ತಿರುವನಂತಪುರಂ ಸೆಪ್ಟೆಂಬರ್ 24: ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಭದ್ರತಾ ಕೊಠಡಿಯಿಂದ (Strong Room) 55.72 ಪವನ್ ತೂಕದ ಅಪರೂಪದ ಚಿನ್ನದ ಕಿರೀಟ ಕಾಣೆಯಾಗಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ತಿರುವಾಭರಣಗಳ ಅಧಿಕೃತ ದಾಸ್ತಾನು ಪರಿಶೀಲನೆ (Inventory Audit) ನಡೆಸುತ್ತಿದ್ದ ವೇಳೆ ಈ ಮಹಾ ವಂಚನೆ ದೃಢಪಟ್ಟಿದೆ. ಆಗಸ್ಟ್ 2012 ರಲ್ಲಿ ತಮಿಳುನಾಡಿನ ಚಾರ್ಟರ್ಡ್ ಅಕೌಂಟೆಂಟ್ ಭಕ್ತರ ತಂಡವೊಂದು ಅಯ್ಯಪ್ಪ ಸ್ವಾಮಿಗೆ ಈ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ನೀಡಿತ್ತು. ಕಿರೀಟದ ಒಟ್ಟು ತೂಕ 445.78 ಗ್ರಾಂ (ಸುಮಾರು 55.72 ಪವನ್) ಆಗಿದ್ದು, ಕಿರೀಟಕ್ಕೆ ವಜ್ರವನ್ನು ಹೋಲುವ ಅಪರೂಪದ ಬಿಳಿ ಕಲ್ಲುಗಳನ್ನು ಪೋಣಿಸಲಾಗಿತ್ತು. ದೇವಸ್ಥಾನದ ರಿಜಿಸ್ಟರ್‌ನಲ್ಲಿಯೂ ಇದರ ಬಗ್ಗೆ ಸ್ಪಷ್ಟ ದಾಖಲೆಗಳಿದ್ದವು.
ಆದರೆ, ಪ್ರಸ್ತುತ ಸ್ಟ್ರಾಂಗ್ ರೂಂ ಪರಿಶೀಲಿಸಿದಾಗ ಅಸಲಿ ಚಿನ್ನದ ಕಿರೀಟದ ಬದಲಿಗೆ ನಕಲಿ/ಮುಕ್ಕುಪಂಡ (ಗಿಲ್ಟ್) ಕಿರೀಟ ಪತ್ತೆಯಾಗಿದೆ. ಅಸಲಿ ಕಿರೀಟ 445 ಗ್ರಾಂ ತೂಕವಿದ್ದರೆ, ಈಗ ಸಿಕ್ಕಿರುವ ನಕಲಿ ಕಿರೀಟ ಕೇವಲ 240 ಗ್ರಾಂ ತೂಗುತ್ತಿದ್ದು, ಅಸಲಿ ಚಿನ್ನದ ಕಿರೀಟವನ್ನು ಕದ್ದು ನಕಲಿ ಕಿರೀಟ ತಂದಿಟ್ಟಿರುವುದು ದೃಢಪಟ್ಟಿದೆ. ಇದಷ್ಟೇ ಅಲ್ಲದೆ, ಆರಣ್ಮುಲದಲ್ಲಿರುವ ತಿರುವಾಂಕೂರು ದೇವಸ್ವಂ ಮಂಡಳಿಯ (TDB) ಮುಖ್ಯ ಸ್ಟ್ರಾಂಗ್ ರೂಂನಿಂದ ನಾಲ್ಕು ಪವನ್ ಚಿನ್ನದ ಹಾರ ಹಾಗೂ ತಿರುವನಂತಪುರಂನ ಒಟಿಸಿ ಹನುಮಾನ್ ದೇವಾಲಯದಲ್ಲಿದ್ದ ರತ್ನಖಚಿತ ಬೆಳ್ಳಿಯ ಕೊಂಬುಗಳು ಸಹ ನಾಪತ್ತೆಯಾಗಿವೆ. ಈ ಸಾಲು ಸಾಲು ಕಳವು ಪ್ರಕರಣಗಳು ಭಕ್ತರಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ದೇವಸ್ವಂ ಮಂಡಳಿಯ ಅಧ್ಯಕ್ಷ ಕೆ. ಜಯಕುಮಾರ್ ಅವರು ಉನ್ನತ ಮಟ್ಟದ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ಹೈಕೋರ್ಟ್ ನೇಮಿಸಿದ ಅಮಿಕಸ್ ಕ್ಯೂರಿ ನ್ಯಾಯಮೂರ್ತಿ ಕೆ.ಟಿ. ಶಂಕರನ್ ಅವರ ನೇತೃತ್ವದಲ್ಲಿ ಶಬರಿಮಲೆಯಲ್ಲಿರುವ ಬೆಲೆಬಾಳುವ ವಸ್ತುಗಳ ಅಂತಿಮ ಹಂತದ ದಾಸ್ತಾನು ಪರಿಶೀಲನೆ ನಡೆಯುತ್ತಿರುವಾಗಲೇ ಈ ಅಕ್ರಮ ಬಯಲಾಗಿದೆ.2012 ರಲ್ಲಿ ಕಾಣಿಕೆ ಸ್ವೀಕರಿಸಿದ ಬಳಿಕ ರಶೀದಿ ನೀಡಿ, ಕಿರೀಟವನ್ನು ಅಯ್ಯಪ್ಪ ವಿಗ್ರಹಕ್ಕೆ ತೊಡಿಸಿ ನಂತರ ಸನ್ನಿಧಾನದ ತಾತ್ಕಾಲಿಕ ಸ್ಟ್ರಾಂಗ್ ರೂಂಗೆ ಸ್ಥಳಾಂತರಿಸಲಾಗಿತ್ತು. ನಿಯಮಗಳ ಪ್ರಕಾರ ಅದನ್ನು ಅರಣ್ಮುಲದಲ್ಲಿರುವ ಮಂಡಳಿಯ ಮುಖ್ಯ ಭದ್ರತಾ ಕೊಠಡಿಗೆ ಕಳುಹಿಸಬೇಕಿತ್ತು. ಆದರೆ ಅದನ್ನು ಸ್ಥಳಾಂತರಿಸದೇ ಸನ್ನಿಧಾನದಲ್ಲೇ ಇರಿಸಲಾಗಿತ್ತು. ವಿಚಿತ್ರವೆಂದರೆ ಈ ಸ್ಟ್ರಾಂಗ್ ರೂಂನಲ್ಲಿ ಯಾವುದೇ ಸಿಸಿಟಿವಿ (CCTV) ಕಣ್ಗಾವಲು ಇರಲಿಲ್ಲ.
ಪ್ರತಿವರ್ಷ ಸನ್ನಿಧಾನಕ್ಕೆ ಹೊಸ ಆಡಳಿತಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಸ್ಟ್ರಾಂಗ್ ರೂಂ ತೆರೆಯಲು ಇಬ್ಬರ ಸಮ್ಮುಖ ಮತ್ತು ಪ್ರತ್ಯೇಕ ಕೀಲಿಗಳು ಕಡ್ಡಾಯ. ಪ್ರತಿಯೊಂದು ವಹಿವಾಟನ್ನು ಮಹಜರು ಪುಸ್ತಕದಲ್ಲಿ ದಾಖಲಿಸಬೇಕಾಗುತ್ತದೆ. ಹೀಗಿದ್ದೂ 55 ಪವನ್ ಚಿನ್ನದ ಕಿರೀಟ ಗಾಯಬ್ ಆಗಿರುವುದು ದೇವಸ್ಥಾನದ ಸಿಬ್ಬಂದಿ ಹಾಗೂ ಅಧಿಕಾರಿಗಳ ಭಾಗಿಯಾಗುವಿಕೆಯನ್ನೇ ಬೆಟ್ಟು ಮಾಡುತ್ತಿದ್ದು, ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.















































