಾತ್ರ ಹಾಡಿದ್ದಕ್ಕೆ ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಮೈಕ್ ಬಳಿ ಬಂದ ಅವರು ‘ವಂದೇ ಮಾತರಂ ಗೀತೆಯನ್ನು ಪೂರ್ಣ ಹಾಡದೇ ನಮ್ಮ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಇಂತಹ ಅಪಮಾನ ಮುಂದುವರಿದರೆ ವೇದಿಕೆಯಿಂದ ನಿರ್ಗಮಿಸುವೆ’ ಎಂದು ಹೇಳಿದರು. ಇದಕ್ಕೆ ನೆರೆದ ಜನರಿಂದ ಭಾರೀ ವಿರೋಧ ವ್ಯಕ್ತವಾಯಿತು.’ಹೋ’ ಎಂದು ಕೂಗುತ್ತಾ ಮಾತು ನಿಲ್ಲಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಡಿಕೆ… ಡಿಕೆ… ಎಂಬ ಕೂಗು ಪ್ರತಿಧ್ವನಿಸಿತು. ಮೈಕ್ ಬಳಿ ತೆರಳಿದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಸಿ.ಯೋಗೀಶ್ ಮುಖಂಡ ದೇವೇಂದ್ರಪ್ಪ ಮೈಕ್‌ ತಗ್ಗಿಸಿ ಮಾತು ನಿಲ್ಲಿಸಿದರು. ಇದು ಕೆಲಕಾಲ ಗದ್ದಲಕ್ಕೆ ಕಾರಣವಾಯಿತು.

ಭಾಷಣದ ವೇಳೆ ಈ ವಿಚಾರ ಪ್ರಸ್ತಾಪಿಸಿದ ಮುಖ್ಯಮಂತ್ರಿ ‘ಶಿವಮೊಗ್ಗ ಎಂಎಲ್‌ಎ ನನಗೆ ಬಹಳ ಒಳ್ಳೆಯ ಸ್ವಾಗತ ಕೊಟ್ಟರು. ನಾನು ಇಲ್ಲಿ ಜನರ ಬದುಕಿನ ಕುರಿತು ರಾಜಕಾರಣ ಮಾಡಲು ಬಂದಿರುವೆ; ಅವರಂತೆ ಭಾವನೆಗಳ ಮೇಲೆ ಅಲ್ಲ. ಅದೇಕೆ ಕೆಣಕುತ್ತಿದ್ದಾರೋ ಗೊತ್ತಿಲ್ಲ. ಶಾಸಕರು ಪ್ರತಿಭಟಿಸಿ ಸಭೆಯಿಂದ ಹೊರಗೆ ಹೋಗುವುದಾಗಿ ಹೇಳಿದರೆ ನಾನು ತಡೆಯುವುದಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು.’ಇಲ್ಲಿ ಜನರ ಬದುಕು ಮುಖ್ಯ. ಅದರ ಮೇಲೆ ರಾಜಕಾರಣ ಮಾಡಬೇಕು. ನಿಮ್ಮ ಪಕ್ಷದ ಸಿದ್ಧಾಂತಕ್ಕೆ ಇದು ವೇದಿಕೆಯಲ್ಲ. ಇದೆಲ್ಲ ಇಲ್ಲಿಗೇ ಕೊನೆಯಾಗಲಿ ಎಂದು ವಿನಮ್ರವಾಗಿ ಹೇಳುವೆ’ ಎಂದು ಚಾಟಿ ಬೀಸಿದರು.

[t4b-ticker]
error: Content is protected !!